ವೇದವೆಂದರೆ ವಾದಗಳ ಮಂಥನದ ನವನೀತ
ನಾದಗಳ ಮೂಲವನೆ ಕೀಲಿಸಿದ ಶಾಖೆ |
ಭೇದವಿಲ್ಲದೆ ನಮಗೆ ತೋರುವುದು ತಿಳಿಬೆಳಕ
ಬೋಧಿಪರು ಗುರು ನಿನಗೆ - ಪುಟ್ಟಕಂದ ||
ವೇದವೆಂದರೆ ಆದಿಕಾವ್ಯಕ್ಕೆ ಸಮನಾದ
ಬೋಧನೆಯ ನೀಡುತಿಹ ಜೀವನದ ಪಾಠ |
ಸಾಧನೆಯ ಸಾರ ಸರ್ವಸ್ವವಲ್ಲಿರುವಾಗ
ಮೇದಿನಿಯ ಜನಕೆ ವರ - ಪುಟ್ಟಕಂದ ||
ವೇದವೆಂದರೆ ನಿತ್ಯ ಶಾಶ್ವತದ ಮೌಕ್ತಿಕವು
ಬಾದರಾಯಣನ ವರ ಜೀವಸಂಕುಲಕೆ |
ಕೋದಿರುವ ವಾಕ್ಯಗಳು ಉಪನಿಷತ್ತಿನ ಸತ್ತ್ವ
ಕಾದುವರ ತಿದ್ದುವುದು - ಪುಟ್ಟಕಂದ ||
ವೇದವೇ ನಾದಕ್ಕೆ ತಾಯಿಯೆಂದರೆ ಸತ್ಯ
ನಾದವೇ ವೇದಕ್ಕೆ ಮೂಲವೆನೆ ನಿತ್ಯ |
ಖೇದವನು ಮರೆಸಿಯಾಮೋದವನು ಸೃಜಿಸುವುದು
ಸಾಧುಗಳು ಹರಸುವರು - ಪುಟ್ಟಕಂದ ||
- ವಿ.ಬಿ.ಕುಳಮರ್ವ , ಕುಂಬ್ಳೆ
ಹಾಡಿದವರು: ಬಾಲಕೃಷ್ಣ ಆಚಾರ್ಯ ಪುತ್ತಿಗೆ
ಕಾಮೆಂಟ್ ಪೋಸ್ಟ್ ಮಾಡಿ