ವಿಶ್ವ ಪರಿಸರ ದಿನ ಜೂನ್- 5
ಇಂದು ಜೂನ್ 5, ವಿಶ್ವ ಪರಿಸರ ದಿನ. ಇದರಲ್ಲೇನಿದೆ ವಿಶೇಷ ಬಿಡಿ. ಪ್ರತಿ ದಿನಕ್ಕೂ ಒಂದು ವಿಶೇಷವಿದ್ದೇ ಇರುತ್ತದೆ. ಆದರೆ ಇವತ್ತು ಮಾತ್ರ ನಾವು ಗಂಭೀರವಾಗಿ ಚಿಂತನೆಗೆ ಹಚ್ಚಿಕೊಳ್ಳಬೇಕಾದ ವಿಶೇಷ ದಿನ. ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಕಾರ್ಯಕ್ರಮದ ಮುಖಾಂತರ ಜಗತಿನಾದ್ಯಂತ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಲು ಸಾಂಕೇತಿಕವಾಗಿ ಜೂನ್ 5ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 1972ರಲ್ಲಿ ಸ್ವೀಡನ್ ದೇಶದ ರಾಜಧಾನಿ ಸ್ಟಾಕ್‍ಹೋಮ್‍ನಲ್ಲಿ ನಡೆದ ವಿಶ್ವಸಂಸ್ಥೆಯ ಸಂಮ್ಮೇಳನದ ನೆನಪಿನಲ್ಲಿ ಜೂನ್ 5ನ್ನು ವಿಶ್ವ ಪರಿಸರ ದಿನ ಎಂದು ಸಾಂಕೇತಿಕವಾಗಿ ಆಚರಿಸಲಾಗುತ್ತದೆ.
ನಮ್ಮ ಪರಿಸರ ಕಾಳಜಿಗಳನ್ನು ಮರು ವಿಮರ್ಶೆಗೆ ಒಡ್ಡಿಕೊಳ್ಳುವ ದಿನ. ಇದು ಕೇವಲ ಹಸಿರು ನಡಿಗೆ, ಹಸಿರು ರ್ಯಾಲಿ, ಗಿಡ ವಿತರಣೆ ಕಾರ್ಯಕ್ರಮ, ಘೋಷವಾಕ್ಯ ಬರವಣಿಗೆ, ಪರಿಸರ ಉಳಿಸುವ ಚಿತ್ರ ಸ್ಪರ್ಧೆ ಮತ್ತು ಸಭಾ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಮನುಷ್ಯನ ಆಸೆ ಆಕಾಂಕ್ಷೆಗಳಿಗೆ ಮಿತಿಯೆಂಬುದೇ ಇಲ್ಲ. ಕೈಗಾರೀಕರಣದ ಹೆಸರಲ್ಲಿ ಅಭಿವೃದ್ಧಿಯ ನೆಪದಲ್ಲಿ ಮರಗಿಡಗಳನ್ನು ಕಡಿದು, ನೆಲ, ಹೊಲ, ಜಲಗಳನ್ನು ಕಲುಷಿತಗೊಳಿಸಿ ಸಸ್ಯರಾಶಿಯನ್ನು ಬಲಿತೆಗೆದು ಕಾಡು ಕಡಿದು ಕಾಂಕ್ರೀಟ್ ನಾಡು ಮಾಡೂವ ಹುನ್ನಾರದಿಂದ ನಾವು ಬದುಕುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದೇವೆ ಎಂದರೂ ತಪ್ಪಲ್ಲ. ಭೂತಾಯಿಯ ಮೇಲೆ ಅವಿರತವಾಗಿ, ನಿರಂತರವಾಗಿ ದೌರ್ಜನ್ಯ ಹಗಲು ಇರುಳು ನಡೆಯುತ್ತಲೇ ಇದೆ. ಭೂತಾಯಿಯ ಮೂಕರೋಧನವನ್ನು ಕೇಳುವ ಕಿವಿಗಳು ಬರಡಾಗಿ, ನೋಡುವ ಕಣ್ಣುಗಳು ಕುರುಡಾಗಿ ಯಾಂತ್ರೀಕೃತ ಬದುಕಿನಲ್ಲಿ ಜನರು ಉಸಿರಾಡಲು ಕಷ್ಟವಾಗುವ ಪರಿಸ್ಥಿತಿ ಬಂದೊದಗಿದೆ. ಅಕ್ರಮ ಗಣಿಗಾರಿಕೆ, ಅವೈಜಾನಿಕ ಮೀನುಗಾರಿಕೆ, ಇಂಧನಗಳ ಪೋಲುಗಾರಿಕೆ, ನೈಸರ್ಗಿಕ ಸಂಪನ್ಮೂಲಗಳ ಕೊಳ್ಳೆಗಾರಿಕೆ ಹೀಗೆ ಒಂದಲ್ಲ, ಎರಡಲ್ಲ, ಹಗಲು ರಾತ್ರಿ ಮನುಷ್ಯನ ದಬ್ಬಾಳಿಕೆ ಎಗ್ಗಿಲ್ಲದೇ ನಡೆಯುತ್ತಲೇ ಇದೆ.
ಮನುಷ್ಯ ತನ್ನ ದುರಾಸೆ ತ್ಯಜಿಸಿ, ಕ್ಷಣಿಕ ಸುಖದ ಆಸೆಗೆ ತಿಲಾಂಜಲಿ ಬಿಟ್ಟು, ತಾನು ಬದುಕುವ ನೆಲ-ಜಲಕ್ಕೆ ಗೌರವ ನೀಡಿದಲ್ಲಿ ಮಾತ್ರ ಮುಂದಿನ ಜನಾಂಗಕ್ಕೂ ಬದುಕಲು ಎಡೆಯಾಗಬಹುದು. ಇಲ್ಲವಾದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗಿ, ಭೂಮಿ ಬರಡಾಗಿ, ಉಸಿರಾಡುವ ಗಾಳಿಗೆ, ಕುಡಿಯುವ ನೀರಿಗೆ ಮತ್ತು ತಿನ್ನುವ ತುತ್ತು ಅನ್ನಕ್ಕೂ ತತ್ಸಾರ ಬರುವ ದಿನಗಳು ದೂರವಿಲ್ಲ.
ಪ್ಲಾಸ್ಟಿಕಾಸುರ ಎಂದರೇನು?
ಆಧುನಿಕ ಶತಮಾನದ ಬಹುದೊಡ್ಡ ಪೆಡಂಭೂತ ಪ್ಲಾಸ್ಟಿಕಾಸುರ ಎಂದರೂ ತಪ್ಪಲ್ಲ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪ್ಲಾಸ್ಟಿಕ್ ಬೆಳೆದು ನಿಂತಿದೆ. 1933ರಲ್ಲಿ ಇಂಗ್ಲೆಂಡಿನ ಬಹುದೊಡ್ಡ ಕೈಗಾರಿಕಾ ಧೈತ್ಯ ಇಂಪೀರಿಯನ್ ರಾಸಾಯನಿಕ ಕಾರ್ಖಾನೆಯ ರೇಜಿನಾಲ್ಡ್ ಗಿಬ್ಸನ್ ಮತ್ತು ಎರಿಕ್ ಫಾಸೆಟ್ ಎಂಬ ಇಬ್ಬರು ವ್ಯಕ್ತಿಗಳು ಕಂಡುಹಿಡಿದ ‘ಪಾಲಿ ಎಥಿಲೀನ್’ (POLYETHYLENE) ಅಥವಾ ಪಾಲಿಥೀನ್ (POLYTHENE) ಜೀವನ ಅವಿಭಾಜ್ಯ ಅಂಗವಾದ ‘ಪ್ಲಾಸ್ಟಿಕ್’ ಅಸುರನಾಗಿ ಬೆಳೆದು ನಿಂತಿದೆ. ಈಗಿರುವ ಸ್ಥಿತಿಯಲ್ಲಿ ನಮ್ಮ ಜೀವನದ ಹೆಚ್ಚಿನ ವಸ್ತುಗಳೆಲ್ಲಾ ಉಪಯೋಗಿಸಿ ಎಸೆಯುವಂತದ್ದೇ ಆಗಿದೆ. ಒಂದು ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ ಸರಾಸರಿ ಪ್ರತಿದಿನ 12 ಕೋಟಿ ಟನ್ ಪ್ಲಾಸ್ಟಿಕ್ ಮತ್ತು 22 ಲಕ್ಷ ಟನ್ ಭಾರತದಾದ್ಯಂತ ಉಪಯೋಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದರರ್ಥ ಒಂದು ವರ್ಷಕ್ಕೆ ಸರಾಸರಿ 555 ಬಿಲಿಯನ್ ನಿಂದ ಒಂದು ಟ್ರೆಲಿಯನ್ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ.
ಒಟ್ಟಿನಲ್ಲಿ ಪ್ಲಾಸ್ಟಿಕ್ ಇಲ್ಲದೆ ನಮ್ಮ ಜೀವನ ರಥ ಮುಂದೆ ಹೋಗುವುದೇ ಇಲ್ಲ ಎಂಬ ಹಂತಕ್ಕೆ ಬಂದು ನಿಂತಿದ್ದೇವೆ ಎಂದರೂ ತಪ್ಪಲ್ಲ. 40 ಮೈಕಾನ್ ಗಿಂತ ಜಾಸ್ತಿ ಇರುವ ತೆಳು ಪ್ಲಾಸ್ಟಿಕ್ ಬಳಕೆ ನಮ್ಮ ದೇಶದಲ್ಲಿ ನಿಷೇಧಿಸಿದ್ದರೂ, ಅದರ ಗೊಡವೆ ಯಾರಿಗೂ ಇಲ್ಲ. ಮಾಲ್‍ಗಳಲ್ಲಿ, ಹಾಲ್‍ಗಳಲ್ಲಿ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ನಾವು ಕುಡಿಯುವ ನೀರು, ತಿನ್ನುವ ಚಾಟ್ ಎಲ್ಲದಕ್ಕೂ ಪ್ಲಾಸ್ಟಿಕ್ ಅನಿವಾರ್ಯ. ಯಾವುದೋ ಊರಲ್ಲಿ ಪ್ಲಾಸ್ಟಿಕ್ ತಿಂದು ದನ ಕರುಗಳು ಅಥವಾ ಜಿಂಕೆಮರಿ ಸತ್ತಾಗ ಮಾತ್ರ ನಮ್ಮ ಜನರಿಗೆ ಪ್ಲಾಸ್ಟಿಕ್ ಬಗ್ಗೆ ತಾತ್ಕಾಲಿಕವಾಗಿ ವಾಕರಿಕೆ ಬಂದು ಒಂದಷ್ಟು ಚಳುವಳಿ ಅಥವಾ ಜಾಥಾಗಳು, ಚರ್ಚೆಗಳು ನಡೆಯುತ್ತದೆ. ಮತ್ತೆ ಎಂದಿನಂತೆ ಪ್ಲಾಸ್ಟಿಕ್ ಬಗ್ಗೆ ವ್ಯಾಮೋಹ ಹುಟ್ಟಿಕೊಂಡು ಬಳಕೆ ಮುಂದುವರೆಯುತ್ತದೆ.
ಪ್ಲಾಸ್ಟಿಕ್ ನಲ್ಲಿರುವ ‘ಡೈಯಾಕ್ಸಿನ್’ ಎಂಬ ರಾಸಾಯನಿಕ ಕ್ಯಾನ್ಸರ್ ನಂತ ಮಾರಕ ರೋಗಕ್ಕೆ ಕಾರಣವಾಗಬಹುದು. ಅಂದಾಜಿನ ಪ್ರಕಾರ ಒಂದು ಪ್ಲಾಸ್ಟಿಕ್ ಬ್ಯಾಗ್ ಕೊಳೆಯಲು ಸರಾಸರಿ ನೂರು ವರ್ಷ ಹಿಡಿಯಬಹುದು. ಹಾಗಾಗಿಯೇ ಪ್ಲಾಸ್ಟಿಕ್‍ನ ತ್ಯಾಜ್ಯ ನಿರ್ವಹಣೆ ಬಹಳ ಕಷ್ಟಸಾಧ್ಯ. ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿದಾಗ ಅದರಲ್ಲಿನ ಪ್ಲಾಸ್ಟಿನೈಸರ್ ಎಂಬ ಕೆಮಿಕಲ್ ಕರಗಿ ನಮ್ಮ ರಕ್ತನಾಳಕ್ಕೆ ಸುಲಭವಾಗಿ ಸೇರಿಕೊಳ್ಳಬಹುದು ಮತ್ತು ಕಣ್ಣು ಕುರುಡಾಗುವ ಅಪಾಯವಂತೂ ಖಂಡಿತಾ ಇದೆ. ಆ ಕಾರಣಕ್ಕೆ ಪ್ಲಾಸ್ಟಿಕನ್ನು ಆಧುನಿಕ ಶತಮಾನದ ಮಾರಿ ಮತ್ತು ಬಾಂಬ್ ಗಳಿಗಿಂತಲೂ ಗಂಭೀರವಾದ ಪರಿಸರ ವಿರೋಧಿ ಪ್ಲಾಸ್ಟಿಕಾಸುರ ಎಂದು ಪರಿಸರವಾದಿಗಳು ಕರೆಯುತ್ತಾರೆ.
ಆದರೆ ನಮ್ಮ ಜನರ ಪ್ಲಾಸ್ಟಿಕ್ ಬಗೆಗಿನ ಕಾಳಜಿ ಜಾಗೃತವಾಗಬೇಕಾದರೆ ಸತ್ಯ ಮೇವ ಜಯತೆಯಲ್ಲಿ ಅಮೀರ್ ಖಾನ್ ಬಾಯಿಯಿಂದಲೇ ಅಣಿಮುತ್ತು ಉದುರಬೇಕಾದಿತು. ಇಲ್ಲವೇ ಗಂಗಾನದಿ ತೀರದಲ್ಲಿ ಪ್ರಿಯಾಂಕ ಚೋಪ್ರಾ ತಂಪು ಕನ್ನಡಕ ಧರಿಸಿ ನದಿಯಿಂದ ಶ್ಯಾಂಪೂ, ಗುಟ್ಕಾ ಮತ್ತು ಮಿನರಲ್ ವಾಟರ್ ಬಾಟಲ್ ತೆಗೆದು ದೊಡ್ಡದಾಗಿ ಟಿ.ವಿ ಪರದೆಯಲ್ಲಿ ಅಥವಾ ದೃಶ್ಯ ಮಾಧ್ಯಮಗಳಲ್ಲಿ ಬಂದಾಗ ಮಾತ್ರ ಜನರಲ್ಲಿ ಕ್ಷಣಿಕವಾಗಿ ಪ್ಲಾಸ್ಟಿಕ್ ಬಗ್ಗೆ ವಾಕರಿಕೆ ಬರಬಹುದೇನೋ.
ವಿಪರ್ಯಾಸವೆಂದರೆ ನಮ್ಮ ಜನರ ಪರಿಸರಕಾಳಜಿ ಯಾರೋ ಒಬ್ಬ ಫೇಸ್ ಬುಕ್ ನಲ್ಲಿ ಗಿಡನೆಟ್ಟ ಚಿತ್ರ ಬಂದಲ್ಲಿ ಲೈಕ್ ಮಾಡುವುದಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತದೆ. ನಮ್ಮ ಆಧುನಿಕ ಜೀವನ ಶೈಲಿಯ ಅವಶ್ಯಕತೆಗಳನ್ನು ಪೂರೈಸಲು ಪೂರಕವಾಗಿ ಬೆಳೆಯುತ್ತಿರುವ ಆಧುನಿಕರಣ, ವ್ಯಾಪಾರೀಕರಣ, ಕೈಗಾರೀಕಿಕರಣ, ಗಣಿಗಾರಿಕೆ, ಇತ್ಯಾದಿಗಳಿಂದ ಪರಿಸರ ಮಾಲಿನ್ಯ ತಾರಕಕ್ಕೇರಿದೆ.
ಮುಕ್ತಾಯಕ್ಕೆ ಮುನ್ನ:
ಮನುಷ್ಯ ಜೀವಿಗಳು ಭೂಮಂಡಲದಲ್ಲಿ ಓಡಾಡಲು ಆರಂಭಿಸಿ ಸರಿ ಸುಮಾರು 40 ವರ್ಷಗಳೇ ಸಂದಿವೆ. ಭೂಮಿಯಲ್ಲಿ ಜನಸಂಖ್ಯೆ 700 ಕೋಟಿ ದಾಟಿದೆ. ಇನೈವತ್ತು ವರ್ಷ ಕಳೆದರೆ ಭೂಮಿಯಲ್ಲಿ ನಡೆದಾಡಲು ಮನುಷ್ಯ ಪರದಾಡುವ ಪರಿಸ್ಥಿತಿ ಬಂದರೂ ವಿಶೇಷವಲ್ಲ. ಕಳೆದ ನಲವತ್ತು ವರ್ಷಗಳಲ್ಲಿ ಮನುಷ್ಯ ಭಯಾನಕವಾಗಿ ಬೆಳವಣಿಗೆಯ ನೆಪದಲ್ಲಿ ಹೊಲ, ನೆಲ, ಜಲವನ್ನು ಕಲುಷಿತಗೊಳಿಸುತ್ತಿದ್ದಾನೆ. ನೋಡು ನೋಡುತ್ತಿದ್ದಂತೆಯೇ ನಮ್ಮ ಭೂಮಂಡಲ ಸಮಸ್ಯೆಗಳ ಆಗಾರವಾಗಿ ಬೆಳೆದು ನಿಂತಿದೆ. ಜನಸಂಖ್ಯಾಸ್ಪೋಟ, ಆಹಾರ ಸಮಸ್ಯೆ, ಶಕ್ತಿ ಸಮಸ್ಯೆ, ಕಚ್ಚಾ ಪದಾರ್ಥಗಳ ಸಮಸ್ಯೆ, ಪರಿಸರ ಮಾಲಿನ್ಯ ಒಂದಲ್ಲ, ಎರಡಲ್ಲ ಹತ್ತು ಹಲವು ಸಮಸ್ಯೆಗಳು ಭೂತಾಕಾರವಾಗಿ ಬೆಳೆದು ನಿಂತಿದೆ. ಪರಿಸರ ಮಾಲಿನ್ಯ ತಾರಕಕ್ಕೇರಿದೆ. ಇಡೀ ಭೂ ಮಂಡಲದ ‘ಜೀವ ಸಂಕುಲ’ಗಳೇ ವಿನಾಶದತ್ತ ಸಾಗಿದೆ. ಕಾರ್ಖಾನೆಗಳಿಂದ ಕ್ಯಾನ್ಸರ್ ಹಬ್ಬಿಸಬಲ್ಲ ವಿಷಪೂರಿತ ರಾಸಾಯನಿಕಗಳು ದಿನ ನಿತ್ಯವು ಪರಿಸರಕ್ಕೆ ಸೇರುತ್ತಿದೆ. ವಾತಾವರಣದ ಓಜೋನ್ ವಲಯ ಛಿದ್ರವಾಗುತ್ತಿದೆ. ಹುಳಿ ಮಳೆ (acid rain) ಸುರಿಯ ತೊಡಗಿದೆ. ಕೈಗಾರಿಕ ಕಾರ್ಖಾನೆಗಳಿಂದ ಹಸಿರು ಮನೆ ಅನಿಲ (Green House Gas) ಎಂದೇ ಕುಖ್ಯಾತಿ ಪಡೆದ ಇಂಗಾಲದ ಡೈ ಆಕ್ಸೈಡ್, ಕಾರ್ಬನ್ ಡೈಯಾಕ್ಸೈಡ್, ಮಿಥೇನ್ ಮುಂತಾದ ಅನಿಲಗಳು ನಾವು ಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸುತ್ತಿದೆ. ಮರುಭೂಮಿ ವಿಸ್ತರಿಸುತ್ತಿದೆ. ಅಂತರ್ಜಲ ಬತ್ತಿ ಕೆರೆ, ಬಾವಿಗಳು ಬರಡಾಗುತ್ತಿದೆ. ನೂರಾರು ಅಡಿ ಅಗೆದರೂ ಕೊಳವೆ ಬಾವಿಗಳಲ್ಲಿ ಹನಿ ನೀರೂ ಕೂಡ ಸಿಗದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ನದಿ, ಕೆರೆ, ಸಾಗರಗಳೂ ಮಲಿನಗೊಳ್ಳುತ್ತಿದೆ. ಕುಡಿಯುವ ಹನಿ ಹನಿ ನೀರಿಗೂ ತಾತ್ಸಾರ ಬಂದೊದಗಿದೆ. ಭೂಗರ್ಬದಲ್ಲಿ ಕಾವು ಏರಿ, ಬದುಕಲು ಸಾಧ್ಯವಾದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹವಾಮಾನದಲ್ಲಿ ಅನೀರಿಕ್ಷಿತ ಸ್ಥಿತ್ಯಂತರಗಳೂ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಜಾಗತೀಕ ತಾಪಮಾನ ಏರಿಕೆ (Global Warming) ಯಿಂದಾಗಿ ‘ಜೀವ ಸಂಕುಲಗಳ’ ಸಮತೋಲನಕ್ಕೆ ಧಕ್ಕೆ ಬಂದಿದೆ.
ಮನುಷ್ಯನ ಆಸೆ ಬುರುಕತನಕ್ಕೆ ಎಣೆಯೇ ಇಲ್ಲ. ತಾನು ಅಭಿವೃದ್ಧಿ ಹೊಂದುವ ಧಾವಂತದಲ್ಲಿ ತನ್ನ ಜೀವನಾಡಿಯಾದ ಭೂತಾಯಿ ಒಡಲನ್ನು ಅಗಿದು, ಬಗೆದು ಬರಡುಮಾಡುತ್ತಿದ್ದಾನೆ. ಇದನ್ನು ನೋಡಿಯೆ 1940 ರಲ್ಲಿ ಗಾಂಧೀಜಿಯವರು ಹೀಗೆ ಹೇಳಿದ್ದರು- “ಈ ಭೂಮಿ ಎಲ್ಲರ ಆಸೆಗಳನ್ನು ಪೂರೈಸಬಲ್ಲದು, ಆದರೆ ದುರಾಸೆಗಳನ್ನಲ್ಲ”. ಈ ಕಾರಣದಿಂದಲೇ ಹಿರಿಯರೂ, ಪರಿಸರವಾದಿಗಳು ಭೂತಾಯಿಯನ್ನು ಹೀಗೆ ವರ್ಣಿಸುತ್ತಾರೆ “ಈ ಭೂಮಿ ತಮ್ಮ ತಾತ ಮುತ್ತಾತರಿಂದ ಬಂದ ಬಳವಳಿಯಲ್ಲ, ಮಕ್ಕಳು-ಮೊಮ್ಮಕ್ಕಳಿಂದ ಎರವಲಾಗಿ ಪಡೆದದದ್ದು” ಒಟ್ಟಿನಲ್ಲಿ ಸಂಪದ್ಬರಿತವಾದ ಭೂಮಿಯನ್ನು ಬರಡಾಗಿಸುವ ಹಕ್ಕು ಯಾರಿಗೊಬ್ಬರಿಗೂ ಇಲ್ಲ. ಭೂತಾಯಿಯ ಒಡಲನ್ನು ಬರಡು ಮಾಡದೇ, ಹೆಚ್ಚು ಸಂಪತ್ ಭರಿತವಾಗಿಸಲು ನಾವು ಅತೀ ಅಗತ್ಯವಾಗಿ ತುರ್ತಾಗಿ ಮಾಡಲೇಬೇಕಾದ ಕಾರ್ಯಗಳೆಂದರೆ,
1. ಜನಸಂಖ್ಯಾ ಸ್ಪೋಟವನ್ನು ತಡೆಗಟ್ಟುವುದು.
2. ಆಹಾರ ಧಾನ್ಯ ಬೆಳೆಯುವ ಭೂಮಿಯನ್ನು ಸಂರಕ್ಷಿಸುವುದು.
3. ಮರಗಿಡಗಳನ್ನು ನೆಟ್ಟು ಅಡವಿಗಳನ್ನು ಪುನರ್ ನಿರ್ಮಿಸುವುದು.
4. ಭೂಗರ್ಭದ ಬರಿದಾದ ಸಂಪನ್ಮೂಲಗಳನ್ನು ಬರಿದಾಗದಂತೆ ನೋಡಿಗೊಳ್ಳುವುದು ಮತ್ತು ಬರಿದಾಗದಂತ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸುವುದು.
ಸುಮಾರು ಒಂದೂವರೆ ಶತಮಾನದ ಹಿಂದೆಯೇ ಅಭಿವೃದ್ಧಿಯ ನೆಪದಲ್ಲಿ ಅಮೇರಿಕ ಸರಕಾರ 1854 ರಲ್ಲಿ ವಾಷಿಂಗ್ ಟನ್ ಪಕ್ಕದ ಅಧಿವಾಸಿ ಜನರನ್ನು ಒಕ್ಕಲೆಬ್ಬಿರುವ ಯತ್ನದಲ್ಲಿದ್ದಾಗ, ಆದಿವಾಸಿಗಳ ನಾಯಕನಾಗಿರುವ ರೆಡ್ ಇಂಡಿಯನ್ ಜನಾಂಗದ ಸೀಟ್ಲ್ ಹೇಳಿದ ಅರ್ಥಗರ್ಭಿತ ಮಾತುಗಳು ಹೀಗಿತ್ತು, “ಈ ಭೂಮಿ ಯಾವನೊಬ್ಬ ಮಾನವನ ಪಿತ್ರಾರ್ಜಿತ ಆಸ್ತಿಯಲ್ಲ, ಇತರ ಅಸಂಖ್ಯಾತ ಜೀವಿಗಳಂತೆ ಮನುಷ್ಯ ಕೂಡ ಒಂದು ಜೀವಿ ಅಷ್ಟೆ. ಜೀವ ಸಂಕುಲಗಳ ಈ ಸಂಕೀರ್ಣವಾದ ಜಾಲವನ್ನು ಮಾನವ ಹೆಣೆದದ್ದಲ್ಲ. ಮನುಷ್ಯ ಈ ಜಾಲದ ಒಂದು ಸಣ್ಣ ಎಳೆ ಅಷ್ಟೆ. ಈ ಜಾಲಕ್ಕೆ ಮಾನವ ಏನೇ ವಿಪತ್ತು ತಂದರೂ ಆತ ತನಗೆ ತಾನೆ ವಿಪತ್ತು ತಂದು ಕೊಂಡಂತೆ, ಈ ಭೂಮಿಗೆ ದುರ್ಗತಿ ಬಂದರೆ, ಮನವನಿಗೂ ಅದೇ ಗತಿ ಬರುವುದು ಎಂದರ್ಥ. ಇಲ್ಲಿ ಎಲ್ಲವೂ ಒಂದಕ್ಕೊಂದು ಪರ್ಯಾಯವಾಗಿ ತುಳುಕು ಹಾಕಿಕೊಂಡಿದೆ ಮತ್ತು ಮನುಷ್ಯ ಮಾತ್ರ ಈ ಭೂ ಮಂಡಲದಲ್ಲಿ ಏಕಾಂಗಿಯಾಗಿ ಬದುಕಲು ಸಾಧ್ಯವೇ ಇಲ್ಲ”.
986ನೇ ವಿಶ್ವ ಪರಿಸರ ದಿನಾಚರಣೆಯಂದು 14ನೇ ದಲಾಯಿ ಲಾಮಾ ಪೂಜ್ಯ ತೇನ್ಸಿನ್ ಗ್ಲಾಕೊ ನೀಡಿದ ಸಂದೇಶದ ಸಾರ ಹೀಗಿತ್ತು. “ಮಾನವನ ಅಜಾನ, ಆಸೆ ಬುರುಕುತನ ಮತ್ತು ಜೀವಿಗಳ ಬಗೆಗಿನ ಅಸಡ್ಡೆಯಿಂದಾಗಿಯೇ ನಿಸರ್ಗ ಬರಿದಾಗುತ್ತಿದೆ. ಅಜ್ಞಾನವೊಂದರಿಂದಲೇ ಈ ಹಿಂದೆ ಮನುಷ್ಯ ಹಾಳುಗೆಡಹುವುದನ್ನೆಲ್ಲ ಕ್ಷಮಿಸಬಹುದು, ಆದರೆ ಇಂದು ನಮಗೆ ನಿಸರ್ಗದ ಕುರಿತು ಅಪಾರ ಮಾಹಿತಿ ಸಿಗುತ್ತಿದೆ. ಪೂರ್ವಜರಿಂದ ಪಡೆದಿದ್ದೇನು? ನಮ್ಮಿಂದಾಗುತ್ತಿರುವ ತಪ್ಪುಗಳೇನು ಮುಂದಿನ ಪೀಳಿಗೆಗೆ ಉಳಿಯಬೇಕಾದುದು ಏನೇನು ಎಂಬ ಪ್ರಶ್ನೆಗಳಿಗೆ ನೈತಿಕವಾದ ಉತ್ತರ ಸಿಗಲೇಬೇಕಾಗಿದೆ.
ಖಂಡಿತವಾಗಿಯೂ ನಮ್ಮದು ಪರ್ವಕಾಲದ ಪೀಳಿಗೆ. ವಿಜ್ನಾನ, ತಂತ್ರಜ್ನಾನದಲ್ಲಿ ನಮ್ಮ ಸಾಧನೆ ಎಷ್ಟೇ ಇದ್ದರೂ ಅದಕ್ಕೆ ಸರಿಸಾಟಿಯಾಗಿ ನಮ್ಮ ದೌರ್ಬಲ್ಯಗಳೂ ಬೆಟ್ಟದಷ್ಟಿದೆ. ಇತರ ಜೀವ ರಾಶಿಗಳನ್ನು ಹೊಸಕಿ ಹಾಕಿದ್ದೂ, ನಮ್ಮವರೇ ಹಸಿವಿನಿಂದ ಸಾವನ್ನಪ್ಪುತ್ತಿರುವುದೂ, ಈ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿವೆ. ನಮ್ಮ ಮೇಲೆ ಇಂದು ಅಪಾರ ಹೊಣೆಗಾರಿಕೆ ಇದೆ. ಅದನ್ನು ನಿಭಾಯಿಸುವ ಸಾಮರ್ಥ್ಯವೂ ನಮಗಿದೆ. ಈಗಲಾದರೂ ಕಾರ್ಯಪ್ರಾಪ್ತರಾಗೋಣ, ಕಾಲವಿನ್ನೂ ಮಿಂಚಿಲ್ಲ”.
ವಿಶ್ವಪರಿಸರ ದಿನಾಚರಣೆಯು ಅರ್ಥಪೂರ್ಣವಾಗಬೇಕಾದರೆ ಸರಕಾರದ ಜೊತೆಗೆ ಸರಕಾರೇತರ ಸಂಘಸಂಸ್ಥೆಗಳ ಮುಖಾಂತರ ಪರಿಸರ ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಕಾರ್ಯಕರ್ತರು, ಪರಿಸರ ವಿಚಾರವಾದಿಗಳು ಮತ್ತು ಜನಸಾಮಾನ್ಯರಲ್ಲೂ ನಿಜವಾದ ಬದಲಾವಣೆ ಉಂಟಾಗಬೇಕಾಗಿದೆ. ಇಲ್ಲವಾದಲ್ಲಿ ಈ ವಿಶ್ವ ಪರಿಸರ ದಿನವು ಮತ್ತೊಂದು ಘೋಷಣಾ ದಿನವಾಗಿ ಉಳಿಯಬಹುದು.
ಬನ್ನಿ ಗೆಳೆಯರೇ ಇಂದೆ ಶಪಥ ಮಾಡೋಣ. ಪರಿಸರಮಾಲಿನ್ಯಕ್ಕೆ ಎಡೆಮಾಡುವ ಮತ್ತು ಭೂತಾಯಿಯ ಒಡಲನ್ನು ಬರಡು ಮಾಡಲು ಎಲ್ಲಾ ಕಾರ್ಯಗಳಿಗೂ ತಿಲಾಂಜಲಿ ಬಿಡೋಣ. ನಾವು ಬದುಕೋಣ, ಇತರ ಜೀವ ಸಂಕುಲಗಳನ್ನು ಬದುಕಲು ಅವಕಾಶ ನೀಡೋಣ ಮತ್ತು ನಮ್ಮ ಮುಂದಿನ ತಲೆಮಾರಿನ ಜೀವಿಗಳು ಬದುಕಲು ಪೂರಕವಾದ ನೆಲ, ಹೊಲ, ಜಲ, ಗಾಳಿ, ನೀರು ಉಳಿಸುವ ಪುಣ್ಯಕಾರ್ಯಕ್ಕೆ ಟೊಂಕ ಕಟ್ಟೋಣ.
-ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ
ಹೊಸಂಗಡಿ, ಮಂಜೇಶ್ವರ
9845135787
drmuraleemohan@gmail.com
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق