ಉಜಿರೆ: ಮಾರುಕಟ್ಟೆಯಲ್ಲಿ ಮದ್ಯವರ್ತಿಗಳಿಂದ ರೈತರಿಗೆ ಆಗುವ ಅನ್ಯಾಯ ತಪ್ಪಿಸಲು ವಿದ್ಯುನ್ಮಾನ ವೇದಿಕೆಯು ಒಂದು ಆಶಾದಾಯಕ ಬೆಳವಣಿಗೆ. ಎಲೆಕ್ಟ್ರಾನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ(ಇ-ನಾಮ್) ಪಾರದರ್ಶಕತೆ ಹಾಗೂ ಶೋಷಣೆರಹಿತ ವ್ಯವಸ್ಥೆಯ ದಿಟ್ಟ ಹೆಜ್ಜೆ. ಈ ವ್ಯವಸ್ಥೆಯ ಬೆಳವಣಿಗೆ ಗ್ರಾಮೀಣ ಭಾರತದ ಆರ್ಥಿಕತೆಯಲ್ಲಿ ಸಂಚಲನ ಮೂಡಿಸಲಿದೆ ಎಂದು ಹೈದಾರಾಬಾದಿನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆಯ ಮಹಾನಿರ್ದೇಶಕರಾದ ಡಾ. ಚಂದ್ರಶೇಖರ.ಪಿ ಅವರು ಅಭಿಪ್ರಾಯಪಟ್ಟರು.
ಡಾ. ಚಂದ್ರಶೇಖರ ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಇತ್ತೀಚೆಗೆ ಹೈದರಾಬಾದಿನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ “ಆನ್ ಲೈನ್ ಮಾರ್ಕೆಟಿಂಗ್ ಕಡೆಗೆ ಭಾರತದ ಕೃಷಿ ಮಾರುಕಟ್ಟೆ ವ್ಯವಸ್ಥೆ” ಎಂಬ ವಿಷಯದ ಬಗ್ಗೆ ನಡೆದ ವೆಬಿನಾರನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಾ. ಚಂದ್ರಶೇಖರ ಅವರು ಅವರು ಮಾತನಾಡುತ್ತಾ, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ವಿದ್ಯುನ್ಮಾನ ವೇದಿಕೆಯ ಮೂಲಕ ನೇರವಾಗಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಬೆಲೆ ಪಡೆಯಬಹುದಾಗಿದೆ. ಇದರಿಂದ ವಿವಿಧ ಭಾಗಗಳಲ್ಲಿರುವ ವರ್ತಕರು ತಾವಿರುವ ಸ್ಥಳದಿಂದಲೇ ವಿದ್ಯುನ್ಮಾನ ವೇದಿಕೆಯ ಮೂಲಕ ಉತ್ಪನ್ನಗಳಿಗೆ ಬೆಲೆ ನಮೂದಿಸಿ ಖರೀದಿಸಬಹುದು. ಮಾರಾಟಕ್ಕೆ ಮೊದಲು ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ಮಾಡುವುದರಿಂದ ಗುಣಮಟ್ಟಕ್ಕೆ ತಕ್ಕಂತೆ ರೈತರಿಗೆ ನ್ಯಾಯಯುತ ಬೆಲೆ ದೊರೆಯುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡುತ್ತಾ, ಆನ್‍ಲೈನ್ ವ್ಯವಹಾರದಿಂದ ಪಾರದರ್ಶಕತೆ ಹೆಚ್ಚುತ್ತದೆ ಮತ್ತು ಬೆಳೆಗಾರ ಮತ್ತು ಗ್ರಾಹಕರಿಬ್ಬರಿಗೂ ನ್ಯಾಯ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಹೈದರಾಬಾದಿನ ಮ್ಯಾನೇಜ್ ಸಂಸ್ಥೆಯ ನಿರ್ದೇಶಕರಾದ ಡಾ. ಕೆ.ಸಿ. ಗುಮ್ಗೋಲ್ ಮಠ್ ಅವರು “ಭಾರತದಲ್ಲಿ ಕೃಷಿ ಮಾರುಕಟ್ಟೆ ಸುಧಾರಣೆಗಳು” ಎಂಬ ವಿಷಯದ ಮೇಲೆ ಹಾಗೂ ಮ್ಯಾನೇಜ್ ಸಂಸ್ಥೆಯ ಕೃಷಿ ವ್ಯವಹಾರ ತಜ್ಞ ಡಾ. ಸತ್ಯೇಂದ್ರ ಕುಮಾರ್ ಅವರು “ರಾಷ್ಟ್ರೀಯ ವಿದ್ಯುನ್ಮಾನ ವೇದಿಕೆಯ ಸವಾಲುಗಳು” ಎಂಬ ವಿಷಯದ ಬಗ್ಗೆ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಸತೀಶ್ಚಂದ್ರ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ. ಜಯಕುಮಾರ ಶೆಟ್ಟಿ ಅವರು ಸ್ವಾಗತಿಸಿ, ಡಾ ಗಣರಾಜ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಡಾ.ಮಹೇಶ್ ಶೆಟ್ಟಿ ವಂದಿಸಿದರು.
ಪ್ರಾಧ್ಯಾಪಕರು, ಸಂಶೋಧಕರು, ಪ್ರಗತಿಪರ ಕೃಷಿಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸುಮಾರು 200 ಜನರು ಈ ವೆಬಿನಾರ್ ನಲ್ಲಿ ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق