ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಎಚ್.ಎಸ್. ದೊರೆಸ್ವಾಮಿ: ಕರ್ನಾಟಕದ ಅನಭಿಷಿಕ್ತ ದೊರೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


103ರ ಹಿರಿಯ ಚೇತನ. ಉಸಿರಿರುವವರೆಗೂ ಎಲ್ಲ ಜನಾಂದೋಲನಗಳ ಮುಂಚೂಣಿಯಲ್ಲಿ ಇರುತ್ತಿದ್ದರು. ನೇತಾರ ಎಂಬುದಕ್ಕೆ ನಿರ್ವಚನದಂತಿದ್ದರು. ತಾವು ಭಾಗವಾಗಿರುವ ಸಾಮಾಜಿಕ, ರಾಜಕೀಯ ವ್ಯವಸ್ಥೆಯನ್ನು ಇಡಿಯಾಗಿ ಶುದ್ಧೀಕರಿಸಬೇಕೆಂದು ಹಟ ತೊಟ್ಟವರು. ಅಹಮಿಕೆ ಇರಲಿಲ್ಲ. ನಾನತ್ವದಿಂದ ಬೀಗಿ, ಇತರರನ್ನು ಎಂದೂ ಕೀಳಾಗಿ ನಡೆಸಿಕೊಂಡವರಲ್ಲ. ಅವರು ಗಾಂಧೀವಾದಿ. ಆದರೆ ಗಾಂಧೀವ್ಯಾಧಿ ಎಂಬುದು ಅವರಿಗೆ ಸೋಕಿರಲಿಲ್ಲ! ಏಕೆಂದರೆ ಅವರು ಇತರರಂತೆ ಪ್ರಚಾರಪ್ರಿಯರಾಗಿರಲಿಲ್ಲ. ಅವರ ಮೂಲಕ ಪ್ರಚಾರ ಪಡೆಯಲು ಮಾಧ್ಯಮಗಳೇ ಹಿಂದೆ ಬೀಳುತ್ತಿದ್ದವು‌.

ಸಾಮಾನ್ಯವಾಗಿ ತೀರಾ ಹಿರಿಯ ವಯಸ್ಕರು ಅಗಲಿದಾಗ, ವಯಸ್ಸಾಗಿತ್ತು; ಪರವಾಗಿಲ್ಲ ಅಂತ ಅನಿಸುತ್ತದೆ. ಆದರೆ ದೊರೆಯಂತಿದ್ದ ಎಚ್.ಎಸ್. ದೊರೆಸ್ವಾಮಿ ಅವರು ಶತಾಯುಷಿಯಾಗಿದ್ದರೂ, ಅವರಂತಹ ಪ್ರೇರಕ ಶಕ್ತಿ ನಮ್ಮ ನಡುವೆ ಇನ್ನೂ ಇರಬೇಕಿತ್ತು; ನಮ್ಮನ್ನು ಮುನ್ನಡೆಸಬೇಕಿತ್ತು, ಅಗಲಬಾರದಿತ್ತು ಎಂದೆನಿಸುತ್ತಿದೆ. ಅವರು ಸೋಗಲಾಡಿಯಲ್ಲ; ಆಷಾಢಭೂತಿ ಆಗಿರಲಿಲ್ಲ. ಅವರು ಸರಳತೆ, ಸಜ್ಜನಿಕೆಗಳ ರಸಸಂಗಮ. ದೊರೆತನದಿಂದ ಬೀಗಿದ್ದೇ ಇಲ್ಲ. ಎಚ್.ಎಸ್. ದೊರೆಸ್ವಾಮಿ ಕರ್ನಾಟಕದ ಅನಭಿಷಿಕ್ತ ದೊರೆ. ಅವರೊಂದಿಗಿನ ಒಡನಾಟ ಹೃದಯಂಗಮ. ಒಳ್ಳೆಯ ಬರೆಹಗಾರ. ಪ್ರಾಮಾಣಿಕ ಪ್ರಕಾಶಕರಾಗಿದ್ದರು. ಇಡೀ ಬದುಕು ಖುಲ್ಲಂ ಖುಲ್ಲಾ; ಪಾರದರ್ಶಕ. 

ಅವರ ಭೌತಿಕ ಎತ್ತರವನ್ನು ಎಲ್ಲರೂ ಬಲ್ಲರು. ಬೌದ್ಧಿಕವಾಗಿಯೂ ಅಷ್ಟೇ ಎತ್ತರದಲ್ಲಿದ್ದವರು. ಅವರ ಮಾತಿಗೂ, ಕೃತಿಗೂ ಎಂದೂ ಅಂತರವಿರಲಿಲ್ಲ. ಅವರದು ಆದರ್ಶದ ಶುಷ್ಕ ಬೋಧನೆಯಲ್ಲ. ಅದನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಮೆರೆದವರು.  ವಾನಪ್ರಸ್ಥಾಶ್ರಮ, ಸನ್ಯಾಸಾಶ್ರಮ ಯಾವುದರ ಕುರಿತೂ ಯೋಚಿಸಿದವರಲ್ಲ. ನಾಡಿಯ ಕಡೆಯ ಬಡಿತವಿರುವವರೆಗೆ, ನಂಬಿದ ಧ್ಯೇಯ, ತತ್ತ್ವ, ಸಿದ್ಧಾಂತಗಳಿಗೆ ಬದ್ಧರಾಗಿದ್ದವರು. ನೂರು ದಾಟಿದ ಅನಂತರವೂ, ಆಲಸ್ಯವನ್ನು ಹತ್ತಿರಕ್ಕೆ ಬಿಟ್ಟುಕೊಂಡವರಲ್ಲ. ಅದರೊಂದಿಗೆ ಶಾಶ್ವತವಾಗಿ ಟೂ ಬಿಟ್ಟು ಕ್ರಿಯಾಶೀಲತೆಯ ಕೈಹಿಡಿದು ಬಿರಬಿರನೆ ಹೆಜ್ಜೆ ಹಾಕಿದವರು. ಕರೆದ ಚಳವಳಿಗಳಿಗೆ ಹೋಗಿ ಹಾಜರಿ ಹಾಕುತ್ತಿದ್ದರು. ಅವರು ತಾವೇ ಬದಲಾವಣೆಯ ಗಾಳಿಯಾಗಿ ಬೀಸುತ್ತಿದ್ದರು!

ಅವರದು ಎಂದೋ ಗತಿಸಿಹೋದ ಸ್ವಾತಂತ್ರ್ಯ ಹೋರಾಟದ ಕೇರಾಫ಼್ ವಿಳಾಸವಲ್ಲ. ನೆಲ, ಜಲ, ನುಡಿ, ಗಡಿ, ಪರಿಸರ, ಅಕ್ರಮ ಭೂ ಆಕ್ರಮಣ ವಿರೋಧಿಸಿ ಹೂಡುತ್ತಿದ್ದ ಆಂದೋಲನಗಳ ನೇತೃತ್ವ. ವರ್ತಮಾನದ ಪ್ರತಿ ಜ್ವಲಂತ ವಿಷಯಕ್ಕೂ ತುಡಿವ ಮನಸ್ಸು. ಆ ಹೋರಾಟಗಳು ತಾರ್ಕಿಕ ಅಂತ್ಯ ಕಾಣುವವರೆಗೆ ವಿರಮಿಸುತ್ತಿರಲಿಲ್ಲ. ಮಂಡೂರನ್ನು ಕಸಮುಕ್ತವಾಗಿಸಿದ ಕೀರ್ತಿ ಅವರಿಗೇ ಸಲ್ಲುತ್ತದೆ. ಅವರು ಹೋರಾಟಕ್ಕೆ ನಿಂತರೆ ಚಂಡೆ ಮದ್ದಳೆ ಒಟ್ಟಿಗೆ ಬಾರಿಸಿದಂತೆ. ರಾಜಿ, ಕಬೂಲ್ ಇಲ್ಲವೇ ಇಲ್ಲ. ಇವರು ಚಳವಳಿಗಳಿಗೆ ಹೀಗೆ ಬಂದು ಕ್ಯಾಮೆರಾಗಳಿಗೆ ಮುಖತೋರಿ, ಬೇರೇನೋ ಕೆಲಸವಿದೆ ಎಂದು ಹಾಗೆ ಹೊರಡುವ ಪೈಕಿಯವರಲ್ಲ. ಚಳವಳಿಯೇ ಅವರ ಪೂರ್ಣಾವಧಿ ಕಾರ್ಯ. ಅವರು ಬದುಕನ್ನು ಸಾರ್ವಜನಿಕ ಸೇವೆಗೆ ಇಡಿಯಾಗಿ ಮುಡುಪಿಟ್ಟ ಬಗೆ ಹೀಗೆ. ವೈಚಾರಿಕ, ಪ್ರಗತಿಪರ ಆಲೋಚನೆ, ಚಿಂತನೆಗಳ ಪ್ರಖರ ಪ್ರತಿಪಾದಕ. ಅವರು ನುಡಿದರೆ, ವ್ಯವಸ್ಥೆ ನಡುಗುತ್ತಿತ್ತು. ಸೈದ್ಧಾಂತಿಕವಾಗಿ ಅತ್ಯಂತ ಖಚಿತ ನಿಲುವು ಅವರದಾಗಿರುತ್ತಿತ್ತು.   

ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ಕಾಲ ಕೆಟ್ಟು ಹೋಯಿತು ಎಂದು ಹಲುಬಿದವರಲ್ಲ‌. ವರ್ತಮಾನವನ್ನೂ ತಮ್ಮದೇ ಕಾಲ ಎಂದು ನಂಬಿದ್ದವರು! ಅವರು ಈ ನೆಲದ ಮರೆಯ ನಿಧಿಯಾಗಿದ್ದವರು. ದೊರೆತನ, ಸ್ವಾಮಿತ್ವ ಇವೆರಡರಿಂದ ದೂರವಿದ್ದರೂ, ಅವೆರಡನ್ನೂ ಒಳಗೊಂಡ ದೊರೆಸ್ವಾಮಿಯಾಗಿ ಎಲ್ಲರ ಎದೆಗಳಲ್ಲಿ ವಿರಾಜಮಾನರಾಗಿದ್ದರು.

- ಕೆ. ರಾಜಕುಮಾರ್

Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم