ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ರಾಕ್ಷಸರು: ಅಂದೂ ಇದ್ದರು, ಇಂದೂ ಇದ್ದಾರೆ, ರೂಪ ಮಾತ್ರ ಬೇರೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ಅನಾದಿ ಕಾಲದಿಂದಲೂ ಸುರಾಸುರರ ನಡುವೆ ಯುದ್ಧಗಳು ನಡೆಯುತ್ತಲೇ ಇವೆ. ಕೆಲವೊಮ್ಮೆ ಅಸುರ ಗುಣ ವಿಜ್ರಂಭಿಸಿದರೆ ಕೆಲವೊಮ್ಮೆ ಸುರ ಗುಣ ವಿಜ್ರಂಭಿಸುವುದು. ಈ ಘೋರ ಯುದ್ಧಗಳಲ್ಲಿ ಸೋಲು ಗೆಲುವು ಯಾರದ್ದೇ ಆದರೂ ಜರ್ಜರಿತವಾಗುವುದು ಅಮಾಯಕ ಸಮಾಜವೆನ್ನುವುದಂತು ಸತ್ಯ. ಯುದ್ಧ ಮಾಡುವವರಲ್ಲದೆ ಅದೆಷ್ಟೋ ಸಾತ್ವಿಕ ಸ್ವಭಾವದವರು, ಯಾರ ತಂಟೆಗೂ ಹೋಗದೆ ತಮ್ಮ ತಮ್ಮ ಕರ್ತವ್ಯದಲ್ಲಿದ್ದು ಸಮಾಜವನ್ನು ಪೋಷಿಸಿ ಬೆಳೆಸುವವರು, ಅಶಕ್ತರು, ವೃದ್ಧರು, ಮಕ್ಕಳು, ರೋಗಿಗಳು, ಮಹಿಳೆಯರು ಮಾತ್ರವಲ್ಲ ಅದೆಷ್ಟೋ ಪ್ರಾಣಿ ಪಕ್ಷಿಗಳು ಕೂಡ ಈ ಯುದ್ಧವೆಂಬ ಅನಾಹುತಕ್ಕೆ ಬಲಿಯಾಗಿ ಹೋದವರುಂಟು. ಇಲ್ಲಿ ಸತ್ತವರೆಲ್ಲ ಕೆಟ್ಟವರೂ ಅಲ್ಲ, ಬದುಕಿದವರೆಲ್ಲ ಸಾತ್ವಿಕರೂ ಅಲ್ಲ.

ಯಜ್ಞ ಯಾಗಾದಿಗಳನ್ನು ಮಾಡಿ ಪ್ರಪಂಚಕ್ಕೆ ಜ್ಞಾನ ಗಂಗೆಯನ್ನೇ ಹರಿಸುತ್ತಿರುವ ಅದೆಷ್ಟೋ ಜ್ಞಾನಿಗಳು ಈ ರಾಕ್ಷಸರ ಕೈಯಲ್ಲಿ ಹತರಾಗಲಿಲ್ಲ.? ಅಲ್ಲಿ ಋಷಿ ಮುನಿಗಳಷ್ಟೇ ನಾಶವಾದದ್ದಲ್ಲ ಅವರೊಂದಿಗೆ ಅವರೊಡನೆ ಇದ್ದಂಥ ಅಪಾರ ಜ್ಞಾನಸಂಪತ್ತು ಕೂಡ ನಾಶವಾದಂತೆ. ಅದೇ ರೀತಿ ಕ್ಷತ್ರಿಯಾದಿ ಇತರ ವರ್ಣದವರು ಕೂಡ ತಮ್ಮ ತಮ್ಮ ಕ್ಷೇತ್ರದಲ್ಲಿ ಅದ್ವಿತೀಯ ಜ್ಞಾನವನ್ನು ಹೊಂದಿ ಸಮಾಜದ ಆರೋಗ್ಯಕ್ಕೆ ಕಾರಣೀಭೂತರಾಗಿದ್ದವರು ಯಾವುದೋ ಒಂದು ಅಪ್ರಯೋಜಕ ಯುದ್ಧಕ್ಕೆ ಬಲಿಯಾಗಿ ಹೋಗುವುದು ದೈವ ಸಂಕಲ್ಪವೆನ್ನಬಹುದೇ, ವಿಧಿ ಎನ್ನಬಹುದೇ, ರಾಕ್ಷಸ ಗುಣದ ಪ್ರಭಾವ ಎನ್ನಬಹುದೇ, ಅಥವಾ ಕಾಲ ನಿಯಮವೆನ್ನಬಹುದೇ..? ಏನಿದ್ದರೂ ಪರಿಣಾಮ ಮಾತ್ರ ಘೋರವೇ.

ಬರಿದೆ ಮನುಷ್ಯ ಮಾತ್ರವಲ್ಲ, ಆತ ನಿರ್ಮಿಸಿದಂಥ ನಾಗರಿಕ ಪ್ರಪಂಚದಲ್ಲಿರುವಂಥ ಅದೆಷ್ಟೋ ಕಟ್ಟಡಗಳು,  ಸ್ಮಾರಕಗಳು, ಕೃಷಿ ಭೂಮಿಗಳು, ನಳಂದ ವಿಶ್ವವಿದ್ಯಾಲಯದಂಥ ಹಲವು ವಿಶಿಷ್ಟ ಜ್ಞಾನ ಕೇಂದ್ರಗಳು, ಜನ್ಮಾಂತರದ ಸಾಧನೆಗಳಿಂದ ಗಳಿಸಿದ ತಿಳಿವಿನಿಂದ ನಿರ್ಮಿಸಿದಂಥ ದೇವಾಲಯಗಳು. ಒಂದೆ ಎರಡೇ ಈ ಯುದ್ಧವೆಂಬ ಕ್ರಿಯೆಯಲ್ಲಿ ಇವೆಲ್ಲವೂ ನಿರ್ನಾಮವಾಗಿ ಹೋದರೆ ಸಾಧನೆಗಳಿಗೆ ಏನು ಬೆಲೆ ಬಂದಂತಾಯಿತು. ಅದರಲ್ಲೂ ಭಾರತದಂಥ ವಿಶಾಲ ದೇಶವು ಈ ಅನಗತ್ಯ ಅತಿಕ್ರಮಣಗಳಿಗೆ ತುತ್ತಾಗಿದ್ದರಿಂದ ಅಮೇರಿಕವನ್ನೂ ಮೀರಿಸಬೇಕಾಗಿದ್ದ ದೇಶ ಇಷ್ಟು ಅಧಃಪಾತಕ್ಕೆ ಇಳಿದಿದೆ ಎನ್ನುವುದು ಅಕ್ಷರಶಃ ಸತ್ಯ. ಇವೆಲ್ಲಕ್ಕೂ ಮೂಲ ಕಾರಣವೇ ಮನುಷ್ಯನ ಅಸುರೀ ಸ್ವಭಾವ. ಆಕ್ರಮಣದಿಂದ ವಿನಾಶ ಮಾಡಿದಾಗ ಆಗುವಂಥ ವಿಕೃತ ಮನಸ್ಸಿನ ಆನಂದವೇ ಈ ಸ್ವಭಾವದ ಲಕ್ಷಣ. ಇಂಥ ಸ್ವಭಾವದವರೇ ಹೆಚ್ಚಾದಾಗ ಇಂಥ ಅಪಸವ್ಯಗಳು ಘಟಿಸುವುದು ಸಹಜವೇ. ಪರಿಣಾಮ ಸರ್ವನಾಶ.

ವೈಪರೀತ್ಯವೆಂದರೆ ಈ ಯುದ್ದಗಳಿಂದ ಇಂದಿನವರೆಗೂ ಯಾರೂ ಶಾಶ್ವತವಾಗಿ ಸುಖವನ್ನು ಅನುಭವಿಸಿಯೇ ಇಲ್ಲ. ಮುಂದೆ ಅನುಭವಿಸುವುದೂ ಇಲ್ಲ. ಇದರಲ್ಲಿಯೂ ಎರಡು ವಿಧವಿದೆ. ಆಕ್ರಮಣ ಮಾಡುವ ಸ್ವಭಾವ ಒಂದು ಕಡೆ ಆದರೆ, ಆಕ್ರಮಣ ಎದುರಿಸಬೇಕಾದ ಅನಿವಾರ್ಯತೆ ಇನ್ನೊಂದು ಕಡೆ. ಮೊದಲನೆಯದು ಕ್ರಿಯೆ. ಎರಡನೆಯದು ಪ್ರತಿಕ್ರಿಯೆ. ಈ ಕ್ರಿಯೆಯ ಹಿಂದೆ ಕ್ರೌರ್ಯದ ಭಾವವಿದೆ. ಪ್ರತಿಕ್ರಿಯೆಯ ಹಿಂದೆ ಸ್ವರಕ್ಷಣೆಯ ಭಾವವಿದೆ. ಒಂದು ಅಹಂಕಾರದ ಕುಯುಕ್ತಿ ಇನ್ನೊಂದು ಪ್ರತಿರೋಧಿಸುವ ದೇಶಭಕ್ತಿ. ಏನೇ ಇರಲಿ ಈ ಯುದ್ಧಗಳೆಂಬುದು ರಾಕ್ಷಸಾಕಾರದ ಸಮಸ್ಯೆಗಳನ್ನು ಹುಟ್ಟು ಹಾಕಿ ಮಾನವನು ಪ್ರಾಣಿಗಳಿಗಿಂತಲೂ ಹೀನ ಬಾಳನ್ನು ಬಾಳುವಂತೆ ಮಾಡುವುದಂತು ನಿಜ. ಇದೆಲ್ಲ ಸಮಾಜದ ಸ್ವಾಸ್ಥ್ಯವನ್ನು ಕಬಳಿಸುವ ರಾಕ್ಷಸ ಸ್ವಭಾವವಾದರೆ ಇದರ ಇನ್ನೊಂದು ಆಯಾಮ ಹೀಗಿದೆ.

ಮೇಲೆ ಹೇಳಿದ ಕ್ರಿಯೆಗಳೆಲ್ಲ ಬಾಹ್ಯ ಪ್ರಪಂಚದಲ್ಲಿ ಕಾಣುವುದಾದರೆ ಇಂತಹದ್ದೇ ವ್ಯವಹಾರ ನಮ್ಮ ದೇಹದೊಳಗೂ ನಮಗೆ ಅರಿವಿಲ್ಲದಂತೆ ಯಾವಾಗಲೂ ನಡೆಯುತ್ತಲೇ ಇರುತ್ತದೆ ಎನ್ನುವುದೂ ಸುಳ್ಳಲ್ಲ. ಮನುಷ್ಯ ಸಹಜವಾಗಿ ತನ್ನ ದೈನಂದಿನ ಸಹಜ ಕ್ರಿಯಗಳೊಡನೆ ಬದುಕುತ್ತಿರುವಾಗ ಅದ್ಯಾವುದೋ ಗಳಿಗೆಯಲ್ಲಿ ಸಾತ್ವಿಕ ಸ್ವಭಾವದ ಋಷಿ ಮುನಿಗಳ ಮೇಲೆ ಅದೆಲ್ಲಿಂದಲೋ ರಾಕ್ಷಸರು ದಾಳಿ ಮಾಡಿದಂತೆ ರೋಗಗಳೆಂಬ ರಾಕ್ಷಸರು ದಾಳಿ ಮಾಡುತ್ತಾರೆ. ಇಂತಹ ದಾಳಿಗಳು ವ್ಯವಸ್ಥಿತವಾಗಿ ಮನುಷ್ಯನನ್ನು ಅಧಃಪಾತಕ್ಕೆ ತಳ್ಳುತ್ತವೆ. ಇಲ್ಲಿ ರೋಗಕ್ಕೊಳಪಟ್ಟವನು ಯಾವನೇ ಆಗಿರಬಹುದು ಆತನನ್ನು ಯಾವ ದಯೆಯೂ ಇಲ್ಲದಂತೆ ರೋಗವೆಂಬ ರಾಕ್ಷಸ ಮಟ್ಟ ಹಾಕಲು ನೋಡುವುದಂತು ನಿಜ. ಆವಾಗ ಪ್ರತಿರೋಧ ತೋರುವ ಸೈನಿಕರಂತೆ ರೋಗಿಗೂ ವೈದ್ಯರ ಪಡೆ ಸಹಾಯ ಮಾಡುತ್ತದೆ. ಆಕ್ರಮಣ ಮತ್ತು ಪ್ರತ್ಯಾಕ್ರಮಣದ ಪ್ರಾಬಲ್ಯಕ್ಕನುಗುಣವಾಗಿ ರೋಗಿಯು ಬದುಕಲೂಬಹುದು ಸಾಯಲೂಬಹುದು, ರಾಜ್ಯಗಳು ಉಳಿದಂತೆ ಅಥವಾ ಅಳಿದಂತೆ.

ಯುದ್ಧದ ತೀವ್ರತೆಗನುಗುಣವಾಗಿ ರಾಜ್ಯಗಳು ಶಿಥಿಲವಾದಂತೆ ರೋಗಿ ಮತ್ತು ವೈದ್ಯನ ಹೋರಾಟದಲ್ಲಿ ಮಾನವನ ದೇಹ ಶಿಥಿಲವಾಗುವುದಂತು ನಿಜವೇ. ಹೇಗೆಂದರೆ ಮಹಾಯುದ್ಧಗಳಲ್ಲಿ ವಿಜಯಿಯಾದ ರಾಜನು ಪಾಳು ಬಿದ್ದ ರಾಜ್ಯಕ್ಕೆ ಒಡೆಯನಾದಂತೆ ಅಥವಾ ರಾಜ್ಯವನ್ನೇ ಬಿಡಬೇಕಾದಷ್ಟು ಪಾಳು ಬಿದ್ದಂತೆ ರೋಗಿಯು ನೆಲಕಚ್ಚುತ್ತಾನೆ. ರೋಗ ಗುಣವಾದರೂ ರೋಗಿಗೆ ಕೊಡುವ ಜೀವರಕ್ಷಕ ಔಷಧಿಗಳನ್ನು, ಶಸ್ತ್ರಚಿಕಿತ್ಸೆಗಳನ್ನು ತಡೆಯುವಂಥ ಚೈತನ್ಯವೇ ಉಡುಗಿ ಹೋಗಿ ರೋಗಿ ಜೀವ ಕಳಕೊಳ್ಳುತ್ತಾನೆ. ಅಂದರೆ ಮಾನವನು ನಿರೋಗಿಯಾಗಿರುವಾಗ ಅದೆಷ್ಟೋ ಪ್ರತಿಭೆಗಳೊಂದಿಗೆ ಸಮಾಜಕ್ಕೆ ಅಥವಾ ಕುಟುಂಬಕ್ಕೆ ಅನಿವಾರ್ಯದಂತಿರುತ್ತಾನೆ. ರೋಗವೆಂಬ ರಾಕ್ಷಸನ ಅನಪೇಕ್ಷಿತ ದಾಳಿ ಸಂಸಾರವನ್ನೇ ಬಲಿ ಪಡೆಯುವುದು ದುರಂತವೇ ಆಗಿದೆ.

ಹಾಗಾದರೆ ಈ ದುರಾಕ್ರಮಣಗಳು ಹೊರ ಪ್ರಪಂಚದಲ್ಲೂ ಒಳ ಪ್ರಪಂಚದಲ್ಲೂ ಯಾರೂ ಬಯಸದಿರುವಂಥವೆ. ಆದರೂ ಈ ಪ್ರಕ್ರಿಯೆ ಅನಾದಿಯಿಂದ ಅನಂತದವರೆಗೂ ನಡೆಯುತ್ತಲೇ ಇರುವುದು ಮಾತ್ರ ನುಂಗಲಾರದ ತುತ್ತು. ಅಥವಾ ಅನಪೇಕ್ಷಿತ ಯುದ್ಧ. ಹೇಗೆ ಬ್ರಹ್ಮಾಂಡದೊಳಗಿರುವುದೆಲ್ಲ ಪಿಂಡಾಂಡದೊಳಗೂ ಇರುವುದೋ ಅದೇರೀತಿ ಬ್ರಹಾಂಡವೆಂಬ ಜಗತ್ತಿನಲ್ಲಿ ಇರುವ ರಾಕ್ಷಸರ ದಾಳಿ ಪಿಂಡಾಂಡವೆಂಬ ದೇಹದೊಳಗೂ ರೋಗಾಣುವೆಂಬ ರೂಪವ ತಾಳಿ ವಿಜ್ರಂಭಿಸುವುದು ನೋಡಿದರೆ ಇದು ಶಾಶ್ವತ ಸಮಸ್ಯೆಯೇ ಎಂಬ ಅರಿವಾಗುವುದಿಲ್ಲವೇ?

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು