ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮೇ 26- ಕೂರ್ಮ ಜಯಂತಿ: ಕೂರ್ಮಾವತಾರದ ಹಿನ್ನೆಲೆ ಮತ್ತು ತತ್ವ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಮತ್ಸ್ಯಾವತಾರದ ಅನಂತರ ಕೂರ್ಮಾವತಾರ. `ಕೂರ್ಮ’ ಎಂದರೆ `ಆಮೆ’. ಆಮೆಯ ಬೆನ್ನು ಬಹಳ ಬಿರುಸಾಗಿ, ಚಪ್ಪಟೆಯಾಗಿ ಇರುತ್ತದೆ. ಅತ್ಯಂತ ಭಾರವುಳ್ಳ ಮಂದರ ಪರ್ವತವನ್ನು ಧರಿಸಲು ಭಗವಂತ ಕೂರ್ಮಾವತಾರವನ್ನು ಧರಿಸಿದನು. ಕಾರ್ಯಕ್ಕೆ ತಕ್ಕ ರೂಪವೆಂಬ ಸಂದೇಶ ನೀಡಿದನು.

 ಮಂದರಪರ್ವತವು ಸಾಮಾನ್ಯವಲ್ಲ. ಅದರ ಅಳತೆ ನೂರು ಯೋಜನ ಅಗಲ, ನೂರು ಯೋಜನ ಎತ್ತರ. ಮಥನ ಮಾಡುತ್ತಿರುವ ಈ ಪರ್ವತವನ್ನು ಧಾರಣೆ ಮಾಡಲು ಬೇರೆ ಯಾರಿಗೂ ಸಾಮರ್ಥ್ಯವಿಲ್ಲ.

ಹಿಂದೆ ದೇವತೆಗಳು ಅಮೃತ ಪ್ರಾಪ್ತಿಗಾಗಿ ಕ್ಷೀರಸಾಗರವನ್ನು ಮಥನ ಮಾಡಿದರು. ಮಂದರ ಪರ್ವತವನ್ನು ಕಡಗೋಲು ಮಾಡಿಕೊಂಡು ದೈತ್ಯರು ಹಾಗೂ ದಾನವರ ಜೊತೆ ಮಥನ ಮಾಡಲು ಪ್ರಾರಂಭಿಸಿದಾಗ ಅತ್ಯಂತ ಭಾರವಾದ ಮಂದರ ಪರ್ವತವು ಸಮುದ್ರದಲ್ಲಿ ಜಾರುತ್ತಿತ್ತು. ಆವಾಗ ಬೇರೆ ಉಪಾಯ ಕಾಣದೇ ಬ್ರಹ್ಮಾದಿ ದೇವತೆಗಳು ಪರಮಾತ್ಮನನ್ನು ಶರಣು ಹೊಂದಿದರು. ಅವರ ಪ್ರಾರ್ಥನೆಗೆ ಅನುಗ್ರಹ ಮಾಡಿದ ಭಗವಂತನು `ಕೂರ್ಮ’ ಎಂಬ ರೂಪವನ್ನು ಧರಿಸಿದನು. ಸಮುದ್ರದ ಆಳದಲ್ಲಿ ಮಂದರ ಪರ್ವತವನ್ನು ಮುಳುಗದಂತೆ ಎತ್ತಿ ಹಿಡಿದನು.

 ಕೂರ್ಮ ರೂಪಿಯು ಮಂದರ ಪರ್ವತವನ್ನು ಧಾರಣೆ ಮಾಡಿದ್ದಷ್ಟೇ ಅಲ್ಲದೇ, ನಾರದಾದಿ ಮಹರ್ಷಿಗಳಿಗೆ, ಬ್ರಹ್ಮಾದಿದೇವತೆಗಳಿಗೆ ತತ್ವೋಪದೇಶವನ್ನೂ ಕೂಡ ಮಾಡಿರುವನು. ಸಕಲ ದೇವತೆಗಳು ಕೂರ್ಮರೂಪಿಯಾದ ಭಗವಂತನನ್ನು ಅನೇಕ ಸ್ತೋತ್ರಗಳಿಂದ ಪ್ರಶಂಸೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಭಗವಂತನು ಮಾಡಿದ ಉಪದೇಶವೇ `ಕೂರ್ಮ ಮಹಾಪುರಾಣ’ ಎಂದು ಪ್ರಸಿದ್ಧವಾಗಿವೆ.

ದೇವರ ಪೂಜೆಗಿಂತ ಮೊದಲು ಪೀಠ ಪೂಜೆಯನ್ನು ಮಾಡಬೇಕು. ಆ ಸಂದರ್ಭದಲ್ಲಿ ಬ್ರಹ್ಮಾಂಡಧಾರಿಯಾದ ಬ್ರಹ್ಮಾಂಡದ ಹೊರಗಿರುವ ಒಂದು ರೂಪ. ಬ್ರಹ್ಮಾಂಡದ ಒಳಗಿರುವ ಒಂದು ರೂಪ- ಹೀಗೆ ವಿಷ್ಣುವಿನ 2 ಕೂರ್ಮರೂಪವನ್ನು ಅವಶ್ಯವಾಗಿ ಧ್ಯಾನ ಮಾಡಲೇಬೇಕು. ಕ್ಷೀರಸಾಗರ ಮಥನದ ಸಂದರ್ಭದಲ್ಲಿ ಮಂದರ ಪರ್ವತವನ್ನು ಹೊತ್ತಿರುವ ಕೂರ್ಮರೂಪವನ್ನು ಕಷ್ಟಕಾಲದಲ್ಲಿ ಚಿಂತನೆ ಮಾಡಬೇಕು.

ಭಾಗವತದ ಅಷ್ಟಮಸ್ಕಂಧದ ಏಳನೆಯ ಅಧ್ಯಾಯದಲ್ಲಿ ಮಹಾಭಾರತತಾತ್ಪರ್ಯ ನಿರ್ಣಯದ ಹತ್ತನೆಯ ಅಧ್ಯಾಯದಲ್ಲಿ ಮತ್ತು ಕೂರ್ಮಮಹಾಪುರಾಣದಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ. ಇಷ್ಟೇ ಅಲ್ಲದೇ ದಶಾವತಾರಗಳ ಬಗ್ಗೆ ನಿರೂಪಣೆ ಮಾಡುವ ಪ್ರತಿಯೊಂದು ಸಂದರ್ಭಗಳಲ್ಲಿಯೂ ಭಾಗವತಪುರಾಣವಷ್ಟೇ ಅಲ್ಲದೇ ಉಳಿದ ಪುರಾಣಗಳೆಲ್ಲವೂ ಕೂರ್ಮಾವತಾರವನ್ನು ವರ್ಣಿಸುತ್ತವೆ. ಕೂರ್ಮಾವತಾರದ ಅನುಸಂಧಾನ ಚಿಂತನೆ, ಪೂಜೆಗಳ ಕ್ರಮವನ್ನು ತಿಳಿಯಬೇಕೆಂದರೆ ವಿಜಯದಾಸರ ಸುಳಾದಿಗಳನ್ನೇ ಶರಣಾಗಬೇಕು. ಅಷ್ಟೇ ಅಲ್ಲದೇ ಇತರ ಹಲವು ದಾಸವರೇಣ್ಯರೂ ಕೂಡ ದಶಾವತಾರದ ಬಗ್ಗೆ ಚಿಂತನೆಯನ್ನು ನೀಡುವಾಗ ಪಿಂಡಾಂಡದಲ್ಲಿ ಮಾಡುವ ಕೂರ್ಮಾವತಾರದ ಚಿಂತನೆಯನ್ನು ತಿಳಿಸಿಕೊಟ್ಟಿದ್ದಾರೆ.

ಭಗವಂತನ ರಾಮ, ಕೃಷ್ಣ ಮೊದಲಾದ ರೂಪಗಳನ್ನು ಮೂರ್ತಿಯಲ್ಲಿ ನಾವು ಪೂಜಿಸುತ್ತೇವೆ. ಆ ಕ್ರಮದಲ್ಲಿ ಕೂರ್ಮ ಮೂರ್ತಿಯನ್ನು ಪೂಜಿಸುವ ಕ್ರಮ ಹೆಚ್ಚು ಕಾಣಿಸುವುದಿಲ್ಲ. ಆದರೆ ದಶಾವತಾರಗಳ ಪೂಜಾಕ್ರಮದಲ್ಲಿ ಮಾತ್ರ ಇದು ಸೇರಿರುತ್ತದೆ. ಆಶ್ಚರ್ಯವೆಂದರೆ ಕೂರ್ಮಶಾಲಗ್ರಾಮಕ್ಕೆ ಎಲ್ಲಿಲ್ಲದ ಮಹತ್ವವಿದೆ. ತುಂಬಾ ಅಪರೂಪದ ಶಾಲಗ್ರಾಮಕ್ಕೆ ಕ್ಷೀರಾಭಿಷೇಕ ಮಾಡುವುದರಿಂದ ಚಿಂತಿಸಿದ ಅಭೀಷ್ಟಗಳು ನೆರವೇರುತ್ತದೆಂಬ ಅನುಭವ ಅನೇಕರಲ್ಲಿ ಜಾಗೃತವಾಗಿದೆ. ನಿಮ್ಮ ಬಳಿ ಕೂರ್ಮಶಾಲಗ್ರಾಮ ಇಲ್ಲದಿದ್ದರೂ ಎಲ್ಲಿ ಇರುತ್ತದೋ ಅಲ್ಲಿ ಕ್ಷೀರಾಭಿಷೇಕವನ್ನು ಮಾಡಿಸಿ, ಆ ಕ್ಷೀರವನ್ನು ಪಾನ ಮಾಡುವುದರಿಂದ ದೈಹಿಕವಾದ ಅನೇಕ ರೋಗರುಜಿನಗಳು ಪರಿಹಾರವಾಗುವುದರಲ್ಲಿ ಸಂಶಯವೇ ಇಲ್ಲ.

-ಡಾ.ಗುರುರಾಜ ಪೋಶೆಟ್ಟಿಹಳ್ಳಿ,

ಸಂಸ್ಕೃತಿ ಚಿಂತಕರು, 9739369621


Post a Comment

أحدث أقدم