ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನಾನು ಕೊರೊನಾ ಗೆದ್ದ ಬಗೆ: ಸಂಸ್ಕೃತ ಅಧ್ಯಾಪಕರ ಅನುಭವ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ಭಗವಂತನನ್ನು ಅರ್ಥಮಾಡಿಕೊಳ್ಳಲು ವಿವಿಧ ಮಾರ್ಗಗಳನ್ನು ಅನುಸರಿಸಿದಂತೆ ಕಣ್ಣಿಗೆ ಕಾಣದ ಈ ಕೊರೋನಾ ವೈರಸ್ ನ್ನು ಅರ್ಥ ಮಾಡಿಕೊಳ್ಳುವುದು ಎಲ್ಲರಿಗೂ ಒಂದು ಸವಾಲೇ ಆಗಿದೆ. ಕಣ್ಣಿಗೆ ಕಾಣದು, ಕೈಗೆ ಸಿಕ್ಕದು. ದೇಹಕ್ಕೆ ಪ್ರವೇಶಿಸಿದ ಮೇಲೆಯೇ ತನ್ನ ಪ್ರಭಾವವನ್ನು ತೋರಿಸುವಂತಹ ರಾಕ್ಷಸ ರೂಪಿ ಇದು. ಇಂತಹ ರಾಕ್ಷಸಿ ಸ್ವರೂಪದ ಈ ವೈರಸ್ ನನ್ನ ದೇಹವನ್ನು ಪ್ರವೇಶಿಸಿತು. ಅತ್ಯಧಿಕ ಜ್ವರ, ಸುಸ್ತು ಇವುಗಳಿಂದ ಜರ್ಝರಿತನಾದ ನಾನು ಮನೆಯಲ್ಲೇ ಇದ್ದು ಧೈರ್ಯ ತಂದುಕೊಳ್ಳೋಣ ಎಂದರೆ ಎಲ್ಲಿ ಏನಾದರೂ ಆಗುವುದೋ ಎನ್ನುವ ಭಯ. ಖಾಸಗಿ ಆಸ್ಪತ್ರೆಗೆ ಸೇರೋಣ ಎಂದರೆ ಬಿಲ್ಲಿನ ಭಯ. ಸರಕಾರಿ ಆಸ್ಪತ್ರೆಗೆ ಸೇರೋಣ ಎಂದರೆ ಅಲ್ಲಿಯ ವ್ಯವಸ್ಥೆಯ ಬಗ್ಗೆ ಅಜ್ಞಾನ. ಇತ್ತ ದರಿ ಇತ್ತ ಪುಲಿ ಎನ್ನುವ ಇಕ್ಕಟ್ಟಿನ ಸ್ಥಿತಿ.

ಇಂತಹ ಸಂದರ್ಭದಲ್ಲಿ ನಾನು ಧೈರ್ಯ ಮಾಡಿ ಸೇರಿದ್ದು ಕುಂದಾಪುರದ ತಾಲೂಕಾ ಸಾರ್ವಜನಿಕ ಚಿಕಿತ್ಸಾಲಯಕ್ಕೆ. ಬಹಳ ಸಮಯದಿಂದ ಆಸ್ಪತ್ರೆಯ ಕಡೆಗೆ ಮುಖಮಾಡಿ ನೋಡದ ನನಗೆ ಎಲ್ಲಿಯದೋ ಅವ್ಯಕ್ತ ಭಯ. ದಿಕ್ಕು ಕಾಣದ ಸ್ಥಿತಿ. ಮನದ ಮೂಲೆಯ ಚಿಂತೆಯಲ್ಲಿ ಮುದುಡಿಹೋದ ನನಗೆ ಸಾಂತ್ವನ ನೀಡಿದವರು ಕೋಟದ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀ ಕೃಷ್ಣಪ್ರಸಾದ್. ಅವರ ಆತ್ಮೀಯತೆ ಹಾಗೂ ಮಾರ್ಗದರ್ಶನಗಳಿಗೆ ನಾನು ಚಿರಋಣಿ.

ಮೊದಲಿನಿಂದಲೂ ಸರ್ಕಾರಿ ವೈದ್ಯಕೀಯ ವ್ಯವಸ್ಥೆಯಲ್ಲಿ ತುಂಬ ವಿಶ್ವಾಸವಿಟ್ಟವನು ನಾನು. ಕುಂದಾಪುರದ ಸಾರ್ವಜನಿಕ ಆಸ್ಪತ್ರೆ ಜಿ. ಶಂಕರ್ ಹೆಸರಿನ ಭವ್ಯವಾದ ಬಂಗಲೆ. ಸ್ವಚ್ಛತೆಯ ವಿಚಾರದಲ್ಲಿ ಯಾವ ಖಾಸಗಿ ಆಸ್ಪತ್ರೆಗೂ ಒಂದಿನಿತೂ ಕಡಿಮೆ ಇಲ್ಲ. ಸಿಬ್ಬಂದಿಗಳ ಸೌಜನ್ಯಗುಣ ಕೂಡ ಆದರ್ಶಮಯವಾದುದು.  

ಇವರು ವೈದ್ಯರಲ್ಲ; ದೇವರು:

ಡಾ. ನಾಗೇಶ್ ಮುಖ್ಯ ವೈದ್ಯಾಧಿಕಾರಿಗಳು, ಡಾ. ವಿಜಯಶಂಕರ್, ರಾತ್ರಿ ಪಾಳಿಯ ಡಾ. ಆಶಿತ್, ಡಾ. ರಜತ್ ಇವರೊಂದಿಗೆ ನಗುಮೊಗದ ಸೇವೆಯ ದಾದಿಯರು- ಎಲ್ಲ ರೋಗಿಗಳನ್ನು ದೇವರಂತೆ ಕಾಣುವ ಸಹನೆಯಿಂದ ಅವರ ಭಾವನೆಗಳನ್ನು ಆಲಿಸುವ ಅದಕ್ಕೆ ತಕ್ಕಂತೆ ಸ್ಪಂದಿಸುವ ಸಹೃದಯಿಗಳು. ದರ್ಪದ ಮಾತುಗಳನ್ನು ಇಲ್ಲಿ ಕೇಳಿಯೇ ಇಲ್ಲ. ಕಾರ್ಯಾಲಯದ ಸಿಬ್ಬಂದಿಗಳೂ ಸೌಜನ್ಯ ಮೂರ್ತಿಗಳೇ. ಆತ್ಮೀಯತೆಯೇ ಇವರ ಆಸ್ತಿ. ಇಲ್ಲಿಗೆ ದಾಖಲಾದ ಪ್ರತಿಯೊಬ್ಬ ರೋಗಿಯೂ ಚೆನ್ನಾಗಿ ಶುಶ್ರೂಷೆಯನ್ನು ಪಡೆದು ತುಂಬು ಮನಸ್ಸಿನಿಂದ ಹಾರೈಸಿ, ಸಮಾಧಾನ ಪಟ್ಟುಕೊಂಡು ಮನೆಗೆ ತೆರಳುತ್ತಿದ್ದರು.

ಖರ್ಚನ್ನು ಭರಿಸಲಾಗದೆ ಆರೋಗ್ಯಕ್ಕಾಗಿ ಅಲೆದಾಡುವ ಅವೆಷ್ಟೋ ರೋಗಿಗಳ ಪಾಲಿಗೆ ಇಂತಹ ಸಾರ್ವಜನಿಕ ಆಸ್ಪತ್ರೆಯು ಸಂಜೀವಿನಿಯಾಗಿದೆ. ಈ ಆಸ್ಪತ್ರೆಗೆ ಸರ್ಕಾರದಿಂದ, ಸಂಘ-ಸಂಸ್ಥೆಗಳಿಂದ ಹೇರಳವಾದ ನೆರವಿನ ಹಸ್ತ ಚಾಚಿ ಬರಲಿ ಎಲ್ಲರಿಗೂ ಒಳಿತಾಗಲಿ. 

ಈ ಪುಟ್ಟ ಲೇಖನದ ಮೂಲಕ ಡಾ. ನಾಗೇಶ್ ಹಾಗೂ ಡಾ. ವಿಜಯಶಂಕರ್ ಅವರ ಅನನ್ಯ ಸೇವೆಗೆ ನನ್ನ ಕೃತಜ್ಞತೆಯ ಕುಸುಮಾಂಜಲಿ.

-ಶಂಭು ಭಟ್ಟ,

ಸಂಸ್ಕೃತ ಅಧ್ಯಾಪಕರು,

ವಿವೇಕ ಪದವಿಪೂರ್ವ ಕಾಲೇಜು, ಕೋಟ

Post a Comment

ನವೀನ ಹಳೆಯದು