ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕೃಷಿಕರನ್ನು ಯಾಮಾರಿಸಲು ಬರುವ ಗೊಬ್ಬರ ಕಂಪನಿಗಳ ಟ್ರೇಡ್ ಸೀಕ್ರೆಟ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಪ್ರಾತಿನಿಧಿಕ ಚಿತ್ರ


ಕೆಲವು ಸಮಯದ ಹಿಂದೆ ತುರ್ತು ಕೆಲಸದ ಮೇಲೆ ನಾನು ತೋಟದಲ್ಲಿದ್ದೆ.  ಮನೆಯಿಂದ ಕರೆಬಂತು ಯಾರೋ ಇಬ್ಬರು ಭೇಟಿಗಾಗಿ ಬಂದಿದ್ದಾರೆ. ಎಷ್ಟೇ ತುರ್ತು ಕೆಲಸಗಳಿದ್ದರೂ ಬಂದವರನ್ನು ಕಾಯಿಸುವುದು ಹಳ್ಳಿಯ, ಕೃಷಿಕನ ಸಂಸ್ಕೃತಿ ಅಲ್ಲ.  ಆ ಕಾರಣದಿಂದ ಮನೆಗೆ ಬಂದೆ. ನಮಸ್ಕಾರ ದೊಂದಿಗೆ ಮಾತು ಸುರುವಾಯಿತು. ಬಂದವರು ಅದಾವುದೋ ಸಾವಯವ ಗೊಬ್ಬರದ ಉತ್ಪಾದಕರಂತೆ ಅದರ ಬಗ್ಗೆ ಹೇಳಲು ಹೊರಟರು.   ಮಳೆಗಾಲ ಮುಗಿಯುತ್ತಾ ಬಂದಂತೆ ಗೊಬ್ಬರ ಉತ್ಪಾದಕ ಕಂಪನಿಯವರು ಮನೆಮನೆಗಳಿಗೆ ಧಾಳಿ ಇಡುವುದು ಮಾಮೂಲು. ಸಾಧಾರಣ ಹದಿನೈದು ದಿನಕ್ಕೊಮ್ಮೆಯಾದರೂ ಯಾರಾದರೊಬ್ಬರು ಬರುತ್ತಾರೆ. ಇವರನ್ನು ಯಾವ ಗೊಬ್ಬರವು ಬೇಡ ಎಂದು ಸಾಗಹಾಕುವುದು ನನ್ನ ಅಭ್ಯಾಸ. ಅಂತೆಯೇ ಇವರನ್ನೂ ಸಾಗ ಹಾಕಲು ಪ್ರಯತ್ನಿಸಿದೆ.

ಆದರೆ ಬಂದವರು ಅಷ್ಟು ಸುಲಭದಲ್ಲಿ ಹೊರಡಲು ತಯಾರಿರಲಿಲ್ಲ. ತಮ್ಮ ಗೊಬ್ಬರದ ವಿಶೇಷತೆಯನ್ನು ವಿವರಿಸಲು ಹೊರಟರು.  ಗೊಬ್ಬರದ ಬಗ್ಗೆ ನನ್ನದು ಯಾವುದೇ ತಕರಾರು ಇಲ್ಲ. ಆದರೆ ನೀವು ಎಷ್ಟು ವರ್ಷದಿಂದ ಈ ಗೊಬ್ಬರವನ್ನು ಮಾಡುತ್ತಿದ್ದೀರಿ ಮತ್ತು ಅದರಲ್ಲಿರುವ ಮೂಲವಸ್ತುಗಳು ಏನು ಎಂದು ವಿವರಿಸಿ ಅಂದೆ. ಮೂಲ ವಸ್ತುಗಳ ಬಗ್ಗೆ ಅದೆಲ್ಲಾ ಟ್ರೇಡ್ ಸೀಕ್ರೆಟ್ ಬಿಟ್ಟುಕೊಡುವ ಹಾಗೆ ಇಲ್ಲ ಮತ್ತು ತುಂಬಾ ಜನ ಉಪಯೋಗಿಸಿ ನೋಡಿ ಚೆನ್ನಾಗಿದೆ ಅಂದಿದ್ದಾರೆ ಅಂದರು. ನನಗೆ ಗೊತ್ತಿದೆ ಇಂತ ಅದೆಷ್ಟೋ ಕಂಪೆನಿಗಳು ಹುಟ್ಟುತ್ತವೆ ಹುಟ್ಟಿದಂತೆ ಸಾಯುತ್ತವೆ. ಆ ಮಧ್ಯದಲ್ಲಿ  ಒಂದಿಷ್ಟು ಹಣ ಮಾಡಿಕೊಳ್ಳುತ್ತವೆ. ಮತ್ತೆ ಒಂದೆರಡು  ವರ್ಷದಲ್ಲಿ ಹೊಸ ವೇಷ ಹಾಕಿ ಬರುತ್ತವೆ. ನನಗೆ ಮನಸ್ಸಿನಲ್ಲಿ ಸ್ವಲ್ಪ ರೇಗಿತು.

ಆದರೂ ಸಹಿಸಿಕೊಂಡು ಬನ್ನಿ ನಾನೊಂದು ಫ್ಯಾಕ್ಟರಿ ಇಟ್ಟಿದ್ದೇನೆ.  ಯಾವ ಟ್ರೇಡ್ ಸೀಕ್ರೆಟ್ ಇಲ್ಲ ಎಂದು ನನ್ನ ಹಟ್ಟಿಯೊಳಗೆ ಕರೆದುಕೊಂಡು ಹೋದೆ. ನಿಮ್ಮ ಫ್ಯಾಕ್ಟರಿಯಲ್ಲಿ ಬರುವ ಗೊಬ್ಬರಕ್ಕೆ ಒಂದೆರಡು ವರ್ಷದ ಇತಿಹಾಸ. ಆದರೆ ಇದೋ ನೋಡಿ ನನ್ನ ಫ್ಯಾಕ್ಟರಿಯ ಗೊಬ್ಬರಕ್ಕೆ ಸಹಸ್ರಮಾನದ ಇತಿಹಾಸ. ಗುಣಮಟ್ಟಕ್ಕೆ ಸಾಟಿ ಇಲ್ಲ. ಎಲ್ಲೂ ದೋಷ ಮಾಡಿದ ಇತಿಹಾಸ ಇಲ್ಲ.ನನ್ನ ತೋಟದ ಹುಲ್ಲುಗಳು ಮೂಲವಸ್ತುಗಳು. ಇವತ್ತು ತಿಂದಲ್ಲಿ ನಾಳೆ ಗೊಬ್ಬರವಾಗಿ ಹೊರಬರುತ್ತದೆ.  ಯಾವುದೇ ದೊಡ್ಡ ದೊಡ್ಡ ಯಂತ್ರಗಳು ಬೇಡ.ತಂತ್ರಜ್ಞಾನ ಬೇಡ.  ದುಬಾರಿಯಾದ ವಿದ್ಯುತ್ತಿನ ಅಗತ್ಯವಿಲ್ಲ. ಗೊಬ್ಬರ ಸಂಗ್ರಹಣೆಗೆ ದಾಸ್ತಾನು ಕೊಠಡಿ ಬೇಡ.

ಫ್ಯಾಕ್ಟರಿಗಳಲ್ಲಿ ಆದರೆ ಶುಚಿತ್ವಕ್ಕಾಗಿ ಬಳಸಿದ ನೀರು ಮತ್ತೆ ಭೂಮಿಯನ್ನು, ನದಿ ಮೂಲಗಳನ್ನು, ಮಾಲಿನ್ಯ ಗೊಳಿಸುತ್ತದೆ. ಆದರೆ ಇಲ್ಲಿ ಬಳಸಿದ ನೀರು ಮತ್ತೆ ಗೊಬ್ಬರವಾಗಿ ಭೂಮಿಗೆ ಸೇರುತ್ತದೆ. ಇದಲ್ಲದೆ ಇನ್ನೂ ಕೆಲವು ಲಾಭಗಳನ್ನು ನೋಡಿ. ಎಷ್ಟೊಂದು ಉಪ ಉತ್ಪನ್ನಗಳನ್ನು ಈ ಫ್ಯಾಕ್ಟರಿ ನೀಡಬಲ್ಲುದು. ನಮ್ಮ-ನಿಮ್ಮ ಪ್ರತಿಯೊಬ್ಬರ ಅಗತ್ಯಕ್ಕೆ ಬೇಕಾದ ಅಮೃತ ಸಮಾನವಾದ ಹಾಲನ್ನು ನೀಡುತ್ತದೆ. ಹಾಲಿನ ಮೂಲಕ ಹಾಲಿನ ಉಪ ಉತ್ಪನ್ನಗಳಾದ ಮೊಸರು, ಬೆಣ್ಣೆ, ಮಜ್ಜಿಗೆ,ತುಪ್ಪ ಮತ್ತೆ ಅವುಗಳಿಂದ ಅನೇಕ ಬಗೆಯ ಔಷಧಿಗಳು. ಎಷ್ಟೊಂದು ಉತ್ಪನ್ನಗಳು ಸಾಲದುದಕ್ಕೆ ಮನೆ ಬಳಕೆಗಾಗಿ ಇರುವ ಅನಿಲ. ನಿಮ್ಮ ಫ್ಯಾಕ್ಟರಿಯಲ್ಲಿ ಬರುವ ಒಂದಾದರೂ ಉಪ ಉತ್ಪನ್ನಗಳನ್ನು ವಿವರಿಸುವಿರೇ? ಕೇಳುತ್ತಿದ್ದಂತೆ ಬಂದವರು ಮೌನವಾದರು ಮತ್ತು ಮೆಲ್ಲನೆ ಜಾಗ ಖಾಲಿ ಮಾಡಿದರು.

ಬಂದವರು ಹೊರಟುಹೋದರೂ ನನ್ನ ಮನಸ್ಸು ಮತ್ತೂ ಉಲಿಯುತ್ತಿತ್ತು, ಹೇಗೆ ಲೆಕ್ಕಚಾರ ಹಾಕಿದರು ಹಾಲಿಗೆ (ಜೇರ್ಸಿ ಎಚ್ಎಫ್ ಆದರೂ ಕೂಡ ) ಲೀಟರಿಗೆ 50 ರೂಪಾಯಿಯ ಮೇಲೆ ಹಾಲಿನ ಉತ್ಪಾದನಾ ಖರ್ಚು ಇರುವಾಗ 32 ರೂಪಾಯಿಗೆ ಹಾಲು ಕೊಡುವಂತ ರೈತ ಅದೆಷ್ಟು ಸಹಾಯಧನದಲ್ಲಿ ಗ್ರಾಹಕರಿಗೆ,ಸರಕಾರಕ್ಕೆ ಹಾಲನ್ನು ಕೊಡುತ್ತಾನೆ. ಗೊಬ್ಬರದ ಅನಿಲ ಸ್ಥಾವರದ ಮೂಲಕವಾಗಿ  ಸರಕಾರದ ಸಹಾಯ ಧನವಿಲ್ಲದೆ ಮನೆಯಲ್ಲಿ ಅಡುಗೆ ಮಾಡುತ್ತಾನೆ. ಆ ಮೂಲಕವಾಗಿ ಸರಕಾರದ ಬೊಕ್ಕಸಕ್ಕೆ ಅದೆಷ್ಟು ಹಣವನ್ನು ಉಳಿಸಿಕೊಡುತ್ತಾನೆ. ಕೃತಕ ಗೊಬ್ಬರಕ್ಕೆ ನೀಡುವ ಅದೆಷ್ಟು ಕೋಟಿ ಸಹಾಯಧನವನ್ನು ಸರಕಾರಕ್ಕೆ ಉಳಿಸಿಕೊಡುತ್ತಾನೆ? ಇದೆಲ್ಲಾ ಬಂದುದು ನಮ್ಮ ಗೋ ಎಂಬ ಫ್ಯಾಕ್ಟರಿಯಿಂದಲ್ಲವೇ? ಈ ಕಾರ್ಖಾನೆಗೆ ಸಮನಾದ ಬೇರೆ ಕಾರ್ಖಾನೆ ಇರಲು ಸಾಧ್ಯವೇ?  ಇಂತಹ ಅದ್ಭುತವಾದ ಕಾರ್ಖಾನೆಯನ್ನು ಉಳಿಸಿ ಬೆಳೆಸ ಬೇಡವೇ?

ಹಾಗಾಗಿ ನೆರೆ ಕೆನ್ನೆಗೆ,ತೆರೆ ಗಲ್ಲಕೆ,

ಶರೀರ ಗೂಡುವೋಗದ ಮುನ್ನ,

ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗುವ ಮುನ್ನ,

ಕಾಲ ಮೇಲೆ ಕೈಯನೂರಿ ಕೋಲ ಹಿಡಿಯುವ ಮುನ್ನ,

ಮುಪಿಂದೊಪ್ಪಡರುವ ಮುನ್ನ, ಮೃತ್ಯು ಮುಟ್ಟುವ ಮುನ್ನ,  ಗೋಸಂಪತ್ತು ನಾಶವಾಗುವ ಮುನ್ನ, ಮುಂದಿನ ಪೀಳಿಗೆಯು ಜರಿಯುವ ಮುನ್ನ, ಕೂಡಲಸಂಗಮನ ನೆನೆಯುತ್ತಾ ಮತ್ತೆ ಮನೆಮನೆಯಲ್ಲೂ ಕಟ್ಟೋಣ ನಾವು ಗೋಲೋಕವನ್ನು. ಆ ಮೂಲಕ ಸುಂದರ ಭೂಲೋಕವನ್ನು.

-ಎ.ಪಿ. ಸದಾಶಿವ ಮರಿಕೆ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم