ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪಂಪನ ಸಾಹಿತ್ಯದಲ್ಲಿ ಕಂಡುಬರುವ ಪರಿಸರ ಪ್ರಜ್ಞೆ ಅಭೂತಪೂರ್ವ: ಡಾ. ತಾಳ್ತಜೆ ವಸಂತ ಕುಮಾರ್‌ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ಮಂಗಳೂರು: ಪರಿಸರ ಎಂದರೆ ಕೇವಲ ನೈಸರ್ಗಿಕ ಅಥವಾ ಭೌತಿಕವಲ್ಲ. ಹಲವಾರು ರೀತಿಯ ಪರಿಸರಗಳು, ಅದರಲ್ಲೂ ಸಾಮಾಜಿಕ, ಸಾಂಸ್ಕೃತಿಕ ಪರಿಸರಗಳು ಮನುಷ್ಯನ ವ್ಯಕ್ತಿತ್ವದ ಮೇಲೆ ಗಾಢ ಪರಿಣಾಮ ಬೀರುತ್ತವೆ. ಪಂಪನ ಸಾಹಿತ್ಯದಲ್ಲಿ ಕಂಡುಬರುವ ಪರಿಸರ ಪ್ರಜ್ಞೆ ಬೆರಗು ಮೂಡಿಸುತ್ತದೆ, ಎಂದು ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ವಿಶ್ರಾಂತ ಅಧ್ಯಕ್ಷ ಡಾ. ತಾಳ್ತಜೆ ವಸಂತ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.  

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಸೋಮವಾರ ಆನ್‌ಲೈನ್‌ನಲ್ಲಿ ನಡೆದ “ಪಂಪ ಮತ್ತು ಪರಿಸರ” ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಅವರು, ಪ್ರಗತಿಯೆಂಬ ಭ್ರಮೆಯಲ್ಲಿ ಪರಿಸರದ ಎಲ್ಲಾ ವಿಭಾಗಗಳು ಕುಸಿಯುತ್ತಿರುವಾಗ, ಪಂಪನ ನೈತಿಕ ಪರಿಸರವೆಂಬುದು ಉದಾತ್ತ ಚಿಂತನೆಯೇ ಸರಿ, ಎಂದರು. “ಆತ್ಮೋನ್ನತಿ ಸಮಾಜೋನ್ನತಿಯ ಗುಣ ಎನ್ನುವ ಪಂಪ, ಮಾನವೀಯ ಗುಣಗಳನ್ನು ಅರ್ಥೈಸುತ್ತಾನೆ. ಬದುಕನ್ನು ಸಾಮಾಜಿಕ ಸಂದರ್ಭಗಳಲ್ಲಿಯೇ ನೋಡುತ್ತಾನೆ. ಪರಿಸರದ ಕುರಿತ ಆತನ ಚಿಂತನೆ ಕಾಲ-ದೇಶಗಳಿಗೆ ಮೀರಿದ್ದು,” ಎಂದರು.  

ʼವಿಜಯ ಕರ್ನಾಟಕʼದ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಸಾಹಿತ್ಯ ವ್ಯಕ್ತಿ ಕೇಂದ್ರಿತವಾಗುತ್ತಿರುವ ಕಾಲದಲ್ಲಿ ಪಂಪನಂತಹ ಮೇರು ಸಾಹಿತಿಗಳ ಉದಾತ್ತ ಚಿಂತನೆಯ ಕಡೆಗೆ ದೃಷ್ಟಿ ಹರಿಸುವ ಅಗತ್ಯವಿದೆ. ಈಗಿನ ಅಪಸವ್ಯಗಳನ್ನು ತಡೆಯಲು ಇದು ಅನಿವಾರ್ಯವೂ ಹೌದು, ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ʼಮನುಷ್ಯ ಜಾತಿ ತಾನೊಂದೇ ವಲಂʼ ಎಂದ ಪಂಪ ಮಾನವೀಯತೆಯ ಪ್ರತೀಕ, ಎಂದರು. ಪ್ರಾಂಶುಪಾಲೆ ಡಾ. ಅನಸೂಯ ರೈ, ಹೆಚ್ಚಿನ ವಿದ್ಯಾರ್ಥಿನಿಗಳು ಪಂಪನ ಸಂಶೋಧನೆ ನಡೆಸುವಂತಾಗಲಿ, ಎಂದು ಹಾರೈಸಿದರು.  

ವಿಚಾರ ಮಂಡನೆ

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ, ಪಂಪ, ಕುವೆಂಪು, ಬೇಂದ್ರೆ ಸೇರಿದಂತೆ ಕವಿಗಳೆಲ್ಲರೂ ಪರಿಸರದಿಂದ ಪ್ರಭಾವಿತರಾಗಿದ್ದಾರೆ, ತಮ್ಮ ಭಾವಕ್ಕೆ ತಕ್ಕಂತೆ ವರ್ಣಿಸಿದ್ದಾರೆ, ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ ವಿ ವಸಂತ್‌ ಕುಮಾರ್, ಪಂಪ ಕನ್ನಡದ ಮೂಲಕ ರಾಷ್ಟ್ರದ ಕಲ್ಪನೆ ಕಟ್ಟಿಕೊಟ್ಟಿದ್ದಾನೆ. ವ್ಯಕ್ತಿ ತನ್ನ ಅಹಂಕಾರ ದಮನಿಸಿ ರಾಷ್ಟ್ರದಲ್ಲಿ ಎಲ್ಲರಲ್ಲೊಬ್ಬನಾಗಬೇಕು ಎನ್ನುವ ಮೂಲಕ ರಾಷ್ಟ್ರೀಯತೆಯ ಬಿಕ್ಕಟ್ಟುಗಳಿಗೆ ಪರಿಹಾರ ನೀಡಿದ್ದಾನೆ, ಎಂದರು. “ಪಂಪ ಯಾವತ್ತೂ ತನ್ನ ಕೃತಿಗಳಲ್ಲಿ ಹಿಂಸೆಯನ್ನು ಪ್ರೋತ್ಸಾಹಿಸಿಲ್ಲ. ಶೌರ್ಯ ಮತ್ತು ಸ್ವಾಭಿಮಾನಗಳಿಗೇ ಬೆಲೆ,” ಎಂದವರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಬೆಟ್ಟಂಪಾಡಿಯ ಪ್ರಾಚಾರ್ಯ ಡಾ. ವರದರಾಜ ಚಂದ್ರಗಿರಿ.  

ಸಮಾರೋಪ ಭಾಷಣ ಮಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್‌ ಭಟ್‌, ಪಂಪ ಸೃಷ್ಟಿಗೆ ಸೃಷ್ಟಿಕರ್ತನಷ್ಟೇ ಬೆಲೆ ನೀಡಿದ್ದ. ಅದು ಮರೆಯಾಗಿ ಈಗ ಭೋಗ ಸಂಸ್ಕೃತಿ ಆರಂಭವಾಗಿದೆ, ಎಂದು ವಿಷಾಧಿಸಿದರು. ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ ಪ್ರೊ. ಸೋಮಣ್ಣ, ಪಂಪನ ವಿಷಯದ ಆಯ್ಕೆಯಲ್ಲಿ ಭವ್ಯತೆಯಿತ್ತು. ಆತ ʼಮಹಾಭಾರತʼ ವನ್ನು ಆಯ್ದುಕೊಂಡದ್ದು ಕನ್ನಡಿಗರ ಅದೃಷ್ಟವೇ ಸರಿ, ಎಂದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್‌ ಕುಮಾರ್‌ ಸಿಕೆ, ಪಂಪನ ಹೊರತಾಗಿ ಕನ್ನಡ ಸಾಹಿತ್ಯ ಅಧ್ಯಯನ ಅಪೂರ್ಣ. ವಿವಿಧ ರೀತಿಯ ಪರಿಸರಗಳ ಕುರಿತು ಆತನ ಕಾಳಜಿ ಗಮನಾರ್ಹ, ಎಂದರು.  

ಸಂಶೋಧನಾ ಪ್ರಬಂಧ ಮಂಡನೆಯ ಅಧ್ಯಕ್ಷತೆಯನ್ನು ಮದರಾಸು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಡಾ. ರಂಗಸ್ವಾಮಿ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಾಧವ ಎಂ ಕೆ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಶೈಲಾ ಯು, ಡಾ. ಸುರೇಶ್‌, ದಿವ್ಯಶ್ರೀ, ಡಾ. ಅಶ್ವಿನಿ ನಾಯಕ್‌, ವೆಂಕಟೇಶ್‌, ಉಷಾ, ನಾಗೇಶ್‌ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು. ದೀಪ್ತಿ ಪ್ರಾರ್ಥಿಸಿದರು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم