ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಬರದ ನಾಡಿನಲ್ಲೊಂದು ಹಸಿರು ಓಯಸಿಸ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಕೊಪ್ಪಳದಿಂದ ಕೂಗಳತೆ ದೂರದಲ್ಲಿರುವ ಗ್ರಾಮ ಹಾಲವರ್ತಿ. ಕೇಂದ್ರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ತೆರಳಬೇಕಾದರೆ ಹಲವು ಜಲ್ಲಿ ಕ್ರಷರ್ ಹೊರಸೂಸುವ ಧೂಳಿನ ನಡುವೆ ಸಾಗಬೇಕು. ಆ ಧೂಳು ಸುತ್ತೆಲ್ಲಾ ಪರಿಸರದಲ್ಲಿ ಪಸರಿಸಿ ಗಿಡ ಮರ ಮತ್ತು ಬೆಳೆಗಳ ಮೂಲ ಸ್ವರೂಪ ಗುರುತು ಹಿಡಿಯುವುದೇ ಕಷ್ಟವಾಗುತ್ತದೆ. ಸುತ್ತ ಮುತ್ತಲೂ ಕಣ್ಣು ಹಾಯಿಸಿದರೇ ಎಲ್ಲವೂ ಕುರುಚಲು ಗಿಡಗಳು. ಇದನ್ನೆಲ್ಲಾ ನೋಡುತ್ತಾ ಸಾಗಿದರೇ ಗ್ರಾಮದಿಂದ ಅನತಿ ದೂರದಲ್ಲಿ ಹಸಿರು ಹೊದ್ದ ಅರಣ್ಯವೊಂದು ಮರುಭೂಮಿಯಲ್ಲಿ ಕಂಡುಬರುವ ಓಯಸಿಸ್ ನಂತೆ ಕಾಣುತ್ತದೆ.

ಅಚ್ಚರಿಯಿಂದ ಒಳಸಾಗಿದರೆ ಆತ್ಮೀಯತೆಯಿಂದ ನಗುನಗುತ್ತಾ ಸ್ವಾಗತಿಸುತ್ತಾರೆ ಶ್ರೀ ಜಡಿಸ್ವಾಮಿ. ಅವರ ದಶಕಗಳ ದುಡಿಮೆಯ ಫಲ ಅಲ್ಲಿ ಎದ್ದು ಕಾಣುತ್ತದೆ. ಸುಮಾರು 14 ಎಕರೆ ಜಮೀನಿನಲ್ಲಿ ಹಲವಾರು ಬೆಳೆಗಳನ್ನು ನಾವು ಕಾಣಬಹುದು. ಹಂಗಾಮಿಗೆ ತಕ್ಕಂತೆ ನೂತನ ತಳಿಗಳನ್ನು ಆಯ್ಕೆ ಮಾಡಿ ತಂದು ಆಸಕ್ತಿಯಿಂದ ವ್ಯವಸಾಯ ಮಾಡುವುದನ್ನು ನಾವು ಕಾಣಬಹುದು. ಅದರ ಜೊತೆಯಲ್ಲಿ £ಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುವುದು ಒಂದೆಕರೆಯಲ್ಲಿ ಎದ್ದು ನಿಂತಿರುವ ಮಿಶ್ರ ಬೆಳೆ ಅರಣ್ಯ. ಪ್ರಮುಖ ಬೆಳೆಗಳಾಗಿ 400 ಸಾಗುವಾನಿ ಮತ್ತು 400 ಶ್ರೀಗಂಧ. ಬದುವಿನ ಸುತ್ತಲೂ ಫಲ ನೀಡುತ್ತಿರುವ 70 ತೆಂಗಿನ ಮರಗಳು. ಇನ್ನು 10-12 ವರ್ಷ ವಯೋಮಾನದ ಸಾಗುವಾನಿ ಮತ್ತು ಶ್ರೀಗಂಧ ಮರಗಳ ಕೊಲ್ಲಿಗಳನ್ನು ಚೆನ್ನಾಗಿ ಸವರಿ ನಡುವಿನ ಜಾಗದಲ್ಲಿ ಜವಾರಿ ಬಾಳೆ, ಹಲಸು, ಕರಿಬೇವು, ನಿಂಬು, ಸೀತಾಫಲ, ನೇರಳೆ, ಮಾವು ಮುಂತಾದ ಫಲ ನೀಡುವ ಗಿಡ ಮರ ಬೆಳೆಸಿ ವರ್ಷವಿಡೀ ಆದಾಯದ ಮೂಲವಾಗಿ ಬೆಳೆಯಲಾಗಿದೆ.

ಪ್ರತಿ ಗಿಡ ಮರಕ್ಕೂ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿ ಜಲ ಸಂರಕ್ಷಣೆ ಮತ್ತು ಸದ್ಬಳಕೆ ಕಾರ್ಯವೂ ನಡೆದಿದೆ. ಅರಣ್ಯದಲೆಲ್ಲಾ ಕಸ ಕೆದರುತ್ತಾ ಹುಳಹುಪ್ಪಟೆ ಆರಿಸುವ 200ಕ್ಕೂ ಹೆಚ್ಚು ಜವಾರಿ ಕೋಳಿಗಳ ಕಲರವ ನೋಡುವುದೇ ಆನಂದ. ಮೂಲೆಯಲ್ಲೆಲ್ಲೊ ತಲೆಬಗ್ಗಿಸಿ ನಿಂತು ಚಿಗುರು ಕಡಿಯುತ್ತಿರುವ ಟಗರು ಮರಿಗಳು ಆ ಆರಣ್ಯದ ಅಂದವನ್ನು ಹೆಚ್ಚಿಸುತ್ತವೆ. ಮರಗಳ ಮೇಲೆ ಆಶ್ರಯ ಪಡೆದಿರುವ ನೂರಾರು ಪಕ್ಷಿಗಳು ಹಾಗು ಮಣ್ಣಿನಲ್ಲಿರುವ ಲಕ್ಷೋಪಲಕ್ಷ ಕೀಟಗಳು ಮತ್ತು ಸೂಕ್ಷ್ಮಾಣು ಜೀವಿಗಳು ಆ ಭೂಮಿಯ ಅಗೋಚರ ಬೆಲೆಯನ್ನು ಅಗಣಿತಗೊಳಿಸಿವೆ. ಶ್ರೀ ಜಡಿಸ್ವಾಮಿಯವರೊಂದಿಗೆ ಅವರ ಮೂವರು ಪುತ್ರಿಯರು ಜೊತೆಗೂಡಿ ಈ ಭೂಸ್ವರ್ಗವನ್ನು ನಿರ್ಮಿಸಿದ್ದಾರೆಂದರೆ ತಪ್ಪಿಲ್ಲ.

ಸಾರ್ ಈ ಅರಣ್ಯ ಬೆಳೆಗಳು ನನಗಲ್ಲ. ಮುಂದಿನ ಪೀಳಿಗೆಗೆ ನಾನಿಟ್ಟಿರುವ ಬ್ಯಾಂಕ್ ಡಿಪಾಸಿಟ್. ಅದನ್ನು ಮುಂದಿನವರು ಅನುಭವಿಸಲಿ. ಅರಣ್ಯ ವೃಕ್ಷಗಳ ನಡುವೆ ಸಿಗುವ ಫಲಗಳಿಂದ ಬರುವ ಆದಾಯ ನನಗೆ ಸಾಕು. ಒಂದು ನಿಂಬೆಗಿಡ ವರ್ಷಕ್ಕೆ 1200-1500 ಕಾಯಿ ಬಿಡುತ್ತದೆ. ಕರಿಬೇವು ತಿಂಗಳಿಗೊಮ್ಮೆ ಕಟಾವಿಗೆ ಬರುತ್ತದೆ. ಉಳಿದಂತೆ ಹಂಗಾಮು ಪೂರ್ತಿ ಒಂದಲ್ಲಾ ಒಂದು ಫಲ ಮಾರಾಟಕ್ಕೆ ಸಿಕ್ಕೇಸಿಗುತ್ತದೆ. 70 ತೆಂಗಿನ ಮರಗಳು ಸರಾಸರಿ 4500 ಕಾಯಿ ಕೊಡುತ್ತವೆ. ದಿನದ ಆದಾಯಕ್ಕೆ ಕೋಳಿಮೊಟ್ಟೆ ಹಾಗು ಆಕಳ ಹಾಲು ಸಿಗುತ್ತಿದೆ. ಮೂರು ತಿಂಗಳಿಗೊಮ್ಮೆ ಟಗರು ವ್ಯಾಪಾರವಾಗುತ್ತದೆ ಎಂದು ತಮ್ಮ ಆದಾಯದ ಲೆಕ್ಕಾಚಾರ ನಮ್ಮ ಮುಂದೆ ಬಿಚ್ಚಿಡುತ್ತಾರೆ ಶ್ರೀ ಜಡೀಸ್ವಾಮಿಯವರು.

-ಡಾ. ಪಿ. ಆರ್ ಬದರಿಪ್ರಸಾದ್

ಸಹಾಯಕ ಪ್ರಾದ್ಯಾಪಕರು (ಕೀಟಶಾಸ್ತ್ರ)

ಕೃಷಿ ಮಹಾವಿದ್ಯಾಲಯ, ಗಂಗಾವತಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು