ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 'ಗೀತಾಪರಿವಾರ'ದಿಂದ ಉಚಿತ ತರಗತಿ: ಕೂಡಲೇ ನೋಂದಾಯಿಸಿಕೊಳ್ಳಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಮರಾಠಿಯಲ್ಲಿ ಬರೋಬ್ಬರಿ 74 ! ಕನ್ನಡದಲ್ಲಿ ಬರೀ 5 ತರಗತಿಗಳಿದ್ದುವು!

========

‘ಗೀತಾ ಪರಿವಾರ’ವು ಆನ್‌ಲೈನ್‌ನಲ್ಲಿ ಕನ್ನಡವೂ ಸೇರಿದಂತೆ 10 ಬೇರೆಬೇರೆ ಭಾಷೆಗಳಲ್ಲಿ ನಡೆಸುವ ಭಗವದ್ಗೀತೆ ಕಲಿಕೆಯ ಉಚಿತ ಅಭಿಯಾನದಲ್ಲಿ ಮೊನ್ನೆ ಏಪ್ರಿಲ್ ತಿಂಗಳಲ್ಲಿ ಆರಂಭವಾಗಿ ಮುಗಿದ Level-1 ಬ್ಯಾಚ್‌ನಲ್ಲಿ ಮರಾಠಿ ಭಾಷೆಯಲ್ಲಿ ತರಗತಿಗಳು ಎಷ್ಟಿದ್ದವು ಗೊತ್ತೇ? ಬರೋಬ್ಬರಿ 74! ಗುಜರಾತಿ, ಹಿಂದೀ, ಮತ್ತು ಇಂಗ್ಲಿಷ್‌ನವೂ ಹೆಚ್ಚೂಕಡಿಮೆ ತಲಾ 50ರಷ್ಟು! ಕನ್ನಡದವು ಎಷ್ಟೆಂದು ಊಹಿಸಿ. ಬರೀ 5.  ಹೀಗೇಕೆ? ವಿಚಿತ್ರವೇನೆಂದರೆ ಭಾರತದಲ್ಲಿ ಯಾವುದಾದರೂ ಉಚಿತ ಸೇವೆ/ಸೌಲಭ್ಯವನ್ನು ವಿವಿಧ ಭಾಷೆಗಳಲ್ಲಿ ಒದಗಿಸಿದಾಗ ಒಂದುವೇಳೆ ಅದರಲ್ಲಿ ಕನ್ನಡ ಕಾಣಿಸಿಕೊಳ್ಳದಿದ್ದರೆ ಜನ ಬೊಬ್ಬೆ ಹೊಡೆಯುತ್ತಾರೆ. ಆದರೆ ಕನ್ನಡವೂ ಇದ್ದರೆ ಅದಕ್ಕೆ ಗಿರಾಕಿಗಳೇ ಇಲ್ಲ! ಏಕಿರಬಹುದು? ಕನ್ನಡಿಗರು ಅಲ್ಪತೃಪ್ತರೇ? ಅಂತರ್ಮುಖಿಗಳೇ? ಒಂಥರ ಕೀಳರಿಮೆಯವರೇ? ಖಂಡಿತ ಅಲ್ಲ. ಆದರೆ ನಿರ್ದಿಷ್ಟ ಕಾರಣವೇನೆಂದು ಯಾರಿಗೂ ಗೊತ್ತಿಲ್ಲ!

ಇರಲಿ, ಇದೀಗ ಮೇ 24ರಿಂದ ಮತ್ತೆ ಹೊಸದಾಗಿ Level-1 ತರಗತಿಗಳು ಆರಂಭವಾಗುತ್ತಿವೆ. ಕನ್ನಡದಲ್ಲೂ ಇರುತ್ತವೆ. ನೋಂದಣಿಗೆ ಕೊನೆಯ ದಿನಾಂಕ ಬುಧವಾರ 19 ಮೇ 2021. ವಿವರಗಳು ಈ ಕೆಳಗಿನ ಪೋಸ್ಟರ್‌ನಲ್ಲಿ ಮತ್ತು ಪತ್ರಿಕಾ ಪ್ರಕಟಣೆಯಲ್ಲಿ ಇವೆ. ಈಬಾರಿ ವಿಜಯವಾಣಿ, ವಿಜಯಕರ್ನಾಟಕ, ಮತ್ತು ವಿಶ್ವವಾಣಿ - ಕನ್ನಡದ ಈ ಪ್ರಮುಖ ದಿನಪತ್ರಿಕೆಗಳೂ ‘ಗೀತಾಪರಿವಾರ’ದ ಉಚಿತ ತರಗತಿಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವುದರಲ್ಲಿ ಸಹಕಾರ ನೀಡಿವೆ. ಮಾತ್ರವಲ್ಲ ಈ ಪತ್ರಿಕೆಗಳ ಕೆಲವು ಪತ್ರಕರ್ತರೂ ಗೀತೆ ಕಲಿಕೆಗೆ ನೋಂದಾಯಿಸಿಕೊಂಡಿದ್ದಾರೆ! 

ಈಗ ನೀವು ಕಾರ್ಯೋನ್ಮುಖರಾಗಬೇಕು. ನೀವೂ ಈ ತರಗತಿಗಳಿಗೆ ನೋಂದಾವಣೆ ಮಾಡಿಕೊಂಡು ಭಗವದ್ಗೀತೆಯ ಅಮೃತಫಲದ ಸವಿಯನ್ನನುಭವಿಸಿ. ಒಂದುವೇಳೆ ನೀವು ಈಗಾಗಲೇ ಗೀತಾಪರಿವಾರದಿಂದ ಗೀತೆ ಕಲಿಕೆಯ ಫಲಪ್ರಯೋಜನ ಪಡೆಯುತ್ತಿರುವವರಾದರೆ ನಿಮ್ಮ ಇಷ್ಟಮಿತ್ರಬಂಧುಬಾಂಧವರಿಗೆ ಈ ಸಂದೇಶವನ್ನು ತಲುಪಿಸಿ. ಅವರೂ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಿ. ಕೋವಿಡ್‌ ತಂದೊಡ್ಡಿದ ಸಂಕಷ್ಟಕಾಲದಲ್ಲಿ ಇದಕ್ಕಿಂತ ಉತ್ತಮವಾದ ನೆಮ್ಮದಿಯ ಮತ್ತು ಧೈರ್ಯಸ್ಥೈರ್ಯ ವೃದ್ಧಿಸುವ ಸಂಪನ್ಮೂಲವು ಇನ್ನೊಂದು ಸಿಗಲಿಕ್ಕಿಲ್ಲ.

* * *

ಭಗವದ್ಗೀತೆ: ಉಚಿತ ಆನ್‌ಲೈನ್ ತರಗತಿಗಳು ಮೇ 24ರಿಂದ

ಶ್ರೀ ಗೋವಿಂದದೇವ ಗಿರಿ ಜೀ ಮಹಾರಾಜ್ ಅವರು ಭಗವದ್ಗೀತೆಯ ಪ್ರಚಾರಕ್ಕೆಂದೇ 1986ರಲ್ಲಿ ಆರಂಭಿಸಿದ ‘ಗೀತಾ ಪರಿವಾರ’ ಅಭಿಯಾನವು ಕಳೆದ ವರ್ಷ ಜೂನ್ 2020ರಿಂದ ಆನ್‌ಲೈನ್‌ನಲ್ಲಿ ಉಚಿತವಾಗಿ ಭಗವದ್ಗೀತೆ ಕಲಿಕೆಯ ತರಗತಿಗಳನ್ನು ನಡೆಸುತ್ತಿದೆ. ಇದುವರೆಗೆ ಪ್ರಪಂಚದ 80ಕ್ಕೂ ಹೆಚ್ಚಿನ ದೇಶಗಳ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಈ ವಿಧಾನದಲ್ಲಿ ಗೀತೆಯ ಕಲಿಕೆ ಆರಂಭಿಸಿ ಮುಂದುವರಿಸಿದ್ದಾರೆ. ದೇಶವಿದೇಶಗಳಲ್ಲಿ ನೆಲೆಸಿದ 2000ಕ್ಕೂ ಅಧಿಕ ಸಂಖ್ಯೆಯ ಸ್ವಯಂಸೇವಕರು ಪ್ರಶಿಕ್ಷಕರಾಗಿ, ತಾಂತ್ರಿಕ ಸಹಾಯಕರಾಗಿ, ಸಮೂಹ ನಿರ್ವಹಣಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗೀತೆಯ ಶ್ಲೋಕಗಳನ್ನು ಶುದ್ಧ ಸಂಸ್ಕೃತ ಉಚ್ಚಾರದ ಸಮೇತ ಹಿಂದೀ, ಇಂಗ್ಲಿಷ್, ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಕಲಿಸುವುದು ಗೀತಾ ಪರಿವಾರದ ಉದ್ದೇಶ.

ಗೀತೆ ಕಲಿಕೆಯ ಆರಂಭಿಕ ಸ್ತರದ (ಲೆವೆಲ್-1) ಹೊಸ ತರಗತಿಗಳು ಸೋಮವಾರ 24 ಮೇ 2021ರಿಂದ ಆರಂಭವಾಗುತ್ತಿವೆ. ಇದರ ಮುಖ್ಯಾಂಶಗಳು ಹೀಗಿವೆ:

● ಮೊದಲ ಸ್ತರದಲ್ಲಿ ಗೀತೆಯ 12ನೆಯ ಮತ್ತು 15ನೆಯ ಅಧ್ಯಾಯಗಳನ್ನು ಕಲಿಸಲಾಗುತ್ತದೆ. ಕಲಿಕೆಗೆ ಸಂಸ್ಕೃತ ಭಾಷೆ ತಿಳಿದಿರಬೇಕಾದ ಅಗತ್ಯವಿಲ್ಲ.   

● ವಾರದಲ್ಲಿ 5 ದಿನ, ಸೋಮವಾರದಿಂದ ಶುಕ್ರವಾರದವರೆಗೆ, ಝೂಮ್ ಮೂಲಕ ತಲಾ 40 ನಿಮಿಷಗಳ ಒಟ್ಟು 20 ತರಗತಿಗಳಿರುತ್ತವೆ.

● ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ದಿನದಲ್ಲಿ 10 ಬೇರೆಬೇರೆ ಸಮಯದ ಆಯ್ಕೆ ಸಾಧ್ಯವಿರುತ್ತದೆ.

ಕನ್ನಡ, ಹಿಂದೀ, ಇಂಗ್ಲಿಷ್, ಮರಾಠಿ, ಗುಜರಾತಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ, ಒಡಿಯಾ- ಹೀಗೆ 10 ಭಾಷೆಗಳಲ್ಲಿ ತರಗತಿಗಳು ನಡೆಯುತ್ತವೆ.

● ವಾರಾಂತ್ಯಗಳಲ್ಲಿ ಹಿಂದೀ ಮತ್ತು ಇಂಗ್ಲಿಷ್‌ನಲ್ಲಿ ಗೀತೆಯ 12ನೆಯ ಮತ್ತು 15ನೆಯ ಅಧ್ಯಾಯಗಳ ಅರ್ಥವ್ಯಾಖ್ಯಾನ, ಸಂಸ್ಕೃತ ಉಚ್ಚಾರ, ಪ್ರಾಥಮಿಕ ವ್ಯಾಕರಣದ ತರಗತಿಗಳಿರುತ್ತವೆ.

● ಪ್ರತಿಯೊಂದು ಭಾಷೆಯ ಪ್ರತಿಯೊಂದು ಸಮಯದ ತರಗತಿಗಳಿಗೆ ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚಿಸಿ ಆಯಾ ಭಾಷೆಗಳಲ್ಲಿ ಅಧ್ಯಾಯಗಳ ಪಿಡಿಎಫ್, ಆಡಿಯೊ, ವಿಡಿಯೊ ಮತ್ತು ಎಲ್ಲ ಮಾಹಿತಿಯನ್ನು ಹಂಚಲಾಗುತ್ತದೆ.

● ಮೊದಲ ಸ್ತರದ ಕೊನೆಯಲ್ಲಿ ಗೀತೆಯ 12ನೆಯ ಮತ್ತು 15ನೆಯ ಅಧ್ಯಾಯಗಳನ್ನು ಓದಿ ವಿಡಿಯೊ ಮಾಡಿ ಕಳುಹಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ 'ಗೀತಾಗುಂಜನ’ ಇ-ಪ್ರಮಾಣಪತ್ರ ನೀಡಲಾಗುತ್ತದೆ.

● ವಯಸ್ಸು, ಲಿಂಗ, ಪ್ರಾದೇಶಿಕತೆ, ಸಾಮಾಜಿಕ ಹಿನ್ನೆಲೆ ಮುಂತಾದ ಯಾವ ಭೇದವಿಲ್ಲದೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಪ್ರಥಮ ಸ್ತರದ ಬಳಿಕದ ಮೂರು ಸ್ತರಗಳಿಗೂ ಉಚಿತ ಪ್ರವೇಶ. ಅಲ್ಲಿಗೆ ಗೀತೆಯ ಎಲ್ಲ 18 ಅಧ್ಯಾಯಗಳ ಕಲಿಕೆ ಆಗುತ್ತದೆ. 

* * *

ಆಸಕ್ತರು ಈ ಲಿಂಕ್‌ ಬಳಸಿ ನೋಂದಾವಣೆ ಪತ್ರ ಸಲ್ಲಿಸಬಹುದಾಗಿದೆ. ಪ್ರವೇಶಕ್ಕೆ ಕೊನೆಯ ದಿನಾಂಕ: 19 ಮೇ 2021 

https://learngeeta.com/reg/ 

-ಶ್ರೀವತ್ಸ ಜೋಷಿ, ವಾಷಿಂಗ್ಟನ್


Post a Comment

ನವೀನ ಹಳೆಯದು