20/30 ವರ್ಷ ವಯಸ್ಸಿನ ಹುಡುಗ ಹುಡುಗಿಯರು ಸಾಮಾನ್ಯವಾಗಿ ಮತ್ತು ಸಹಜವಾಗಿ ಪ್ರೀತಿ ಪ್ರೇಮ ಪ್ರಣಯ ಮತ್ತು ಅದಕ್ಕಾಗಿ ಮದುವೆಯ ರಂಗುರಂಗಿನ ಕನಸುಗಳನ್ನು ಕಾಣುತ್ತಾರೆ.
ಜೊತೆಗಾರರ ನಡುವೆ ಪ್ರೀತಿಯ ಮಾತು - ರೋಮಾಂಚನಗೊಳಿಸುವ ಅವರ ಧ್ವನಿ - ಅಪ್ಪುಗೆಯ ಸ್ಪರ್ಶಕ್ಕೆ ದೇಹ ಮನಸ್ಸು ಹಾತೊರೆಯುವುದು - ಮದುವೆಯ ಸುಂದರ ಕ್ಷಣಗಳು - ನಂತರದ ಪ್ರವಾಸ - ಸುತ್ತಾಟ - ಗೆಳೆಯರು ಸ್ನೇಹಿತರ ಆಮಂತ್ರಣ ಮತ್ತು ಅತಿಥಿ ಸತ್ಕಾರ. ಮಕ್ಕಳು ಅವರ ಪಾಲನೆ ಪೋಷಣೆ - ಸ್ವಂತ ಮನೆ ಕಾರು ಇತ್ಯಾದಿ ಇತ್ಯಾದಿಗಳನ್ನು ಪ್ರತಿಕ್ಷಣವೂ ಮನದಲ್ಲಿ ತಪಸ್ಸಿನಂತೆ ಜಪಿಸುತ್ತಿರುತ್ತಾರೆ.
ಮನೆಯವರು ನೋಡಿ ಒಪ್ಪಿ ಶಾಸ್ತ್ರೋಕ್ತವಾಗಿಯೋ, ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸಿಯೋ, ಸರಳವಾಗಿ ರಿಜಿಸ್ಟರ್ ಆಗಿಯೋ, ವಿರೋಧವಿದ್ದರೆ ಮರೆಮಾಚಿಯೋ ಒಟ್ಟಿನಲ್ಲಿ ಹೇಗೋ ಮದುವೆಯಾಗಿ ಸಂಸಾರ ಪ್ರಾರಂಭಿಸುತ್ತಾರೆ. ಇಂತಹ ಕೆಲವು ಕುಟುಂಬಗಳು ನಿಜಕ್ಕೂ ಅವರ ಕನಸಿನಂತೆ ತುಂಬಾ ಯಶಸ್ವಿಯಾಗಿ ಸಂತೋಷ ನೆಮ್ಮದಿಯಿಂದ ಬದುಕನ್ನು ಸಾಗಿಸುತ್ತಾರೆ. ಅವರು ಮತ್ತಷ್ಟು ಸಂತೋಷವಾಗಿರಲಿ ಎಂದು ನಾವೆಲ್ಲರೂ ಹಾರೈಸೋಣ.
ಈ ಅದೃಷ್ಟ ಹಲವರಿಗೆ ಇರುವುದಿಲ್ಲ. ಆಧುನಿಕ ಸಂಕೀರ್ಣ ಬದುಕಿನ ಇಂದಿನ ಸಮಯದಲ್ಲಿ, ಸಾವಿರಾರು ಕಾರಣಗಳಲ್ಲಿ, ಯಾವುದೋ ಸಂದರ್ಭದ ಒತ್ತಡದಿಂದ ಇಬ್ಬರಲ್ಲೂ ನಿಧಾನವಾಗಿ ಪ್ರಾರಂಭವಾಗುವ ಅಸಹನೆ ಅತೃಪ್ತಿ ಬೆಟ್ಟದಂತೆ ಬೆಳೆದು ಕೆಲವೇ ವರ್ಷಗಳಲ್ಲಿ ಅಧಿಕೃತ ಅಥವಾ ಅನಧಿಕೃತ ವಿಚ್ಚೇದನದ ಹಂತ ತಲುಪುತ್ತದೆ. ಇಬ್ಬರೂ ದೂರವಾಗುತ್ತಾರೆ.
ಇದು ಇಬ್ಬರಿಗೂ ಪರೋಕ್ಷವಾಗಿ ಯಾತನಾಮಯವೇ. ಮಕ್ಕಳು ಇಲ್ಲದಿದ್ದರೆ ಸ್ವಲ್ಪ ಪರವಾಗಿಲ್ಲ. ಮಕ್ಕಳು ಇದ್ದರೆ ಅದು ತುಂಬಾ ತ್ರಾಸದಾಯಕ. ಮಕ್ಕಳು ತಂದೆ ಅಥವಾ ತಾಯಿಯ ಬಳಿ ಉಳಿಯುತ್ತಾರೆ. ಇದನ್ನೇ ಸಿಂಗಲ್ ಪೇರೆಂಟಿಗ್ ಎನ್ನಲಾಗುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ತಾಯಿಯನ್ನೇ ಹಿಂಬಾಲಿಸುತ್ತಾರೆ. ಕೆಲವೊಮ್ಮೆ ತಂದೆ ಅಥವಾ ತಾಯಿಯ ಆಕಸ್ಮಿಕ ಸಾವು ಸಹ ಇದಕ್ಕೆ ಕಾರಣವಾಗುತ್ತದೆ.
ಇಲ್ಲಿ ಪೋಷಕರ ಸಹಕಾರವಿದ್ದು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದ್ದರೆ ಬದುಕು ಸ್ವಲ್ಪ ಚೆನ್ನಾಗಿಯೇ ನಡೆಯುತ್ತದೆ. ಆದರೆ ನಾನಾ ಕಾರಣಗಳಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದೆ 1/2/3 ಮಕ್ಕಳನ್ನು ಸಾಕುವ ಜವಾಬ್ದಾರಿ ಒಬ್ಬರಿಗೆ ಅದರಲ್ಲೂ ಮಹಿಳೆಗೆ ವರ್ಗಾವಣೆಯಾದರೆ ಅದು ಅತ್ಯಂತ ಭಯಾನಕ. ತಂದೆಯ ಬೆಂಬಲವಿಲ್ಲದ ಮಕ್ಕಳು, ಒಂಟಿ ಹೆಣ್ಣು, ಜನರ ತಿರಸ್ಕಾರ ಎಲ್ಲವೂ ಸೇರಿ ಬಹುದೊಡ್ಡ ಸವಾಲು ಎದುರಾಗುತ್ತದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎರಡೂ ಕಡೆ ಕೇವಲ ಕಷ್ಟ ನಿರಾಸೆ ಮತ್ತು ಸವಾಲುಗಳಲ್ಲದೆ ಮತ್ತೊಮ್ಮೆ ಬದುಕಿನ ಹೊಸ ಕನಸಿನ ಸ್ವಾತಂತ್ರ್ಯ ಸಹ ಸಿಗುತ್ತದೆ. ಮದುವೆ ಮತ್ತು ಸಂಸಾರ ಎಂಬುದು ಒಂದು ರೀತಿಯಲ್ಲಿ ಬಂಧನ ಮತ್ತು ಒತ್ತಡ ಇರುತ್ತದೆ. ಒಡಕಿನ ಸಂಸಾರದಲ್ಲಿ ಈ ಒತ್ತಡ ತುಂಬಾ ತುಂಬಾ ಜಾಸ್ತಿ ಮತ್ತು ನಿರಂತರ ಇರುತ್ತದೆ. ಒಮ್ಮೆ ಬೇರೆಯಾದರೆ ಈ ಒತ್ತಡ ಕಡಿಮೆಯಾಗಿ ಆರಾಮ ಉಸಿರಾಟದ ಅನುಭವವಾಗಿ ಮನಸ್ಸು ಉಲ್ಲಾಸವಾಗುತ್ತದೆ. ಹೊಸ ಹೊಸ ಕನಸುಗಳು ಮತ್ತೊಮ್ಮೆ ಮೂಡತೊಡಗುತ್ತದೆ. ಕಳೆದುಹೋಗಿದ್ದ.
'ನಾನು' ಮತ್ತೆ ನಮಗೆ ಸಿಗುತ್ತದೆ:
ಇಲ್ಲಿ ವಿಚ್ಚೇದನದಷ್ಟು ತೀವ್ರ ಘಟನೆ ಸಂಭವಿಸುವುದರಿಂದ ಯಾರು ಒಳ್ಳೆಯವರು ಯಾರು ಕೆಟ್ಟವರು ಅಥವಾ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವುದು ಕಷ್ಟ. ಇದಕ್ಕೆ ನಮ್ಮ ಸಾಮಾಜಿಕ ವ್ಯವಸ್ಥೆಯೂ ಸೇರಿ ಹಲವಾರು ಆಯಾಮಗಳು ಇರುತ್ತವೆ. ಒಟ್ಟಿನಲ್ಲಿ ಹೊಂದಾಣಿಕೆ ಸಾಧ್ಯವಾಗಲಿಲ್ಲ ಎಂದು ಸರಳವಾಗಿ ಹೇಳಬಹುದು.
ಸದ್ಯದ ಭಾರತದ ಪರಿಸ್ಥಿತಿಗೆ ಇಬ್ಬರೂ ಒಟ್ಟಾಗಿ ಇರುವುದು ಮೊದಲನೇ ಮತ್ತು ಅತ್ಯುತ್ತಮ ಆಯ್ಕೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಸಿಂಗಲ್ ಪೇರೆಂಟಿಂಗ್ ವ್ಯವಸ್ಥೆ ಅದಕ್ಕೆ ಪರ್ಯಾಯ ವಾಗಿರುವುದರಿಂದ ಅದನ್ನು ಒಪ್ಪಿಕೊಂಡು ಛಲದಿಂದ ಉತ್ಸಾಹದಿಂದ ಯಾವುದೇ ಪಶ್ಚಾತ್ತಾಪವಿಲ್ಲದೆ ಅನುಭವಿಸಬೇಕು ಮತ್ತು ಬದುಕಬೇಕು. ನಮ್ಮ ಸಮಾಜ ಕೂಡ ಇದನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದನ್ನು ಒಂದು ಅಪರಾಧ ಅಥವಾ ದುರದೃಷ್ಟದ ಪರಿಸ್ಥಿತಿ ಎಂದು ವಿಶ್ಲೇಷಿಸಬಾರದು.
ಆಯ್ಕೆ ಇದ್ದಲ್ಲಿ ಜೊತೆಯಾಗಿರುವುದು ಬದುಕಿಗೆ ಉತ್ತಮ. ಇಲ್ಲದಿದ್ದಲ್ಲಿ ಸಿಂಗಲ್ ಪೇರೆಂಟಿಂಗ್ ಸಾಧನೆಗೆ ಅತ್ಯುತ್ತಮ.
-ವಿವೇಕಾನಂದ. ಹೆಚ್.ಕೆ.
9844013068
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق