ಬೃಹತ್ ಆಸ್ಪತ್ರೆಗಳಲ್ಲಿ ವ್ಯೆದ್ಯಕೀಯ ಸಾಫ್ಟ್‌ವೇರ್‌ಗಳು ಎಷ್ಟರ ಮಟ್ಟಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿವೆ ಎಂದರೆ, ಈ ಸಾಫ್ಟ್‌ವೇರ್‌ಗಳು ಅರೆ ಕ್ಷಣ ಕಾರ್ಯ ನಿರ್ವಹಿಸದಿದ್ದರೆ ಇಡೀ ಆಸ್ಪತ್ರೆಯ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿ ಬಿಡುತ್ತದೆ. ತುರ್ತು ಚಿಕಿತ್ಸಾ ವಿಭಾಗವಾಗಲಿ, ಶಸ್ತ್ರ ಚಿಕಿತ್ಸಾ ವಿಭಾಗವಾಗಲಿ, ಹೊರ ರೋಗಿಗಳ ಘಟಕವಾಗಲಿ ಅಥವಾ ಒಳ ರೋಗಿಗಳ ಘಟಕವಾಗಲಿ, ರೋಗಿಗಳ ದಾಖಲಾತಿ (ಅಡ್ಮಿಶನ್), ರೋಗಿಗಳ ಬಿಡುಗಡೆ ಎಲ್ಲವೂ ನಿಂತು ಹೋಗುತ್ತವೆ. ಇಂತಹ ಸಾಫ್ಟ್‌ವೇರ್‌ಗಳು ವ್ಯೆದ್ಯಕೀಯ ಕ್ಷೇತ್ರದಲ್ಲಿ ಹೇಗೆ ತನ್ನ ಅಸ್ತಿತ್ವವನ್ನು ಸ್ಥಾಪಿಸಿದವು ಎಂಬುದನ್ನು ಸ್ವಲ್ಪ ಮೆಲುಕು ಹಾಕೋಣ.
ಸರಿ ಸುಮಾರು 40 ರಿಂದ 50 ವರ್ಷಗಳ ಹಿಂದೆ ಡಿಜಿಟಲ್ ತಂತ್ರಜ್ಞಾನ (Digital Technology) ಇತರೇ ಕ್ಷೇತ್ರಗಳಂತೆ ವ್ಯೆದ್ಯಕೀಯ ಕ್ಷೇತ್ರದಲ್ಲಿಯೂ ತುಂಬಾ ಬಾಲ್ಯಾವಸ್ಥೆಯಲ್ಲಿತ್ತು. ಆಗ ರೋಗ ಶೋಧಕ ಯಂತ್ರಗಳು ಅಥವಾ ಅಭೀಕ್ಷಣ ಯಂತ್ರಗಳು (Scanners or Modalities like X-Ray, Computed Tomography-CT, Magnetic Resonance Imaging-MRI) ಅಂಬೆಗಾಲಿಡುತ್ತಾ ತಕ್ಕ ಮಟ್ಟಿಗೆ ವ್ಯೆದ್ಯಕೀಯ ಕ್ಷೇತ್ರದಲ್ಲಿ ರೋಗ ಪತ್ತೆ ಹಚ್ಚುವಲ್ಲಿ ತಮ್ಮ ಕೊಡುಗೆಗಳನ್ನು ನೀಡುತ್ತಾ ಅಭಿವೃದ್ಧಿ ಹೊಂದುತ್ತಿದ್ದವು. ಕ್ಷ-ಕಿರಣ (X-Ray) ಯಂತ್ರವು ವ್ಯಾಪಕವಾಗಿ ಎಲ್ಲಾ ಆಸ್ಪತ್ರೆಗಳಲ್ಲಿಯೂ ಉಪಯೋಗಿಸುತ್ತಿದ್ದರೂ, ಅವುಗಳು ಡಿಜಿಟಲೀಕರಣಗೊಂಡಿರಲಿಲ್ಲ. ನಮ್ಮ ದೇಹದ ಅಂಗಗಳ ಕ್ಷ-ಕಿರಣ (X-Ray) ಚಿತ್ರವನ್ನು ಚಿತ್ರಪಟಲದ (Film Sheet) ಮೇಲೆಯೇ ಸೆರೆ ಹಿಡಿಯಲಾಗುತ್ತಿತ್ತು. ಉಳಿದ ಅಭೀಕ್ಷಣ ಯಂತ್ರಗಳು (CT, MRI) ವ್ಯಾಪಕವಾಗಿ ಅಸ್ತಿತ್ವದಲ್ಲಿರಲಿಲ್ಲ. ಆದರೆ ಕೆಲವೇ ಕೆಲವು ಬೃಹತ್ ಆಸ್ಪತ್ರೆಗಳು ಇವುಗಳನ್ನು ಉಪಯೋಗಿಸುತ್ತಿದ್ದವು ಹಾಗೂ ದೇಹದ ಅಂಗಗಳ ಚಿತ್ರಣವನ್ನು ಚಿತ್ರ ಪಟಲಗಳಲ್ಲಿಯೇ (Film Sheet) ಸೆರೆ ಹಿಡಿಯಲಾಗುತ್ತಿತ್ತು. ಶಬ್ಧ ಶೋಧಕ (Ultra Sound) ಯಂತ್ರವು ಅಸ್ತಿತ್ವದಲ್ಲಿತ್ತು. ಹಾಗೂ ಬಳಕೆಯಾಗುತ್ತಿತ್ತು. ಆದರೆ ಅಷ್ಟೊಂದು ಅಭಿವೃದ್ಧಿ ಹೊಂದಿರಲಿಲ್ಲ.
ಸುಮಾರು 1980- 90ರ ದಶಕದ ಮಧ್ಯದಲ್ಲಿ ಪ್ರಪ್ರಥಮವಾಗಿ ಈ ಅಭೀಕ್ಷಣ ಯಂತ್ರಗಳು (Scanners or Modalities) ಡಿಜಿಟಲ್ ಚಿತ್ರಣವನ್ನು (Digital Images) ಕೊಡುವಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದಿದವು ಹಾಗೂ ಬೇರೆ ಬೇರೆ ಕಂಪೆನಿಗಳು ಡಿಜಿಟಲ್ ಅಭೀಕ್ಷಣ ಯಂತ್ರಗಳನ್ನು (Digital Scanners) ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದ್ದವು. ಆದರೆ ಇದು ವ್ಯೆದ್ಯಕೀಯ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಒಂದು ಬಹು ದೊಡ್ಡ ಸಮಸ್ಯೆಯನ್ನು ಹುಟ್ಟು ಹಾಕಿತು. ಅದೇನೆಂದರೆ "ಭಿನ್ನ ಮಾರಾಟಗಾರರ ಹೊಂದಾಣಿಕೆಯಿಲ್ಲದ ಸಮಸ್ಯೆ (Cross Vendor Incompatibility Issue)'. ಅಂದರೆ ಒಂದು ಕಂಪೆನಿಯ ಅಭೀಕ್ಷಣ ಯಂತ್ರದಿಂದ (Scanner) ಸೆರೆ ಹಿಡಿದ ಡಿಜಿಟಲ್ ಚಿತ್ರವು ತನ್ನದೇ ಆದ ಜೋಡಣಾ ಸ್ವರೂಪ (Encoding Format) ಅಥವಾ ಜೋಡಣಾ ನಿಯಮಗಳನ್ನು (Encoding Protocols) ಹೊಂದಿದ್ದವು. ಹಾಗಾಗಿ ಈ ಚಿತ್ರಗಳು ಬೇರೆ ಕಂಪೆನಿಯ ಅದೇ ಅಭೀಕ್ಷಣ ಯಂತ್ರವು (Scanner) ಸೆರೆ ಹಿಡಿದ ಡಿಜಿಟಲ್ ಚಿತ್ರಕ್ಕಿಂತ (Digital Image) ಜೋಡಣಾ ಸ್ವರೂಪದಲ್ಲಿ (Encoding Format) ಭಿನ್ನವಾಗಿರುತ್ತಿದ್ದವು. ಇದರಿಂದಾಗಿ ಆಯಾ ಕಂಪೆನಿಯ ಸಾಫ್ಟ್‌ವೇರ್‌ಗಳಷ್ಟೇ ತಮ್ಮ ಕಂಪೆನಿಯ ಯಂತ್ರಗಳು ಸೆರೆ ಹಿಡಿದ ಡಿಜಿಟಲ್ ಚಿತ್ರಗಳನ್ನು (Digital Image) ಅಭಿವೃದ್ಧಿ ಪಡಿಸಿ ಗಣಕ ಯಂತ್ರದ ಪರದೆಯ (Computer Screen) ಮೇಲೆ ಪ್ರದರ್ಶಿಸಲು ಶಕ್ತವಾಗುತ್ತಿದ್ದವು.
ಆದರೆ ಒಂದು ಕಂಪೆನಿಯ ಡಿಜಿಟಲ್ ಚಿತ್ರವನ್ನು ಬೇರೆ ಕಂಪೆನಿಯ ಸಾಫ್ಟ್‌ವೇರ್‌ಗಳು ಅಭಿವೃದ್ಧಿಪಡಿಸಿ ಪ್ರದರ್ಶಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ "ಅಮೆರಿಕನ್ ಕಾಲೇಜ್ ಆಫ್ ರೇಡಿಯೊಲಜಿ-ಎಸಿರ್ (American College of Radiology-ACR)' ಮತ್ತು 'ನ್ಯಾಶನಲ್ ಎಲೆಕ್ಟ್ರಿಕಲ್ ಮಾನ್ಯುಫ್ಯಾಕ್ಚರರ್ಸ್ ಅಸೋಸಿಯೇಶನ್ (National Electrical Manufacturers Association -NEMA)' ಎಂಬ ಎರಡು ಅಮೇರಿಕಾದ ಸಂಸ್ಥೆಗಳು ಒಂದು ಮಾನದಂಡವನ್ನು (Standard) ಅಭಿವೃದ್ಧಿಪಡಿಸಲು ಮುಂದಾದವು. ಅದೇನೆಂದರೆ ಯಾವದೇ ಕಂಪೆನಿಯು ತನ್ನದೇ ಆದ ಜೋಡಣಾ ಸ್ವರೂಪವನ್ನು (Encoding Format) ಬಳಸುವಂತಿಲ್ಲ, ಬದಲಾಗಿ ಅವುಗಳು ಆ ಮಾನದಂಡದಲ್ಲಿ (Standard) ಪ್ರತಿಪಾದಿಸಲಾಗಿರುವ ನಿಯಮಾವಳಿಗೆ ಅನುಗುಣವಾಗಿಯೇ ಡಿಜಿಟಲ್ ಚಿತ್ರಗಳನ್ನು (Digital Images) ಸೆರೆ ಹಿಡಿಯಬೇಕಾಗುವುದು. ಈ ಮಾನದಂಡವನ್ನು "ಡಿಜಿಟಲ್ ಇಮೇಜಿಂಗ್ ಏಂಡ್ ಕಮ್ಯೂನಿಕೇಶನ್ ಇನ್ ಮೆಡಿಸಿನ್ (Digital Imaging And Communication In Medicine-DICOM)' ಎಂದು ಕರೆಯಲಾಗುವುದು.
ಈ ಮಾನದಂಡವು ಎಲ್ಲಾ ಅಂಶಗಳನ್ನು ಒಳಗೊಂಡ ವಿಶ್ವಕೋಶವಾಗಿದೆ. ಇದರಲ್ಲಿ ವ್ಯೆದ್ಯಕೀಯ ಚಿತ್ರಗಳನ್ನು ಒಂದು ಗಣಕ ಯಂತ್ರದಿಂದ (Computer ಇನ್ನೊಂದು ಗಣಕ ಯಂತ್ರಕ್ಕೆ (Computer) ತಾಂತ್ರಿಕವಾಗಿ ಕಳುಹಿಸುವಾಗ ಅನುಸರಿಸಬೇಕಾದ ನಿಯಮಗಳು (Protocols), ವ್ಯೆದ್ಯಕೀಯ ಚಿತ್ರಗಳನ್ನು (Medical Images) ಗಣಕ ಯಂತ್ರಗಳಲ್ಲಿ ಶೇಖರಿಸಿ (Storage) ಇಡುವಾಗ ಅನುಸರಿಸಬೇಕಾದ ರಚನಾತ್ಮಕ ಅಂಶಗಳು ಮತ್ತು ಎರಡು 'ಡೈಕಾಮ್ (DICOM)' ಸಾಫ್ಟ್‌ವೇರ್‌ಗಳ ನಡುವಿನ ಸಂಭಾಷಣೆ (Communication) ಹೇಗೆ ಆಗುತ್ತದೆ ಎನ್ನುವುದರ ಬಗ್ಗೆ ಹಾಗೂ ಇನ್ನಿತರ ಹಲವಾರು ಅಂಶಗಳನ್ನು ಸವಿಸ್ತಾರವಾಗಿ 21 ವಿಭಾಗಗಳಲ್ಲಿ ವಿವರಿಸಲಾಗಿದೆ.
ಯಾವುದೇ ಕಂಪೆನಿಯು ಯಾವುದೇ ವ್ಯೆದ್ಯಕೀಯ ಸಾಫ್ಟ್‌ವೇರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ 'DICOM' ಮಾನದಂಡದ (Standard) ಯಾವ ಯಾವ ಅಂಶಗಳನ್ನು ಆ ಸಾಫ್ಟ್‌ವೇರ್ ಬಳಕೆ ಮಾಡಿಕೊ0ಡಿದೆ ಎಂಬುದನ್ನು ಲಿಖಿತ ರೂಪದಲ್ಲಿ ಬಿಡುಗಡೆಗೊಳಿಸಬೇಕಾಗುತ್ತದೆ. ಈ ದಾಖಲೆಯನ್ನು 'ಡೈಕಾಮ್- ಬದ್ಧತೆಯ ದಾಖಲೆ (DICOM Conformance Statement)' ಎಂದು ಕರೆಯಲಾಗುವುದು. ಇದರಿಂದಾಗಿ ವ್ಯೆದ್ಯಕೀಯ ಕ್ಷೇತ್ರದಲ್ಲಿ ಸಾಫ್ಟ್‌ವೇರ್‌ಗಳ ಬಳಕೆಯು ಕ್ಷಿಪ್ರವಾಗಿ ಅಭಿವೃದ್ಧಿ ಕಂಡವು. ಬೃಹತ್ ಆಸ್ಪತ್ರೆಗಳು ಬೇರೆ ಬೇರೆ ಕಂಪೆನಿಯ ಅಭೀಕ್ಷಣ ಯಂತ್ರಗಳನ್ನು (Digital Scanners) ತಮ್ಮಲ್ಲಿ ಅಳವಡಿಸಿ, ಯಾವುದೇ ಕಂಪೆನಿಯ ಸಾಫ್ಟ್‌ವೇರ್‌ಗಳನ್ನು ಬಳಸಿ, ವ್ಯೆದ್ಯಕೀಯ ಚಿತ್ರಗಳನ್ನು ಅಭಿವೃದ್ಧಿಪಡಿಸಿ ಗಣಕ ಯಂತ್ರಗಳ ಪರದೆಗಳಲ್ಲಿ (Computer Screen) ಪ್ರದರ್ಶಿಸಲು ಶಕ್ತವಾದವು.
ಆಸ್ಪತ್ರೆಗಳಲ್ಲಿ ಅಭೀಕ್ಷಣ ಯಂತ್ರಗಳ (Scanners) ಕಾರ್ಯವನ್ನು ನಿರ್ವಹಿಸುವ ಹಾಗೂ ಅಭೀಕ್ಷಣವನ್ನು (Scanning) ಮಾಡಲು ಉಪಯೊಗಿಸುವ ಸಾಫ್ಟ್‌ವೇರ್ ಅನ್ನು "ಎಕ್ವಿಸಿಶನ್ ಸಾಫ್ಟ್‌ವೇರ್ (Acquisition Software)', “ಮೊಡಾಲಿಟಿ ಸಾಫ್ಟ್‌ವೇರ್ (Modality Software)' ಅಥವಾ "ಸ್ಕಾನಿಂಗ್ ಸಾಫ್ಟ್‌ವೇರ್ (Scanning Software)" ಎಂದು ಕರೆಯಲಾಗುವುದು. ಹೀಗೆ ಸೆರೆ ಹಿಡಿದ ವ್ಯೆದ್ಯಕೀಯ ಚಿತ್ರಗಳನ್ನು ಅಭೀಕ್ಷಣ ಯಂತ್ರಗಳ ಕಾರ್ಯವನ್ನು ನಿರ್ವಹಿಸುವ ಗಣಕ ಯಂತ್ರದಲ್ಲಿ ತುಂಬಾ ಸಮಯದ ವರೆಗೆ ಶೇಖರಿಸಿ ಇಡಲಾಗುವುದಿಲ್ಲ. ಯಾಕೆಂದರೆ ಈ ಗಣಕ ಯಂತ್ರದಲ್ಲಿ ಹೆಚ್ಚಿನ ಶೇಖರಣಾ ಸಾಮರ್ಥ್ಯ (Storage Capacity) ಇರುವುದಿಲ್ಲ.
ಹೆಚ್ಚೆಂದರೆ ಒಂದು ದಿನದ ಮಟ್ಟಿಗೆ ಸೆರೆ ಹಿಡಿದ ವ್ಯೆದ್ಯಕೀಯ ಚಿತ್ರಗಳು ಈ ಗಣಕ ಯಂತ್ರದಲ್ಲಿ ಲಭ್ಯವಿರುತ್ತವೆ. ಹಾಗಾಗಿ ಈ ವ್ಯೆದ್ಯಕೀಯ ಚಿತ್ರಗಳನ್ನು ದೀರ್ಘಾವಧಿಯ ಶೇಖರಣಾ ಸಾಮರ್ಥ್ಯವುಳ್ಳ (Long Term Storage) ಗಣಕ ಯಂತ್ರಗಳಿಗೆ ತಾಂತ್ರಿಕವಾಗಿ ಕಳುಹಿಸಿ ಕೊಡಲಾಗುವುದು. ಇದನ್ನು "ದೀರ್ಘಾವಧಿಯ ಶೇಖರಣೆ (Archiving) ಎಂದು ಕರೆಯುತ್ತಾರೆ. ಈ ತರಹದ ದೀರ್ಘಾವಧಿಯ ಶೇಖರಣೆಯನ್ನು ನಿರ್ವಹಿಸುವ ಸಾಫ್ಟ್‌ವೇರನ್ನು "ಚಿತ್ರ ಶೇಖರಣೆ ಮತ್ತು ಸಂಭಾಷಣಾ ವ್ಯವಸ್ಥೆ- Communication System (PACS)' ಎಂದು ಕರೆಯಲಾಗುತ್ತದೆ. ಈ ಸಾಫ್ಟ್‌ವೇರ್ ಬಳಸಿ ಆಸ್ಪತ್ರೆಗಳು ಯಾವಾಗ ಬೇಕಾದರೂ ಹಳೆಯ ರೋಗಿಗಳ ವ್ಯೆದ್ಯಕೀಯ ಚಿತ್ರಗಳನ್ನು ದೀರ್ಘಾವಧಿಯ ಶೇಖರಣಾ ವ್ಯವಸ್ಥೆಯಿಂದ ಪುನ: ತರಿಸಿ ಗಣಕಯಂತ್ರದ ಪರದೆಯ ಮೇಲೆ ಪ್ರದರ್ಶಿಸಬಹುದು.
ಅಭೀಕ್ಷಣ ಯಂತ್ರಗಳು (Scanners) ಸೆರೆಹಿಡಿದ ವ್ಯೆದ್ಯಕೀಯ ಚಿತ್ರಗಳು ಆ ಕೂಡಲೆ ವೀಕ್ಷಣೆ ಮಾಡಲು ಯೋಗ್ಯವಾಗಿರುವುದಿಲ್ಲ. ಅವುಗಳನ್ನು ಗಣಕ ಯಂತ್ರಗಳಲ್ಲಿ ಬೇರೆ ಬೇರೆ ಸಹಾಯಕಗಳನ್ನು (Tools) ಬಳಸಿ ಅಭಿವೃದ್ಧಿ ಪಡಿಸಬೇಕಾಗುತ್ತದೆ. ಇದನ್ನು 'ಅಭೀಕ್ಷಣದ ನಂತರದ ಅಭಿವೃದ್ಧಿ (Post Processing)' ಎಂದು ಕರೆಯುತ್ತಾರೆ. ಇದನ್ನು ಮಾಡಲು ಉಪಯೋಗಿಸುವ ಸಾಫ್ಟ್‌ವೇರನ್ನು "ಅಭೀಕ್ಷಣದ ನಂತರದ ಅಭಿವೃದ್ಧಿ ಪಡಿಸುವ ಸಾಫ್ಟ್‌ವೇರ್ (Post Processing Application)' ಎಂದು ಕರೆಯಲಾಗುವುದು. ಈ ತರಹ ಅಭಿವೃದ್ಧಿಪಡಿಸಲಾದ ವ್ಯೆದ್ಯಕೀಯ ಚಿತ್ರಗಳನ್ನು ವ್ಯೆದ್ಯರು (Radiologist) ವೀಕ್ಷಿಸಿ ರೋಗವನ್ನು ಪತ್ತೆಹಚ್ಚುವುದನ್ನು "ಅಭೀಕ್ಷಣ ಚಿತ್ರ ಪರಿವೀಕ್ಷಣೆ (Reading)" ಎಂದು ಕರೆಯುತ್ತಾರೆ.
ಹೀಗೆ ವ್ಯೆದ್ಯರು ಕಂಡುಕೊಂಡ ಅಂಶಗಳನ್ನು ದಾಖಲೀಕರಣ ಮಾಡುವುದನ್ನು "ಅಭೀಕ್ಷಣ ದಾಖಲೀಕರಣ (Radiology Reporting)' ಎನ್ನುವರು ಮತ್ತು ಈ ದಾಖಲೆಯನ್ನು "ಅಭೀಕ್ಷಣ ದಾಖಲೆ (Radiology Report or Scanning Report)" ಎಂದು ಕರೆಯಲಾಗುವುದು. ಹೀಗೆ ಅಭೀಕ್ಷಣ (Scanning) ಮಾಡಲಾದ ವ್ಯೆದ್ಯಕೀಯ ಚಿತ್ರಗಳನ್ನು ಕೂಡಲೇ ದೀರ್ಘಾವಧಿಯ ಶೇಖರಣಾ ವ್ಯವಸ್ಥೆಯುಳ್ಳ (PACS) ಗಣಕ ಯಂತ್ರಕ್ಕೆ ಹಾಗೂ ಅಭೀಕ್ಷಣದ ನಂತರದ ಅಭಿವೃದ್ಧಿ (Post Processing) ಮಾಡಲಾಗುವ ಗಣಕ ಯಂತ್ರಗಳಿಗೆ ಏಕ ಕಾಲದಲ್ಲಿ ತಾಂತ್ರಿಕವಾಗಿ ಕಳುಹಿಸಿಕೊಡಲಾಗುವುದು. ಮಾತ್ರವಲ್ಲದೆ ಅಭಿವೃದ್ಧಿ ಪಡಿಸಲಾದ ಚಿತ್ರಗಳನ್ನು ಕೂಡಾ ದೀರ್ಘಾವಧಿ ಶೇಖರಣೆ ಮಾಡಲಾಗುವುದು.
ಪ್ರಾರಂಭದ ದಿನಗಳಿಂದ ಇತ್ತೀಚೆಗಿನ ದಿನಗಳ ವರೆಗೆ ಅಭೀಕ್ಷಣದ ನಂತರದ ಅಭಿವೃದ್ಧಿ (Post Processing) ಪಡಿಸುವ ಸಾಫ್ಟ್‌ವೇರ್ ಹಾಗೂ ದೀರ್ಘಾವಧಿಯ ಶೇಖರಣೆಯನ್ನು ನಿರ್ವಹಿಸುವ ಸಾಫ್ಟ್‌ವೇರ್‌ಗಳೇ (PACS) 'ಅಭೀಕ್ಷಣ ಚಿತ್ರ ಪರಿವೀಕ್ಷಣೆ (Reporting)' ಮತ್ತು "ಅಭೀಕ್ಷಣ ದಾಖಲೀಕರಣ (Reading)" ಮಾಡುವ ವ್ಯವಸ್ಥೆಯನ್ನು ಕೊಡುತ್ತಿದ್ದವು. ಹಾಗಾಗಿ ಕೆಲವೊಂದು ಆಸ್ಪತ್ರೆಗಳು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಸಾಫ್ಟ್‌ವೇರ್‌ಗಳನ್ನು ಬಳಸಿ ಪರಿವೀಕ್ಷಣೆ (Reading) ಮತ್ತು ದಾಖಲೀಕರಣ (Reporting) ಮಾಡುತ್ತಿದ್ದವು. ಆದರೆ ಇತ್ತೀಚೆಗೆ ಕಂಪೆನಿಗಳು ಬೇರೆಯದೇ ಆದ ಪ್ರತ್ಯೇಕವಾಗಿ ಪರಿವೀಕ್ಷಣೆ (Reading) ಮತ್ತು ದಾಖಲೀಕರಣ (Reporting) ಮಾಡುವ ವ್ಯವಸ್ಥೆಯುಳ್ಳ ಸಾಫ್ಟ್‌ವೇರ್‌ಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳಾದ "ಕೃತಕ ಬುದ್ಧಿಮತ್ತೆ (Artificial Intelligence)' ಮತ್ತು "ಶಬ್ದ ಗ್ರಹಿಸುವಿಕೆಗಳನ್ನು (Voice Recognition)" ಬಳಸಿ ಅಭಿವೃದ್ಧಿಪಡಿಸುತ್ತಿವೆ.
ಈ ತರದ ಸಾಫ್ಟ್‌ವೇರ್‌ಗಳು ವೈದ್ಯರ ಸಹಾಯವಿಲ್ಲದೇ ಅಭೀಕ್ಷಣ ಚಿತ್ರಗಳನ್ನು ಪರೀಕ್ಷಿಸಿ, ರೋಗವನ್ನು ಪತ್ತೆ ಹಚ್ಚಿ ದಾಖಲೀಕರಣ ಮಾಡಬಲ್ಲವು. ಉದಾಹರಣೆಗೆ ಒಬ್ಬ ರೋಗಿಯ ಶ್ವಾಸಕೋಶದಲ್ಲಿ ಗಡ್ಡೆಯಿದ್ದರೆ, ಆ ರೋಗಿಯ ಶ್ವಾಸಕೋಶದ ಅಭೀಕ್ಷಣ ಚಿತ್ರಗಳನ್ನು (CT Images) ಪರೀಕ್ಷಿಸಿ, ಗಡ್ಡೆ ಇರುವುದು ಮತ್ತು ಅದು ಇರುವ ಜಾಗ ಹಾಗೂ ಅದರ ಉದ್ದ, ಅಗಲಗಳ ಚಿತ್ರಣವನ್ನು ವೈದ್ಯರ ಸಹಾಯವಿಲ್ಲದೇ ಕೊಡಬಲ್ಲವು. ಇದನ್ನು ಈ ಮೊದಲು ವೈದ್ಯರೇ (Radiologist) ಮಾಡಬೇಕಾಗಿತ್ತು. ಹಾಗೆಯೇ ದಾಖಲೀಕರಣ (Reporting) ಕೂಡಾ ವೈದ್ಯರು ಅಥವಾ ಸಹಾಯಕರು ಹೇಳಿದ ಹಾಗೆ "ಶಬ್ದ ಗ್ರಹಣ (Voice Recognition)' ತಂತ್ರಜ್ಞಾನವನ್ನು ಬಳಸಿ ಮಾಡಬಲ್ಲವು.
ಅಂತೆಯೇ, ಆಸ್ಪತ್ರೆಗಳಲ್ಲಿ ಲಭ್ಯವಿರುವ ಅಭೀಕ್ಷಣ ಯಂತ್ರಗಳ (Scanners) ನಿರ್ವಹಣೆಯನ್ನು ಮಾಡಲು "ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ (Radiology Information System)' ಎನ್ನುವ ಸಾಫ್ಟ್‌ವೇರ್ ಅಸ್ತಿತ್ವಕ್ಕೆ ಬಂತು. ಇದನ್ನು ಬಳಸಿ ಅಭೀಕ್ಷಣ ಯಂತ್ರಗಳ ಪ್ರತಿ ದಿನದ, ಪ್ರತಿ ಕ್ಷಣದ "ಅಭೀಕ್ಷಣ ಕಾರ್ಯಪಟ್ಟಿಗಳನ್ನು (Scanning Schedule)" ನಿರ್ವಹಣೆ ಹಾಗೂ ವೈದ್ಯರು ದಾಖಲೀಕರಣ ಮಾಡಿದ ಪ್ರತಿ ರೋಗಿಯ ದಾಖಲೆಗಳನ್ನು (Scanning Reports) ರೋಗಿಯ ಜೀವಿತಾವಧಿ ಇರುವ ವರೆಗೆ ಶೇಖರಿಸಿ ಇಡಲಾಗುವುದು. ಅಭೀಕ್ಷಣ ಯಂತ್ರಗಳ ಕಾರ್ಯಪಟ್ಟಿಗಳ (Schedule) ನಿರ್ವಹಣೆಗೆ ಈ ಸಾಫ್ಟ್‌ವೇರ್‌ನಲ್ಲಿರುವ 'ವಿಧಾನ ಕಾರ್ಯಪಟ್ಟಿ (Modality Worklist)' ಎನ್ನುವ ವ್ಯವಸ್ಥೆಯನ್ನು ಬಳಸಲಾಗುವುದು.
ಹಾಗೆಯೇ ಬೃಹತ್ ಆಸ್ಪತ್ರೆಯ ಬೇರೆ ಬೇರೆ ವಿಭಾಗಗಳನ್ನು ನಿಭಾಯಿಸಲು ಬೇರೆ ಬೇರೆ ಸಾಫ್ಟ್‌ವೇರ್‌ಗಳು ಅಭಿವೃದ್ಧಿಗೊಂಡವು. ಆಸ್ಪತ್ರೆಯ ಆಡಳಿತಾತ್ಮಕ ವ್ಯವಸ್ಥೆಗಳನ್ನು ನಿರ್ವಹಿಸಲು "ಆಸ್ಪತ್ರೆಯ ಮಾಹಿತಿ ವ್ಯವಸ್ಥೆ (Hospital Information System)' ಎನ್ನುವ ಸಾಫ್ಟ್‌ವೇರ್ ಅಸ್ತಿತ್ವಕ್ಕೆ ಬಂತು. ಈ ಸಾಫ್ಟ್‌ವೇರ್ ಬಳಸಿ ಆಸ್ಪತ್ರೆಗಳು ತಮ್ಮಲ್ಲಿರುವ ಹಾಸಿಗೆಗಳ ನಿರ್ವಹಣೆ, ರೋಗಿಯ ನೊಂದಾವಣೆ (Patient Registration), ರೋಗಿಯ ದಾಖಲಾತಿ (Patient Admission), ಬಿಡುಗಡೆ (Patient Discharge), ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ವೈದ್ಯರ ನಿರ್ವಹಣೆಯನ್ನು ಹಾಗೂ ಬಿಲ್ಲಿಂಗ್‍ಗಳನ್ನೂ ಕೂಡಾ ಮಾಡಲು ಪ್ರಾರಂಭಿಸಿದವು.
ಒಟ್ಟಿನಲ್ಲಿ ಆಸ್ಪತ್ರೆಯ ಎಲ್ಲಾ ವಿಭಾಗಗಳಲ್ಲಿಯೂ ಸಾಫ್ಟ್‌ವೇರ್‌ಗಳು ತಮ್ಮ ಬಲವಾದ ಅಸ್ತಿತ್ವವನ್ನು ಸ್ಥಾಪಿಸಿದವು. "ಆಸ್ಪತ್ರೆಯ ಮಾಹಿತಿ ವ್ಯವಸ್ಥೆ (Hospital Information System-HIS)", "ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ (Radiology Information System-RIS)', 'ಚಿತ್ರ ಶೇಖರಣೆ ಮತ್ತು ಸಂಭಾಷಣಾ ವ್ಯವಸ್ಥೆ (Picture Archiving And Communication System-PACS)", "ಅಭೀಕ್ಷಣ ನಿರ್ವಹಣಾ ವ್ಯವಸ್ಥೆ (Scanning Software)" ಮತ್ತು "ಅಭೀಕ್ಷಣದ ನಂತರದ ಅಭಿವೃದ್ಧಿಯ ವ್ಯವಸ್ಥೆ (Post Processing Application)' ಇವೆಲ್ಲವೂ ಬೃಹತ್ ಆಸ್ಪತ್ರೆಗಳ ಅವಿಭಾಜ್ಯ ಅಂಗಗಳಾಗಿವೆ. ಇನ್ನು ಮುಂದಕ್ಕೆ ಪ್ರತ್ಯೇಕವಾದ "ಪರಿವೇಕ್ಷಣೆ (Reading) ಮತ್ತು ದಾಖಲೀಕರಣ (Reporting)' ವ್ಯವಸ್ಥೆಗಳೂ ಕೂಡಾ ಈ ಪಟ್ಟಿಯಲ್ಲಿ ಸೇರಿಕೊಳ್ಳಲಿವೆ.
-ಬಿ. ಎಸ್ ಪ್ರಶಾಂತ್ ರಾಮ್ ಕುಮಾರ್, ಬಂಗಾರಡ್ಕ
Lead Engineer Siemens, Bangalore
Flat No 307, Panchamukhi Palace,
KG Main Road, BHEL 2nd Stage, Pattanagere,
RR Nagar, Bangalore-560098
Email: bsprashanthramkumar@gmail.com
Mobile: 9480070375
Key Words: ವೈದ್ಯಲೋಕ, ವೈದ್ಯಕೀಯ ತಂತ್ರಜ್ಞಾನ, ಮೆಡಿಕಲ್ ಸಾಫ್ಟ್‌ವೇರ್‌ಗಳು, ವೈದ್ಯಕೀಯ ತಂತ್ರಾಂಶಗಳು, Medical Softwares, Technology in Healthcare
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Super. Informative article
ردحذفإرسال تعليق