ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವೆಂಟಿಲೇಟರ್ ಎಂಬ ಜೀವ ರಕ್ಷಕ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ, ಅಪಘಾತಗಳಾದಲ್ಲಿ ಆಸ್ಪತ್ರೆಗಳಿಗೆ ಹೋಗುವುದು ಸಹಜವೆ. ರೋಗಿಯ ತೀವ್ರತೆಗನುಗುಣವಾಗಿ ವೈದ್ಯರು ಚಿಕಿತ್ಸೆ ಕೊಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ರೋಗಿಯ ಸ್ಥಿತಿ ಗಂಭೀರವಾದಾಗ ಐಸಿಯುಗೆ ಹಾಕುತ್ತಾರೆ. ಅಲ್ಲಿಯೂ ಸ್ಥಿತಿ ಬಿಗಡಾಯಿಸಿದರೆ ಕೊನೆಯ ಪ್ರಯತ್ನವೆಂಬಂತೆ ರೋಗಿಗೆ ವೆಂಟಿಲೇಟರ್ ಅಳವಡಿಸುತ್ತಾರೆ. ಅಲ್ಲಿ ಕೃತಕ ಶ್ವಾಸೋಚ್ವಾಸದ ವ್ಯವಸ್ಥೆ ಮಾತ್ರವಲ್ಲ ಐಚ್ಛಿಕವಾಗಲಿ ಅನೈಚ್ಛಿಕವಾಗಲಿ ನಡೆಯುವ ಎಲ್ಲ ಕ್ರಿಯೆಗಳೂ ಯಂತ್ರಗಳ ಮೂಲಕವೇ ಕಾರ್ಯ ನಿರ್ವಹಿಸುತ್ತವೆ.   ಇದೆಲ್ಲ ಕ್ರಿಯೆಗಳೂ ರೋಗಿಯನ್ನು ಗುಣಮುಖನನ್ನಾಗಿ ಮಾಡಲೇ ಇರುವಂಥದ್ದು ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ವೆಂಟಿಲೇಟರ್ ಅಳವಡಿಸಿದಾಗ ಎಲ್ಲ ರೋಗಿಗಳೂ ಆರೋಗ್ಯವಂತರಾಗುತ್ತಾರೆ ಎಂದೇನಿಲ್ಲ. ಪ್ರತಿಯೊಂದು ರೋಗಿಯ ರೋಗದ ವಿರುದ್ಧ ಪ್ರತಿರೋಧ ಶಕ್ತಿ, ಇಚ್ಛಾ ಶಕ್ತಿ ಮತ್ತು ವಯೋಮಾನಕ್ಕನುಗುಣವಾಗಿ ಫಲಿತಾಂಶ ಬರುತ್ತದೆ. 

ಇನ್ನು ವೆಂಟಿಲೇಟರ್ ಅಳವಡಿಕೆ ರೋಗಿಯ ಪ್ರಾರಂಭ ಹಂತದಲ್ಲಿ ಒಂದು ವಿಧದ ಪರಿಣಾಮವಾದರೆ, ಕೊನೆಯ ಹಂತದಲ್ಲಿ ಇನ್ನೊಂದು. ರೋಗಿಗೆ ಮಾತನಾಡಲಾಗದು, ತಿನ್ನಲಾಗದು, ಮಲ ಮೂತ್ರಾದಿಗಳಿಗೊಂದು ವ್ಯವಸ್ಥೆ, ಭಾವನೆಗಳನ್ನು (ಪ್ರಜ್ಞೆ ಇದ್ದರೆ) ಕಣ್ಣಲ್ಲೇ ವ್ಯಕ್ತ ಪಡಿಸುವಂಥ ಸ್ಥಿತಿ. ಅಂತು ಯಾರಿಗೂ ಬರಬಾರದಂಥ ಪರಿಸ್ಥಿತಿ. ರೋಗಿಯ ದೃಷ್ಟಿಯಿಂದ ನೋಡಿದರೆ ಐಸಿಯು ಎಂದರೆ ಯಾವಾಗಲೂ ಹವಾನಿಯಂತ್ರಿತ ಕೊಠಡಿಗಳು. ಪ್ರತಿ ಕ್ಷಣವೂ ವಿಶ್ರಾಂತಿಯಲ್ಲಿರಬೇಕಾದುದರಿಂದ ವೇಳೆ ಯಾವುದೆಂದು ತಿಳಿಯಬೇಕಿಲ್ಲದಿರುವುದರಿಂದ ಅಲ್ಲಿ ಗಡಿಯಾರ ಇಲ್ಲ. ಯಾವಾಗಲೂ ವಿದ್ಯುತ್ತಿನ ಪ್ರಖರ ಬೆಳಕಿನಲ್ಲಿ ಹಗಲು ರಾತ್ರಿ ತಿಳಿಯದುದರಿಂದ ಅಲ್ಲಿ ಕ್ಯಾಲೆಂಡರ್ ಇಲ್ಲ. ಆ ಸ್ಥಿತಿಯಲ್ಲಿ ದೇವರ ಮೇಲಿನ ನಂಬಿಕೆಯೂ ಹೊರಟು ಹೋಗುವುದರಿಂದ ದೇವರ ಮೂರ್ತಿಯಾಗಲಿ, ಪಟವಾಗಲಿ ಯಾವುದೂ ಇರುವುದಿಲ್ಲ.

ಮನುಷ್ಯರ ಮೇಲಿನ ಸಂಬಂಧಗಳೂ ಕ್ಷೀಣವಾಗುವುದರಿಂದ ಜನರ ಸಂಪರ್ಕವೂ ಸೀಮಿತ. ಅದರಲ್ಲೂ ಕರೋನದಂಥ ಮಾರಿಯಾದರೆ ಮನೆಯವರಿಗೂ ನೋಡಲಾಗದ ಸ್ಥಿತಿ. ಇನ್ನು ರೋಗಿಗೆ ಹಸಿವಾಗದಂತೆ ಕಾಲ ಕಾಲಕ್ಕೆ ದ್ರವಾಹಾರ ಕೊಡುತ್ತಾರೆ. ಇದರಲ್ಲಿ ಹಸಿವು ನೀಗುತ್ತದೋ ಇಲ್ಲವೋ ರೋಗಿಗೆ ಮಾತ್ರ ಗೊತ್ತಾಗುವುದು. ಹಾಗೆಂದು ಹಸಿವಾಗುತ್ತಿದೆ ಎಂದು ಹೇಳುವ ಹಾಗಿಲ್ಲ. ಆಹಾರ ಕೊಡುವಲ್ಲಿ ವಿಳಂಬವಾದರೂ ರೋಗಿಯು ಅನುಭವಿಸಬೇಕೇ ಹೊರತು ವ್ಯಕ್ತ ಪಡಿಸುವಂತಿಲ್ಲ. ಶರೀರದ ಯಾವುದೇ ಭಾಗದಲ್ಲಿ ನೋವಾದರೆ, ಒಂದೇ ಕಡೆ ಮಲಗಿ ಸುಸ್ತಾದರೆ, ತುರಿಕೆ ಮುಂತಾದ ಕಿರಿಕಿರಿ ಆದರೆ ಸಹಿಸಿ ಕೊಳ್ಳಬೇಕೇ ಹೊರತು ಅನ್ಯ ಮಾರ್ಗವೇ ಇಲ್ಲ. ಅಪಘಾತವೋ, ಶಸ್ತ್ರಚಿಕಿತ್ಸೆಯೋ ಆಗಿ ವೆಂಟಿಲೇಟರ್ ಗೆ ಹಾಕಿದರೆ ಅಲ್ಲೊಂದು ಆಶಾವಾದವಿದೆ. ದಿನ ಕಳೆದಂತೆ ಆರೋಗ್ಯ ಸುಧಾರಿಸತೊಡಗಿದರೆ ಇದರಿಂದ ಹೊರಬರಬಹುದು ಎಂದು. ಹಾಗೆ ಹೊರಬಂದಂಥ ರೋಗಿ ಸ್ವಲ್ಪ ದಿನಗಳ ಬಳಿಕ ಪುನಃ ವೆಂಟಿಲೇಟರ್ಗೆ ಹೋಗಬೇಕಾಗಿ ಬಂದರೆ ಪರಿಸ್ಥಿತಿ ನಿಯಂತ್ರಣ ತಪ್ಪಿದಂತೆ. ಎರಡನೇ ಸಲದ ವೆಂಟಿಲೇಟರ್ ಸಂಬಂಧ ಮಾತ್ರ ಅಪಾಯಕಾರಿಯೇ. 

ಮಾನವನ ಜೀವನ ರಥ ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ನಿಲ್ಲುತ್ತದೆ. ಪುನಃ ಆ ರಥಕ್ಕೆ ಚಾಲನೆ ಸಿಗಬೇಕಾದರೆ ಅದನ್ನು ತಳ್ಳುವಂಥ ವ್ಯವಸ್ಥೆ ಬೇಕು. ಈ ವ್ಯವಸ್ಥೆಯನ್ನೇ ವೆಂಟಿಲೇಟರ್ ಎನ್ನಬಹುದು. ಆದರೆ ನಿಂತ ರಥವು ಮುಂದೆ ಹೋಗುವ ದಿಕ್ಕನ್ನು ಅವಲಂಬಿಸಿ ಚಲಿಸಬೇಕಾಗಿರುವುದರಿಂದ ರಥದ ಸೋಲು ಗೆಲುವು ನಿರ್ಧಾರವಾಗುತ್ತದೆ. ಮುಂದಿನ ದಾರಿ ಇಳಿತವಾದರೆ ರಥವನ್ನು ಎಬ್ಬಿಸಲಷ್ಟೇ ತಳ್ಳಿದರೆ ಸಾಕು ಮತ್ತದು ತನ್ನಿಂದ ತಾನೆ ಚಲಿಸಲಾರಂಭಿಸುತ್ತದೆ. ಇದು ವೆಂಟಿಲೇಟರ್ ನಿಂದ ಹೊರಬಂದು ಆರೋಗ್ಯದ ಕಡೆಗೆ ಹೋಗುವವರ ಪರಿ. ಆದರೆ ರಥದ ಮುಂದಿನ ಹಾದಿ ಏರುಗತಿಯಾದರೆ ತಳ್ಳುವ ಸಾಮರ್ಥ್ಯ ಬಹಳ  ಬೇಕಾಗುತ್ತದೆ. ಅಂದರೆ ತಳ್ಳುವವನ್ನವಲಂಬಿಸಿಯೇ ರಥದ ಪ್ರಗತಿ. ತಳ್ಳುವುದು ನಿಂತರೆ ರಥವು ಪುನಃ ಹಿಮ್ಮುಖವಾಗಿಯೇ ಚಲಿಸುವುದು ಮಾತ್ರವಲ್ಲ ಹತೋಟಿಯನ್ನೂ ತಪ್ಪಿ ಹೋಗಬಾರದ್ದಲ್ಲಿಗೆ ಹೋಗಿ ಸೇರಿ ಆಗಬಾರದ್ದೇ ಆಗುವುದು. ಇದು ವೆಂಟಿಲೇಟರ್ ನಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದು ಕ್ಷಣ ಗಣನೆ ಮಾಡುವವರ ಪರಿ.

ವೈದ್ಯರಾಗಲಿ ದೈವವಾಗಲಿ ಪ್ರಯತ್ನವನ್ನಷ್ಟೇ ಮಾಡಬಹುದು ಹೊರತು ಫಲಿತಾಂಶ ಕಾಲನ ತೆಕ್ಕೆಯಲ್ಲಿ ಗೌಪ್ಯವಾಗಿರುತ್ತದೆ. ಕಾಲ ಬಂದಾಗ ಕಾಲನ ನಿರ್ಣಯ ಅರಿವಾಗಬೇಕೇ ಹೊರತು ಅಲ್ಲಿವರೇಗೆ ಇಂತಹ ವೆಂಟಿಲೇಟರ್‌ಗಳೇ ಶ್ರೀರಕ್ಷೆಗಳು. ರೋಗಿ ಯಾವ ಹಂತದಲ್ಲಿದ್ದರೂ ದೀರ್ಘ ಕಾಲದ ವೆಂಟಿಲೇಟರ್ ಅವಲಂಬನೆ ರೋಗಿಯನ್ನು ದಿನೇ ದಿನೇ ನಿರ್ವೀರ್ಯರನ್ನಾಗಿ ಮಾಡುವುದಂತು ಸತ್ಯ. ಕೊನೆಯದಾಗಿ ಆ ದೇವರಲ್ಲೊಂದು ಪ್ರಾರ್ಥನೆ. ಆರೋಗ್ಯದ ಉನ್ನತಿಗಷ್ಟೇ ಈ ವೆಂಟಿಲೇಟರ್ ಗಳು ಬಳಕೆಯಾಗಲಿ. ವೆಂಟಿಲೇಟರ್ ನಿಂದ ಜೀವನ ರಥ ಅವನತಿಯತ್ತ ಪಥ ಬದಲಿಸದಂತೆ ಇರಲಿ. ಎಲವೋ ವೆಂಟಿಲೇಟರ್ ಎಂಬ ಮಹಾಶಯನೆ ನೀನು ಜೀವ ರಕ್ಷಕನಾಗು, ಜೀವ ಭಕ್ಷಕನಾಗಬೇಡ.

-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ


Tags: Ventilator, Life saver, ವೆಂಟಿಲೇಟರ್

Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು