ಮಂಗಳೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು (ಜೂ.5) ಮಂಗಳೂರಿನ ಬಿಜೈ ಕಾಪಿಕಾಡಿನ ಬಾರೆಬೈಲ್ ಬಡಾವಣೆಯಲ್ಲಿ ಚೂಂತಾರು ಸರೋಜಿನಿ ಪ್ರತಿಷ್ಠಾನದ ವತಿಯಿಂದ ಬಡಾವಣೆಯ ಜನರು ಒಟ್ಟು ಸೇರಿ ವನಮಹೋತ್ಸವ ಆಚರಿಸಿದರು. ಕಳೆದೈದು ವರ್ಷಗಳಿಂದ ಬಡಾವಣೆಯ ಜನರು ಒಟ್ಟು ಸೇರಿ ವನಮಹೋತ್ಸವ ಆಚರಿಸುತ್ತಿದ್ದಾರೆ.
ಈ ಬಾರಿಯೂ ಹಲಸು, ಮಾವು, ನೇರಳೆ, ಬಾದಾಮಿ, ಪುನರ್ಪುಳಿ ಮತ್ತು ಕದಂಬ ಗಿಡಗಳನ್ನು ನೆಟ್ಟು “ಮರ ಗಿಡ ಬೆಳೆಸಿ ಪರಿಸರ ಉಳಿಸಿ” ಅಭಿಯಾತ್ಮಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಾರೆಬೈಲ್ ಬಡಾವಣೆಯ ಡಾ|| ಮುರಲೀಮೋಹನ ಚೂಂತಾರು, ಸಮಾದೇಷ್ಟರು, ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ, ಡಾ|| ರಾಜಶ್ರೀ ಮೋಹನ್, ಶ್ರೀ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಎ. ಎಸ್. ಭಟ್, ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಕೆ. ಶಶಿಧರ್, ವಾಣಿಜ್ಯ ತೆರಿಗೆ ನಿವೃತ್ತ ಉಪ ಆಯುಕ್ತರಾದ ಪದ್ಮಾಕರ ಭಿಡೆ, ಭಾರತ್ ಶಿಪ್‍ಯಾರ್ಡ್ ಮಹಾಪ್ರಬಂಧಕರಾದ ಮಹೇಶ್, ಪರಿಸರ ಪ್ರೇಮಿ ಕೃಷ್ಣಪ್ಪ, ಖ್ಯಾತ ವಕೀಲರಾದ ರವೀಂದ್ರ, ಡಾ|| ದೀಪಕ್ ಪೈ, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಮರ್ಶಿಯಲ್ ಟ್ಯಾಕ್ಸ್ ಇಲಾಖೆಯ ನಿವೃತ್ತ ಉಪ ಆಯುಕ್ತರು ಪದ್ಮಾಕರ ಭಿಡೆ ಅವರು “ಮರಗಿಡ ನೆಟ್ಟು ಪರಿಸರವನ್ನು ಹಸಿರಾಗಿ ಇಟ್ಟುಕೊಳ್ಳದಿದ್ದಲ್ಲಿ ಮನುಷ್ಯರಿಗೆ ಖಂಡಿತಾ ಉಳಿಗಾಲವಿಲ್ಲ. ಪರಿಸರ ನಾಶವಾಗಿರುವುದರಿಂದ, ಪರಿಸರದ ಸಮತೋಲನ ತಪ್ಪಿ ಹೋಗಿ ಕೋವಿಡ್-19 ನಂತಹ ಮಾರಕ ಸಾಂಕ್ರಾಮಿಕ ರೋಗ ಬಂದಿದೆ” ಎಂದು ನುಡಿದರು.
ನಮ್ಮ ಮುಂದಿನ ಪೀಳಿಗೆಗೆ ಉಸಿರಾಡಲು ಶುದ್ಧ ಆಮ್ಲಜನಕಯುಕ್ತ ಗಾಳಿ ಬೇಕಾದಲ್ಲಿ ಮರಗಿಡಗಳನ್ನು ನೆಡದೆ ಬೇರೆ ವಿಧಿಯೇ ಇಲ್ಲ. ಇಲ್ಲವಾದಲ್ಲಿ ನಮ್ಮ ಮಕ್ಕಳು ಆಕ್ಸಿಜನ್ ಸಿಲಿಂಡರ್ ಧರಿಸಿ ಓಡಾಡಬೇಕಾದೀತು ಎಂದು ಎಚ್ಚರಿಕೆ ಮಾತನ್ನು ನುಡಿದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق