ಅಬ್ಬಾ ಬಾ ಆ ದಿನಗಳು... ಹೌದು ಹಳ್ಳಿ ಬದುಕಿನ ಸುಂದರ ಬಾಲ್ಯದ ಕ್ಷಣಗಳು ಕಣ್ಣ ಮುಂದೆ ಸಾಲುಗಟ್ಟಿ ಸದಾ ಹಸಿರಾಗಿದೆ. ಅದರಲ್ಲೂ ಮಳೆಗಾಲವಂತೂ... ಆಹಾ ಮತ್ತೆ ಆ ಕ್ಷಣಗಳನ್ನು ಜೀವಿಸಿ ಬಿಡಲೆ ಎನ್ನುವಂತಾಗಿದೆ.
ಹೊಸ ಶೈಕ್ಷಣಿಕ ವರ್ಷ ಆರಂಭದ ದಿನಗಳಲ್ಲಿ ನಿದ್ದೆಗಣ್ಣಿನಿಂದ ಕಣ್ಣೊರೆಸುತ್ತಾ ಅಲ್ಲೆಲ್ಲೂ ಇಟ್ಟಿದ್ದ ಸಮವಸ್ತ್ರ ಹುಡುಕಿ ಧರಿಸಿ ಸ್ನೇಹಿತರೊಂದಿಗೆ ಸೇರಿ ಶಾಲೆಯ ದಾರಿ ಹಿಡಿಯುವುದು, ದಾರಿ ಮಧ್ಯೆ ಅದೆಷ್ಟೋ ತರ್ಲೆ ಮಾತುಗಳೊಂದಿಗೆ ಬೇಸಿಗೆ ರಜೆಯ ಮಜವನ್ನು ಮೆಲುಕು ಹಾಕುತ್ತಾ ಶಾಲೆಗೆ ಹೆಜ್ಜೆ ಹಾಕುವುದೇ ಸೊಗಸಾಗಿತ್ತು. ದಾರಿ ಮಧ್ಯೆ ಕಾಡಿನ ಕುಂಟಲ ಹಣ್ಣು ಜಗಿದು ನೀಲವರ್ಣದ ಮೂತಿಯೊಂದಿಗೆ ಶಾಲೆಗೆ ಹಾಜರಾಗಲು, ಗದರಿಸುತ್ತಾ ಕೋಲು ಹಿಡಿದು ನಿಂತಿರುವ ಹೆಡ್ಮಾಸ್ಟರ ಕಂಡು ಎರಡು ಹೆಜ್ಜೆ ಹಿಂದಿಕ್ಕಿ ಶಾಲಾ ಹಿಂಬದಿಯಿಂದ ಓಡುವ ಸಹಪಾಠಿಗಳು, ತರಗತಿಯ ಬೆಂಚುಗಳನ್ನು ಸರಿಯಾಗಿ ಜೋಡಿಸುವ ದೊಡ್ಡ ತರಗತಿ ಹುಡುಗರು ಹಾಗೂ ಕೊಠಡಿ ಆಫೀಸ್ ರೂಮ್ ಗುಡಿಸುವ ಹುಡುಗಿಯರು, ಅಂತೂ ಶಾಲಾರಂಭದ ದಿನಗಳು ಯಾವ ಹಬ್ಬಕ್ಕಿಂತಲೂ ಕಮ್ಮಿ ಇರಲಿಲ್ಲ.
ತರಗತಿ ಮುಗಿಸಿ ಮನೆಗೆ ತೆರಳಲು, ಗಾಳಿ ಮಳೆಯ ಅವಾಂತರಗಳು ಅಷ್ಟಿಷ್ಟಲ್ಲ. ಒಬ್ಬನ ಕೊಡೆ ಗಾಳಿಗೆ ಹಾರಲು ಮತ್ತೊಬ್ಬನ ಕೊಡೆಯಂತೂ ತಿರುವಿ ದೊಡ್ಡ ಬುಟ್ಟಿಯಂತೆ ಆಗಿ ಬಿಡುವುದು. ಏನೇ ಇರಲಿ ನಾವು ಕಳೆದ ಬಾಲ್ಯದ ಕ್ಷಣಗಳು ಸೊಗಸಾಗಿತ್ತು.
ಕಾಲ ಬದಲಾದಂತೆ ಪ್ರತಿಷ್ಠೆಯ ಹೆಸರಲ್ಲಿ ಮಕ್ಕಳನ್ನು ದೊಡ್ಡ ಸಿಟಿಯ ಶಾಲೆಗೆ ಸೇರಿಸಿ ವಿದ್ಯಾರ್ಥಿ ಜೀವನದ ಸುಂದರ ಘಟ್ಟವನ್ನು ಕಿತ್ತುಕೊಂಡ ಹಾಗೆ ಚಲಿಸುವ ನಾಲ್ಕುಗಾಲಿಯ ವಾಹನದೊಳಗೆ ಬಂಧಿಸಿ ಶಾಲೆಯಲ್ಲಿ ಬಿಡುತ್ತಿದ್ದರು.
ಕಾಲ ಮತ್ತೆ ಬದಲಾಗಿದೆ ಎಲ್ಲೆಡೆ ಕೋವಿಡ್ ಮಾರಿ ಆವರಿಸಿ ಎಲ್ಲವನ್ನೂ ಕಸಿದು ಬಿಟ್ಟಿದೆ. ಪ್ರಸ್ತುತ ವಿದ್ಯಾರ್ಥಿ ಜೀವನದಲ್ಲಿ ಕರಿಮೋಡದಂತೆ ಆವರಿಸಿದೆ. ಈ ಸಮಸ್ಯೆ ಆದಷ್ಟು ಬೇಗ ಸರಿ ಆಗಲಿ, ವಿದ್ಯಾರ್ಥಿ ಜೀವನದ ಸುಂದರ ಕ್ಷಣಗಳು ಮರುಕಳಿಸಲಿ.
-ಚೈತನ್ಯ ಮಾಣಿಲ
ಡಾ. ದಯಾನಂದ ಪೈ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق