ಬೆಂಗಳೂರಿನ ಶೇಷಾದ್ರಿಪುರಂ ಬಳಿ ಒಂದು ಕಟ್ಟಡ ಇದೆ. ಬಹುಶಃ ಗಾಂಧಿ ಭವನ ಅಥವಾ ಗಾಂಧಿ ನಿಲಯ ಅಂತ ಏನೋ ಇರಬೇಕು, ಸರಿಯಾಗಿ ನೆನಪಿಲ್ಲ. ಅಲ್ಲಿ ಗಾಂಧಿ ಜಯಂತಿ ಸಂದರ್ಭದಲ್ಲಿ ಒಂದು ಕಾರ್ಯಕ್ರಮ. ಒಂದೈವತ್ತು ಅರವತ್ತು ಜನ ಇದ್ದಿರಬಹುದು ಅಷ್ಟೆ. ನಾನೂ ಒಬ್ಬ ಪ್ರೇಕ್ಷಕ. ಒಂದು ಸರಳ ಕಾರ್ಯಕ್ರಮ. ಇವರು ಅವತ್ತಿನ ಕಾರ್ಯಕ್ರಮದ ಮುಖ್ಯ ಅತಿಥಿಗಳು. ಅವರ ಭಾಷಣ, ನಂತರ ಅವರ ಜೊತೆ ಸಂವಾದ.
ಇದ್ದವರಲ್ಲಿ ಬಹುತೇಕರು ಹಿರಿಯರೇ ಇದ್ರು. ನನಗೆ ಚನ್ನಾಗಿ ನೆನಪಿದೆ, ನಾನು ನನ್ನ ಫ್ರೆಂಡ್ ಜೊತೆ ಮುಂದುಗಡೆ ಆಸನದಲ್ಲೇ ಕುಳಿತಿದ್ದೆ. ರಜಾ ದಿನಗಳಲ್ಲಿ ಒಂದಾ ಸಿನಿಮಾ (ಹೆಚ್ಚಾಗಿ ರಾಜಕುಮಾರ್ ಸಿನಿಮಾಗಳು!!) ಇಲ್ಲಾಂದ್ರೆ 'ಅಲ್ಲಲ್ಲಿ ಏನೇನು?' ಅನ್ನುವ ಪತ್ರಿಕೆಯ ನಗರದಲ್ಲಿನ ಕಾರ್ಯಕ್ರಮಗಳ ಪಟ್ಟಿ ನೋಡಿ ಯಾವುದಾದರು ಒಂದು ಕಾರ್ಯಕ್ರಮದಲ್ಲಿ ಹೋಗಿ ಕುಳಿತು ಕೊಳ್ಳುವುದು.
ಈ ಕಾರ್ಯಕ್ರಮಕ್ಕೂ ಹೋಗಿದ್ದೆವು. ಇದು ಇಸವಿ 1994 ಅಥವಾ 1995 ಇರಬಹುದು.
ಅವರ ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಪೂರ್ವದ ಮತ್ತು ನಂತರದ ದಿನಗಳ ಅನುಭವಗಳನ್ನು ಮಾತಾಡಿದ್ರು. ನಂತರ ಅನೇಕರು ಪ್ರಶ್ನೆ ಕೇಳಿದರು, ಇವರು ಉತ್ತರ ಕೊಟ್ಟರು. "ಯಂಗ್ ಬಾಯ್ಸ್ ನಿಮ್ದೇನು ಪ್ರಶ್ನೆ ಇಲ್ವಾ?" ಅಂತ ನಮ್ಮ ಕಡೆ ಕೈ ತೋರಿಸಿ ಪ್ರಶ್ನೆ ಕೇಳಿದ್ರು.
ಎದ್ದು ನಿಂತೆ.
ಎಂತ ಕೇಳುವುದು?
ಗಾಂಧಿ ಬಗ್ಗೆ ನನಗೆ ಗೊತ್ತಿದ್ದುದ್ದು ಬಾರಿ ಕಮ್ಮಿ. ಗಾಂಧೀಜಿ ಬಗ್ಗೆ ಇದ್ದ ಪಾಠ, ಶ್ರವಣಕುಮಾರ, ಹರಿಶ್ಚಂದ್ರರ ಕತೆಗಳಿಂದ ಗಾಂಧೀ ಪ್ರಭಾವಗೊಂಡಿದ್ದು, ಆಕಾಶವಾಣಿ ಭದ್ರಾವತಿಯಲ್ಲಿ 'ಗಾಂಧಿ ಸ್ಮೃತಿ' ಅನ್ನುವ ಐದು ನಿಮಿಷದ ಕಾರ್ಯಕ್ರಮ ಬರ್ತಾ ಇತ್ತು- ಅದನ್ನು ಕೇಳಿದ್ದು. ಅದರಾಚೆ ಗಾಂಧಿ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಅದನ್ನೇ ಕೇಳಿದೆ: "ನಾ ಚಿಕ್ಕವನಿದ್ದಾಗ ರೇಡಿಯೋದಲ್ಲಿ ಗಾಂಧೀ ಸ್ಮೃತಿ ಅಂತ ಬರ್ತಾ ಇತ್ತು, ಈಗ ರೇಡಿಯೋದಲ್ಲಿ ಅದು ಬರ್ತಾ ಇಲ್ಲ. ರೇಡಿಯೋದಲ್ಲಿ ಮತ್ತು ದೂರದರ್ಶನದಲ್ಲಿ ಆ ಕಾರ್ಯಕ್ರಮ ಬರೋ ಹಾಗೆ ಮಾಡಬಹುದಲ್ವಾ?" ಅಂದೆ. ಇಷ್ಟು ಹೇಳುವಾಗ ಶರಟಿನ ಒಳಗಡೆಯ ಬನಿಯನ್ ಬೆವತು ಕಂಪ್ಲೀಟ್ ಒದ್ದೆ ಆಗಿತ್ತು.
ಕಣ್ಣರಳಿಸಿ, ತಲೆಯಾಡಿಸಿ "ಒಳ್ಳೇ ಸಲಹೆ" ಅಂತ ಹೇಳಿ, "ಹೆಸರೇನು, ಯಾವೂರು, ಏನ್ ಮಾಡ್ತಾ ಇದ್ಯಾ?" ಅಂತೆಲ್ಲ ಕೇಳಿ ನೋಟ್ ಬರ್ಕೊಂಡ್ರು ಬರ್ಕೊಂಡ್ರು.
ಆಮೇಲೂ ಮಿಥಿಕ್ ಸೊಸೈಟಿ, ಎಡಿಎ ರಂಗ ಮಂದಿರಗಳಲ್ಲೂ ಒಂದೆರಡು ಬಾರಿ ಅವರ ಹತ್ರ ನಿಂತುಕೊಂಡು, ಸ್ವಾತಂತ್ರ್ಯ ಹೋರಾಟಗಾರರ ಪಕ್ಕದಲ್ಲಿ ನಿಂತ ಆ ಸಂಭ್ರಮದ ವೈಬ್ರೇಷನ್ ಅನುಭವಿಸಿದ್ದೆ. ಪುಳಕಿತನಾಗಿದ್ದೆ. ಟಿವಿಯಲ್ಲಿ ಅವರ ಸಂದರ್ಶನ ಬಂದ್ರೆ ಆಸಕ್ತಿಯಿಂದ ನೋಡ್ತಾ ಇದ್ದೆ.
ಗಾಂಧಿ ಸ್ಮೃತಿ ರೇಡಿಯೋದಲ್ಲಿ, ಟಿವಿಯಲ್ಲಿ ಬಂತೋ ಗೊತ್ತಿಲ್ಲ, ಆದರೆ ನನ್ನ ಸ್ಮೃತಿಯಲ್ಲಿ ಗಾಂಧೀವಾದಿ ಹೆಚ್.ಎಸ್. ದೊರೆಸ್ವಾಮಿ ಉಳಿದು ಬಿಟ್ಟಿದ್ದಾರೆ. ಇವತ್ತು ನೆನಪನ್ನು ಮಾತ್ರ ಬಿಟ್ಟು ಇಹಲೋಕ ತೊರೆದು ಬಾರದ ಲೋಕಕ್ಕೆ ಹೋಗಿದ್ದಾರೆ.
ಮನುಜರೊಳಗಾಗಾಗ ತೋರ್ಪ ಮಹನೀಯಗುಣ ।
ವನುವಾದ ಬೊಮ್ಮನದು.
ಅವರ ಆತ್ಮಕ್ಕೆ ಶಾಂತಿ ದೊರೆಯಲಿ.
-ಅರವಿಂದ ಸಿಗದಾಳ್, ಮೇಲುಕೊಪ್ಪ.
Visit: Upayuktha Advertisements- A Dedicated place for Your Ads
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ