ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 'ಆಧುನಿಕ' ಕೃಷಿ, 'ವೈಜ್ಞಾನಿಕ' ಹೈನುಗಾರಿಕೆ: ಒಳಿತಾದರೆ ಮಾತ್ರ ತನ್ನದೆನ್ನುತ್ತಾ, ಕೆಡುಕಾದರೆ ತನ್ನದಲ್ಲ ಎನ್ನುವುದು ವೈಜ್ಞಾನಿಕತೆಯೇ? ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಗೋವಿನೊಂದಿಗೆ ಕಳೆದ 40 ವರ್ಷದ ನನ್ನ ಒಡನಾಟವನ್ನು ಇನ್ನಷ್ಟು ಹಂಚಿಕೊಳ್ಳೋಣ  ಅನಿಸಿತು. ಆರು ವರ್ಷದ ಹಿಂದಿನವರೆಗೂ ಭಯೋತ್ಪಾದನೆ ಮಾಡುವುದು, ಆತ್ಮಹತ್ಯಾ ಬಾಂಬ್ ದಾಳಿ ಇದಕ್ಕೆಲ್ಲ ಕಾರಣ ಬ್ರೈನ್ ವಾಶ್ (ಮೆದುಳು ತೊಳೆಯುವುದು) ಅಂತ ಗೊತ್ತಿತ್ತು. ಆರು ವರ್ಷದಿಂದ ಈಚೆಗೆ ಅರ್ಥ ಆಗುತ್ತಾ ಇದೆ ನಾವೆಲ್ಲರೂ ನಮ್ಮ ನಮ್ಮ ಕ್ಷೇತ್ರದಲ್ಲಿ ಬ್ರೈನ್ವಾಶ್ ಆದವರೇ. ಎಲ್ಲರೂ ಒಪ್ಪುತ್ತೀರೋ ಬಿಡುತ್ತೀರ ಗೊತ್ತಿಲ್ಲ ನನಗೆ ಕಂಡ ವಿಚಾರವನ್ನು ನಾನು ತಿಳಿಸಿ ಬಿಡುತ್ತೇನೆ.

ಆಧುನಿಕ ವೈಜ್ಞಾನಿಕ ಕೃಷಿಯನ್ನು, ವೈಜ್ಞಾನಿಕ ಹೈನುಗಾರಿಕೆಯನ್ನು ಹೇಳಿಕೊಟ್ಟದ್ದು  ವಿಜ್ಞಾನ. ಈಗ ವಿಜ್ಞಾನವನ್ನು ಸಮರ್ಥಿಸುವವರಲ್ಲಿ ಕೇಳಿ ನೋಡಿ, ಎಲ್ಲಾ ದೋಷಗಳಿಗೆ ಕಾರಣ ವಿಜ್ಞಾನವಲ್ಲ ವಿಜ್ಞಾನದ ದುರುಪಯೋಗ ಅಂತ ಅನ್ನುತ್ತಾರೆ. ಒಂದು ವ್ಯವಸ್ಥೆಯನ್ನು ಬದಲಾಯಿಸಿದಾಗ ಆದ ಒಳಿತಿನ ಜವಾಬ್ದಾರಿಯನ್ನು ಇಟ್ಟುಕೊಂಡು ಕೆಡುಕಿನ ಜವಾಬ್ದಾರಿಯನ್ನು ದುರುಪಯೋಗ ಎಂಬ ಹೆಸರಿನಲ್ಲಿ ಪಲಾಯನವಾದವನ್ನು ಮಾಡುತ್ತಾರೆ. "ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡಿದ ಅರ್ಜುನನನ್ನು ತೆಗಳಿ ದುರುಪಯೋಗಗೊಳಿಸಿದ ಅಶ್ವತ್ಥಾಮನನ್ನು ಹೊಗಳಿದಂತೆ."

ಕೃಷಿ ಕ್ಷೇತ್ರದಲ್ಲೇ ನೋಡಿ, ಯಾವುದೇ ರಾಸಾಯನಿಕಗಳನ್ನು ಬಳಸದೇ, ವಿಷಗಳನ್ನು ಸಿಂಪಡಿಸದೆ ಕೃಷಿಯಲ್ಲಿ ಅಚ್ಚುಕಟ್ಟಾದ ಜೀವನವನ್ನು ನಡೆಸುತ್ತಿರುವ ಕೃಷಿಕರು ಕಣ್ಣೆದುರೇ ಉದಾಹರಣೆ ಇದ್ದರೂ, ರಾಸಾಯನಿಕಗಳಿಲ್ಲದೆ ಕೃಷಿ ಸಾಧ್ಯವೇ ಇಲ್ಲ ಅಂತ ಅನ್ನುವವರು ದೊಡ್ಡಮಟ್ಟದಲ್ಲಿ ಇದ್ದಾರೆ.

ಹೈನುಗಾರಿಕೆಯಲ್ಲಿ ನೋಡಿ. ಕೃತಕ ಗರ್ಭಧಾರಣೆಯ ಮೂಲಕ ದನಗಳ ಸಾಂಗತ್ಯ ಸುಖವನ್ನು ಕಸಿದಾಗ, ಹುಟ್ಟಿದ ಕರುವನ್ನು ತಾಯಿಯಿಂದ ಬೇರ್ಪಡಿಸಿ ದೂರ ಕಟ್ಟಿದಾಗ ದುಃಖ ಅರ್ಥ ಆಗಲೇ ಇಲ್ಲ. ದೂರವಿದ್ದ ಕರುಗಳಿಗೆ ಬಾಟ್ಲಿಯಲ್ಲಿ ಹಾಲು ಕುಡಿಸಿ ತಾಯಿಯ ಮೊಲೆಯೂಡುವ ಆಸೆಯಿಂದ ತನ್ನ ನಾಲಗೆಯನ್ನು ಮೇಲ್ದುಟಿಗೆ ತಂದು ಪಚ ಪಚ ಶಬ್ದ ಮಾಡುವಾಗ ಅದರ ಆಸೆ ಏನೆಂದು ನಮಗೆ ಗೊತ್ತಾಗಲಿಲ್ಲ. ಗಂಡು ಕರು ಗಳಂತೂ ಅರೆ ಹೊಟ್ಟೆಯಿಂದ ಕೂಗುವ ಆಕ್ರಂದನ ನಮಗೆ ಕೇಳಿಸಲೇ ಇಲ್ಲ. ನಾಲ್ಕು ದಿನದ ಲಾಕ್ಡೌನ್ ಇಂದಾಗಿ ಸ್ವಾತಂತ್ರ್ಯ ಹೋಯಿತೆಂದು ಕೂಗಾಡುವ ನಾವು ಜೀವನಪರ್ಯಂತ ಬಂಧನದಲ್ಲಿದ್ದ ದನಗಳ ನೋವು ಅರ್ಥ ಮಾಡಿಕೊಳ್ಳಲೇ ಇಲ್ಲ.   ಹಾಲಿನಲ್ಲಿ ಮೂರು ಡಿಗ್ರಿಗಿಂತ ಹೆಚ್ಚು ಕೊಬ್ಬು ಬಾರದ ದನಗಳನ್ನ ಪರಿಚಯಿಸಿ, 4 ಡಿಗ್ರಿ ಕೊಬ್ಬು ಇಲ್ಲದಿದ್ದರೆ ಗುಣಮಟ್ಟದ ಹಾಲು ಅಲ್ಲ ಎಂದು ತಿರಸ್ಕರಿಸುವಾಗ ಅದನ್ನು ತೀವ್ರವಾಗಿ ಪ್ರಶ್ನಿಸಲಿಲ್ಲ. ಅವರು ಕೊಟ್ಟ ಏನೇನೋ ಪುಡಿಗಳನ್ನು ಹಾಕಿ ಮತ್ತೆ ನಾಲ್ಕು ಕೊಬ್ಬಿಗೆ ಬರಿಸಿ ಕೊಡುವಾಗ ಇದು ಗುಣಮಟ್ಟದ ಹಾಲು ಹೇಗೆ ಆಗಲು ಸಾಧ್ಯ ಎಂದು ಕೇಳಲೇ ಇಲ್ಲ.

ಈ ಎಲ್ಲಾ ನೋವಿನಿಂದ ಕೂಡಿದ ಹಾಲು ಹಾಲಲ್ಲ ಹಾಲಾಹಲ ಎಂದು ಹೇಳಿದ ಅನೇಕ ಜ್ಞಾನಿಗಳ ಮಾತು ನಮಗೆ ಕೇಳಿಸಲೇ ಇಲ್ಲ. ಹಾಲು ಅಮೃತ ಸಮಾನ ಅಮೃತ ಯಾವಾಗಲೂ ಪ್ರೀತಿಯಿಂದ ಬರಬೇಕಲ್ಲದೇ ನೋವಿನಿಂದಲ್ಲ ಎಂದು ಆಂದೋಳನದ ಮೂಲಕವಾಗಿ ದೇಸಿ ದನಗಳ ಬಗ್ಗೆ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡಿದ ಗುರು ರಾಘವೇಶ್ವರ ಶ್ರೀಗಳ ವಾಣಿ ನಮಗೆ ಅರ್ಥವಾಗಲಿಲ್ಲ. ಇದೆಲ್ಲವೂ ತೀವ್ರವಾದ ಬ್ರೈನ್ ವಾಷ್‌ನ ಪರಿಣಾಮವಲ್ಲವೇ?

ಹೀಗೆ ಎಲ್ಲದಕ್ಕೂ ಕಣ್ಣು-ಕಿವಿ ಬಂದು ಮಾಡಿಕೊಂಡಿದ್ದ ನನಗೆ ತೀವ್ರವಾದ ಜನಬಲದ (ಆಳು) ಸಮಸ್ಯೆ ಉಂಟಾಯಿತು. ಜನ ಬಲವಿಲ್ಲದೇ ಹೈನುಗಾರಿಕೆ ದು:ಸ್ಸಾಹಸವೇ ಸರಿ. ಈಗ ನನಗಿದ್ದ ಆಯ್ಕೆ ದನಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಅಲ್ಲ ಸಾಕಣೆಯಿಂದ ವಿಮುಖನಾಗುವುದು. ಆದರೆ ನಾನು ನಂಬಿದ ಸಾವಯವ ಕೃಷಿಗೆ ದನಗಳು ತೀರಾ ತೀರಾ ಅಗತ್ಯ ಇದ್ದುದರಿಂದ ತುಂಬಾ ಯೋಚಿಸತೊಡಗಿದೆ. ಆಗ ನಮ್ಮ ಕುಲಗುರುಗಳ ಮಾತುಗಳು ಕೇಳಿಸತೊಡಗಿತು. ತುಂಬಾ ಅಪ್ಯಾಯಮಾನವಾಯಿತು. ಚಿಕ್ಕಂದಿನಿಂದಲೂ ದೇಶೀ ದನಗಳ ಬಗ್ಗೆ ನ್ಯೂನತೆಗಳನ್ನೇ ಕೇಳುತ್ತಿದ್ದ ನನಗೆ, ಸ್ನೇಹಿತರಿಂದ ಒಳ್ಳೆಯ ನುಡಿಗಳನ್ನು ಕೇಳಿದೆ. ಹಾಗೇ ಯೋಚನೆ ಮಾಡುತ್ತಿದ್ದಂತೆ ನನ್ನ ಆತ್ಮೀಯ ಗೆಳೆಯ ಶಿವಸುಬ್ರಮಣ್ಯರು, ಸದಾ ಶಿವಣ್ಣ ನನ್ನಲ್ಲಿ ಒಂದು ದನವಿದೆ ಹಾಲು ಕರೆಯುವುದರಿಂದ ಹಿಡಿದು ಎಲ್ಲದರಲ್ಲೂ ಬಲು ಪಾಪ. ಆದರೆ ಮಹಾ ಕಳ್ಳಿ, ಹೊರಗೆ ಬಿಟ್ಟಲ್ಲಿ ಹೇಗಾದರೂ ಬೇಲಿ ಹಾರಿ ಇನ್ನೊಬ್ಬರ ತೋಟಕ್ಕೆ ನುಗ್ಗುವುದು ಖಂಡಿತ. ಹಾಗಾಗಿ ಕೊಡುತ್ತಿದ್ದೇನೆ ನಿಮಗೆ ಬೇಕೆ? ಅಂದರು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಕೊಟ್ಟದ್ದು ಅದನ್ನೇ. ಹಾಗಾಗಿತ್ತು ಅಂದು ನನಗೆ. ಕಳ್ಳಿಯಾದರೇನು? ಸುಳ್ಳಿಯಾದರೇನು? ಕಟ್ಟಿ ಹಾಕುವ ನನಗೆ ಯಾವುದೇ ಭಯವಿಲ್ಲ ಅಂತ ಅಂದುಕೊಂಡು ಆ ಸುಂದರಿ ದನವನ್ನು ಮುದ್ದಾದ ಹೆಣ್ಣು ಕರುವಿನೊಂದಿಗೆ ನಮ್ಮ ಮನೆಯ ಹಟ್ಟಿಯಲ್ಲಿ ಸೇರಿಸಿದೆ. 

ಹೀಗೆ ಒಂದೇ ದಿಕ್ಕಿನಲ್ಲಿ ತೊಳೆದ ಮೆದುಳನ್ನು ಇನ್ನೊಂದು ದಿಕ್ಕಿನತ್ತ ತೊಳೆಯ ಹೊರಟೆ. ಆ ಕತೆ ಏನೆಂದು ಮುಂದೆ ನೋಡೋಣ.

-ಎ.ಪಿ. ಸದಾಶಿವ ಮರಿಕೆ

Post a Comment

ನವೀನ ಹಳೆಯದು