ವಿದ್ಯೆ ಕಲಿಯಲು ಬಂದ ಸತ್ಯಕಾಮ ಜಾಬಾಲಿಗೆ ಗುರುಗಳು ಕೊಟ್ಟದ್ದು ನಾಲ್ನೂರು ಗೋವುಗಳನ್ನು. ಇವುಗಳನ್ನು 1000 ಗೋವುಗಳಾಗಿ ಮಾಡಿ ಬಾ ಆಮೇಲೆ ನಿನಗೆ ವಿದ್ಯೆಯನ್ನು ಹೇಳಿಕೊಡುತ್ತೇನೆ ಎಂದು. ಕೆಲವು ವರ್ಷಗಳ ನಂತರ ಶಿಷ್ಯ 1000 ಗೋವುಗಳನ್ನು ಕರೆದುಕೊಂಡು ಬಂದು ಗುರುಗಳಿಗೊಪ್ಪಿಸಿ ನನಗಿನ್ನು ಯಾವ ವಿದ್ಯೆಯೂ ಬೇಡ ಎಲ್ಲಾ ವಿದ್ಯೆಯನ್ನು ಕಲಿತಿದ್ದೇನೆ ಎಂದು ಹೊರಟುಹೋದ. ಆ ಕಥೆ ಸರಿ ಇರಬಹುದು ಎಂದು ನನಗೀಗ ಅನುಭವಕ್ಕೆ ಬರುತ್ತಿದೆ.
ಬಂಧನಕ್ಕೆ ಸಿಲುಕಿದ ಹಸುವೊಂದು ಬಂಧನದಿಂದ ಬಿಡಿಸಿಕೊಳ್ಳುವುದಕ್ಕೋಸ್ಕರ ಅನ್ನ ಸತ್ಯಾಗ್ರಹ ನಡೆಸಿ ತನ್ನ ಕಾರ್ಯವ ಸಾಧಿಸಿ ಕೊಂಡ ಕಥೆ ಮೊನ್ನೆ ತಾನೆ ತಿಳಿಸಿದ್ದೆ.
ಪಾಠ 1: ಹಚ್ಚಹಸುರಾಗಿ ಒಂದಡಿ ಎತ್ತರಕ್ಕೆ ಹುಲ್ಲು ತುಂಬಿರುವ ತೆಂಗಿನ ತೋಟಕ್ಕೆ ದನಗಳನ್ನು ಬಿಟ್ಟಾಗ ಒಂದು ಚೂರು ಹುಲ್ಲು ಇಲ್ಲದಂತೆ, ಧೂಳು ಹಾರುವಂತೆ ಮಾಡಿದ ಸಂಗತಿಯನ್ನು ವಿವರಿಸಿದ್ದೆ. ಒಂದು ಜಾಗದ ಧಾರಣಶಕ್ತಿಯನ್ನು ಮೀರಿ ದನಗಳನ್ನು ಬಿಟ್ಟಾಗ ಅದು ಹೇಗೆ ಹಸುರನ್ನು ಸಂಪೂರ್ಣ ನಾಶಗೊಳಿಸಿತೋ ಹಾಗೆ ಇವತ್ತು ಪೇಟೆಗಳಲ್ಲಿ ಧಾರಣಶಕ್ತಿಯನ್ನು ಮೀರಿ ಮನುಷ್ಯ ವಾಸಿಸುವುದರಿಂದ ಎಲ್ಲಾ ಪ್ರಾಕೃತಿಕ ಸೌಂದರ್ಯವು ನಾಶವಾಗುವುದನ್ನು ನಾವು ಕಾಣಬಹುದು. ಆದರೆ ಗೋವುಗಳು ಸಾಮೂಹಿಕವಾಗಿ ಭೂಮಿಯಲ್ಲಿದ್ದರೂ ಒಂದು ಚೂರು ಹೇಸಿಗೆ ಅನಿಸುವುದಿಲ್ಲ ದುರ್ವಾಸನೆಯ ಸುಳಿವೇ ಇಲ್ಲ. ಇದೇ ಜಾಗದಲ್ಲಿ ಪೇಟೆಗಳ ಸ್ಥಿತಿ ವೂಹಿಸಿಕೊಳ್ಳಿ.
ಪಾಠ 2: ಗೋವುಗಳನ್ನು ಹೊರಗಡೆ ಮೇಯಲು ಬಿಟ್ಟಲ್ಲಿ ಭೂಮಿ ಗಟ್ಟಿಯಾಗುತ್ತದೆ ಎಂಬ ಅವೈಜ್ಞಾನಿಕ ಸಿದ್ಧಾಂತವನ್ನು ಪ್ರಚಾರ ಕೊಡುತ್ತಿದ್ದರು. ಕಳೆದ ಮೂರು ವರ್ಷದಲ್ಲಿ ಒಂದೇ ಕಡೆಗೆ ಬಿಡುತ್ತಿದ್ದ ನಾನು ಮೂರು ವರ್ಷದಲ್ಲಿಯೂ ಒಂದು ಚೂರು ಹುಲ್ಲನ್ನು ಕಾಣದಿದ್ದ ನಾನು, ನಂತರದ ಎರಡು ವರ್ಷ ಮಳೆಗಾಲದಲ್ಲಿ ತೋಟಕ್ಕೆ ಬಿಟ್ಟಾಗ, ಕೇವಲ ಒಂದು ತಿಂಗಳಿನಲ್ಲಿ ತೆಂಗಿನ ತೋಟದಲ್ಲಿ ಒಂದಡಿ ಎತ್ತರಕ್ಕೆ ಹುಲ್ಲು ಬೆಳೆದು ಬಂದದ್ದನ್ನು ನೋಡಿ ಆಶ್ಚರ್ಯಚಕಿತನಾದೆ. ಮೂರು ವರ್ಷ ನಿರಂತರವಾಗಿ ಮೆಟ್ಟಿದರೂ ಭೂಮಿ ಗಟ್ಟಿಯಾಗದಿರುವುದನ್ನು ಮತ್ತು ಭೂಮಿ ತಾಯಿ ತನ್ನ ಮಾನ ಮುಚ್ಚುವುದಕ್ಕಾಗಿ ಮತ್ತೆ ಹುಲ್ಲನ್ನು ಚಿಗುರಿಸಿ ಕೊಂಡದ್ದನ್ನು ಕಂಡು ವಿಸ್ಮಿತನಾದೆ.
3) ಅಡಿಕೆ ತೋಟಕ್ಕೆ ಬಿಟ್ಟಾಗ ಮೇಯುತ್ತಾ ಮೇಯುತ್ತಾ ಮುಂದಕ್ಕೆ ಹೋಗುವುದಲ್ಲದೆ, ಸಂಪೂರ್ಣ ನಾಶವನ್ನು ಅದು ಎಂದೂ ಮಾಡುವುದಿಲ್ಲ. ಅವಕ್ಕೂ ಇದೆ ನಾಳಿನ ಚಿಂತೆ. ಆದರೆ ಮನುಷ್ಯ ನೋಡಿ ಫಲವತ್ತತೆಯನ್ನು ಹೆಚ್ಚು ಮಾಡುವುದಕ್ಕೋಸ್ಕರ ಬಂದ ಹುಲ್ಲನ್ನು ವಿಷವಿಕ್ಕಿ ನಾಶಗೊಳಿಸುವ ಪರಿ.
4) ಸಮೃದ್ಧ ಮೇವು ಸಿಗದಿದ್ದಲ್ಲಿ ಬೇಲಿ ಮುರಿದು ಮುನ್ನುಗ್ಗುವ ಮತ್ತು ಅದರ ಹಿಂದೆ ಹೋಗುವ ಕೆಲವು ದನಗಳನ್ನು ನಾವು ಮಹಾ ಕಂಡುಗಳು ಎಂದು ಬೈಯುತ್ತೇವೆ. ಅಲ್ಲೊಂದು ಪಾಠ ಗಮನಿಸಿ. ಈ ಬೇಲಿ ಎಲ್ಲಾ ಇರುವುದು ನಿನಗೆ ಮಾತ್ರ ಮಾನವ, ಪ್ರಕೃತಿಯೇ ನನಗೆ ಗಡಿ ಎಂಬ ಸೂಚಕ ಒಂದಾದರೆ ಯಾವುದೇ ಅಡ್ಡಿ ಆತಂಕ ಗಳಿದ್ದರೂ ನಾನು ನಿಭಾಯಿಸಬಲ್ಲೆ ಎಲ್ಲವನ್ನು ಮೀರಿ ನಾನು ಬದುಕಬಲ್ಲೆ ಮತ್ತು ಬೇರೆಯವರಿಗೂ ದಾರಿ ತೋರಿಸಬಲ್ಲೆ ಎಂಬ ನಾಯಕತ್ವದ ಗುಣ ನಮಗೆ ಪಾಠ ವಲ್ಲವೇ? (ಉದಾ ನಮ್ಮ ಪ್ರಧಾನಿ ಮತ್ತು ನಮ್ಮ ಕುಲಗುರು ರಾಘವೇಶ್ವರ ಶ್ರೀ ).
5) ಹಾಗಿದ್ದರೂ ಹೊರಗೆ ಹೋಗದ ಕೆಲವು ದನಗಳು ನಮ್ಮಂತ ಅಸಾಮರ್ಥ್ಯದ ಪ್ರತೀಕ.
6) ದನಗಳು ಬೆದೆಗೆ ಬಂದಾಗ ಗಂಡು-ಹೆಣ್ಣುಗಳ ಅದೇನು ಓಟ, ಅದೇನು ಬೇಟ, ಅದೇನು ಮೈಮಾಟ, ಪ್ರಕೃತಿಯಲ್ಲಿದೆ ಲೈಂಗಿಕ ಪಾಠ, ಬೇಕಿಲ್ಲ ನಮಗೆ ಈ ಬಗ್ಗೆ ಶಿಕ್ಷಣದ ಕೂಟ.
7) ಅತ್ಯಾಚಾರ ಮಾಡುವುದು ಮೃಗೀಯ ಮನುಷ್ಯರು ಮಾತ್ರ ಅಂತ ತಿಳಿದಿದ್ದೆ. ಆದರೆ ಅಲ್ಲೂ ಇದೆ ಹೊಂಚುಹಾಕಿ ಮಾಡುವ ಅತ್ಯಾಚಾರ. ಮನುಷ್ಯ ಒಂಟಿಯಾಗಿರುವ ಹೆಣ್ಣನ್ನು ಅತ್ಯಾಚಾರ ಮಾಡಿದರೆ, ಇವು ಗುಂಪಿನಲ್ಲಿ ಮುಂದೆ ಹೋಗಲಾಗದ ಪರಿಸ್ಥಿತಿಯಲ್ಲಿ ಅತ್ಯಾಚಾರ ಮಾಡುತ್ತವೆ. ಇದು ನಾವು ಹೇಗಿದ್ದರೂ ಸರಿಯಲ್ಲ,ನಮ್ಮ ಎಚ್ಚರದಲ್ಲಿ ನಾವು ಇರಬೇಕೆಂಬ ಎಚ್ಚರಿಕೆಯ ಪಾಠ.
8) ಬಂಧನ ಇಲ್ಲದಿದ್ದರೆ ಆಯಿತು, ಸ್ವತಂತ್ರವಾಗಿ ಯಾರ ಹಂಗೂ ಇಲ್ಲದೆ ನಾವು ಬದುಕಬಲ್ಲೆವು, ಬಂಧನದ ಮೃಷ್ಟಾನ್ನಕ್ಕಿಂತ ಸ್ವಾವಲಂಬನೆಯ ಒಪ್ಪತ್ತು ಊಟವೇ ಸುಖ ಎಂಬ ಬಲವಾದ ಸಂದೇಶ ಗೋವುಗಳಿಂದ ನನಗೆ ಲಭಿಸಿತು.
ನಾಲ್ಕು ಗೋಡೆಗಳ ಮಧ್ಯೆ ಸಿಗುವುದೇ ಪರಮ ಶಿಕ್ಷಣವೆಂಬ ಆಧುನಿಕ ವಿದ್ಯಾಭ್ಯಾಸ ಪದ್ಧತಿಗೆ ಪ್ರಕೃತಿಯ ಶಿಕ್ಷಣ ಅದು ಎಂತು ಲಭಿಸೀತು.?
ನಾಲ್ಕು ಇದ್ದದ್ದು 20 ಆಗುವಾಗಲೇ ದೊರೆತ ಇಂತಹ ಅಮೂಲ್ಯ ಪಾಠಗಳು ನೂರು ಆಗುವಾಗ ಅದೆಷ್ಟು ದೊರೆಯಬಹುದು.
ಹಾಗಾಗಿ ಕವಿ ಗೋಪಾಲಕೃಷ್ಣ ಅಡಿಗರು ಅಂದಂತೆ-
ಕಟ್ಟೋಣ ನಾವು ಗೋಲೋಕವನ್ನು,
ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಗರದ ಉತ್ತುಂಗ ವೀಚಿಗಳ,
ಈ ಕ್ಷುಬ್ದಸಾಗರವು ಬತ್ತಿ ಹೋಗುವ ಮುನ್ನ,
ಕಟ್ಟೋಣ ನಾವು ಹೊಸ ಗೋಲೋಕವೊಂದನು.
-ಎ.ಪಿ.ಸದಾಶಿವ ಮರಿಕೆ
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ