ಮುಕ್ತಕ ಪಂಚಕಂ
~~~~
ಮನೆಯೊಳಗೆ ಮಕ್ಕಳನು ಮೇಣ್ ಹಿರಿಯಜೀವಿಗಳ
ಮನತುಂಬಿ ಮಮತೆಯಲಿ ಸಲಹುತಿರ ಬೇಕು |
ಧನಕನಕ ಲೆಕ್ಕವನು ತೊರೆದಿರಲು ಮನಹಗುರ
ನಿನಗದುವೆ ಹರಿಸೇವೆ - ಪುಟ್ಟಕಂದ || ೧ ||
ಮಾತುಗಳು ಬರಬೇಕು ಹೃದಯದೊಳ ಸೆಲೆಯಾಗಿ
ಖಾತೆಗಳ ತೆರೆಯಲಿಕೆ ಧನಕನಕ ಸಾಕು |
ಮೋತೆ ಚೆನ್ನಾಗಿರಲು ಬಾಳೆಗೊನೆ ಹಸನಕ್ಕು
ನೀತಿಯನು ತೊರೆಯದಿರು - ಪುಟ್ಟಕಂದ || ೨ ||
ಓದಿನಲಿ ಅಭಿರುಚಿಯೆ ಇಲ್ಲದವ ಬರೆಯುವನೆ
ಕಾದುವಿಕೆ ಬೇಡದವ ರಾಜನಾಗುವನೆ |
ವಾದಮಾಡಲರಿಯದವ ವಕೀಲನೆನಿಸುವನೆ
ವೇದವೋದಲು ವಿಪ್ರ - ಪುಟ್ಟಕಂದ || ೩ ||
ಭಾವನಾತ್ಮಕವಾದ ಬಂಧಗಳ ಚೌಕಟ್ಟು
ಹಾವಭಾವವ ಮರೆತು ಶುದ್ಧವಾಗಿಹುದು |
ಯಾವಕಾಲಕು ಅದುವೆ ಹೃದಯಗಳ ಬೆಸೆಯುವುದು
ನೋವ ನೀಗುತ ಸುಖದಿ - ಪುಟ್ಟಕಂದ || ೪ ||
ಕಷ್ಟದಲಿ ಕಣ್ಣೀರ ಸುರಿಸುವಗೆ ಸಾಂತ್ವನಕೆ
ಇಷ್ಟವಾಗುವ ಮಧುರ ಮಾತುಗಳು ಬೇಕು |
ನಷ್ಟವನು ಕಳೆಯಲಿಕೆ ಧನವಿತ್ತು ಸಹಕರಿಸೆ
ದುಷ್ಟನೂ ಶಿಷ್ಟನಹ - ಪುಟ್ಟಕಂದ || ೫ ||
(ಆಶು ಛಂದೋಬದ್ಧ ಮುಕ್ತಕ)
ಇವುಗಳಲ್ಲಿ ಅನುಕ್ರಮವಾಗಿ ೧.ಸಿಂಹಪ್ರಾಸ , ೨.ಗಜಪ್ರಾಸ , ೩.ಗಜಪ್ರಾಸ , ೪.ಗಜಪ್ರಾಸ, ೫.ಶರಭಪ್ರಾಸ ಬಂದಿರುತ್ತದೆ.
-ವಿ.ಬಿ.ಕುಳಮರ್ವ , ಕುಂಬ್ಳೆ
ಸ್ವರ ಸಂಯೋಜನೆ ಮಾಡಿ ಹಾಡಿದವರು- ಶ್ರೀ ಬಾಲಕೃಷ್ಣ ಆಚಾರ್ಯ, ಪುತ್ತಿಗೆ
إرسال تعليق