(ಚಿತ್ರ ಕೃಪೆ: ಝೀ ನ್ಯೂಸ್ ಇಂಡಿಯಾ)
ಬಾಲ್ಯ ಎಂದರೆ ನಮ್ಮ ಜೀವನದ ಮೊದಲ ಘಟ್ಟ. ಶಿಕ್ಷಣ ಎಂದರೆ ಏನು ಅಂತ ಪೀಠಿಕೆ ಸಿಗೋದೆ ಅಲ್ಲಿ. ಭಾಗಾಕಾರ ಗುಣಾಕಾರದ ಗಣಿತದಲ್ಲಿ, ಕಶೇರುಕ ಅಕಶೇರುಕಗಳ ವಿಜ್ಞಾನದ ವಿಂಗಡಣೆಯಲ್ಲಿ ನಾವು ಮರೆತು ಪೆಟ್ಟು ತಿಂದ ಅನುಭವಗಳು ಮತ್ತೆ ಎಂದಿಗೂ ಬರಲಾರದು. ಮದ್ಯಾಹ್ನದ ಬಿಸಿಯೂಟಕ್ಕೆ ಸಾಲು ನಿಂತು ನಮ್ಮದೇ ಗುಂಪಿನಲ್ಲಿ ಊಟ ಸವಿಯುವ ಆ ಮಜಾ ಅನುಭವ ಬರೀ ಈಗ ನೆನಪಷ್ಟೇ ಅಲ್ಲವೇ...?
ಜೂನ್ ತಿಂಗಳು ನಮ್ಮೆಲ್ಲ ಪ್ರಾಥಮಿಕ ಶಿಕ್ಷಣದ ಒಂದು ವಿಶೇಷ ತಿಂಗಳು. ಕಾಕಿ (ಕಂದು) ಬಣ್ಣದ ಬೈಂಡ್‌ಗಳು, ಕಲರ್ ಕಲರ್ ಛತ್ರಿ, ಹೊಸ ಪರಿಮಳವ ಗ್ರಹಿಸುವ ಹೊಸದಾದ ಪುಸ್ತಕಗಳು, ಅಡ್ಡ, ಉದ್ದ ಎಂಬಂತೆ ಬಗೆ ಬಗೆ ಚೀಲಗಳು... ಒಂದೇ ಎರಡೇ. ಎಲ್ಲವನ್ನು ಮೇ ತಿಂಗಳ ಕೊನೆಯಲ್ಲಿ ಹೆತ್ತವರು ಸಿದ್ಧತೆ ಮಾಡಿಕೊಡದಿದ್ದರೆ ಮತ್ತೆ ರಂಪಾಟ ಶುರು.
ಇನ್ನು ಆ ಜೋರಾದ ಮಳೆಯಲ್ಲಿ ಕೊಡೆಯಲ್ಲಿ ಆಡುತ್ತಾ, ಸ್ವಲ್ಪ ಒದ್ದೆಯಾಗುತ್ತಾ, ದಾರಿಯಲ್ಲಿ ಹೋಗುವಾಗ ಕಲ್ಲು ಬಿಸಾಕಿ ತಿನ್ನುತ್ತಿದ್ದ ನೇರಳೆ ಹಣ್ಣುಗಳು ವ್ಹಾವ್ ಅದೆಂತ ಜೀವನ... ದುಃಖ, ದುಮ್ಮಾನ, ಭಾವನೆ ಇದ್ಯಾವುದರ ಅರ್ಥವೇ ಗೊತ್ತಿಲ್ಲದ ಮುಗ್ಧ ಜೀವನ...
ತರಗತಿಯಲ್ಲಿ ಹೊಸ ಸಮವಸ್ತ್ರ ಹಾಕಿಕೊಂಡು ಬಂದವರ ಬಟ್ಟೆಯ ಮೇಲೆ ಅದೇನೋ ಒಂದು ತೆರನಾದ ದೀರ್ಘ ಗಮನ... ಶಿಕ್ಷಕರು ಸ್ವಲ್ಪ ಹೊಗಳಿದರೆ ಸಾಕು ನಮಗೇನೋ ಒಲಿಂಪಿಕ್ಸ್ ಗೆದ್ದ ಸಂಭ್ರಮ.
ಬರೆಯಲು ಹೋದರೆ ಬಾಲ್ಯದ ನೆನಪುಗಳು ಸಾಲನ್ನು ಗೀಚುತ್ತಲೇ ಹೋಗುತ್ತದೆ. ಇಂದು ಜೂನ್ ತಿಂಗಳ ಪ್ರಾರಂಭ. ಬಾಲ್ಯ ಮತ್ತೆ ನೆನಪಾಯಿತು. ಅದಕ್ಕೆ ಗೀಚಿದೆ ಅಷ್ಟೆ.
-ಅರ್ಪಿತಾ ಕುಂದರ್
إرسال تعليق