ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಸೂರ್ಯನ ಆವೃತ್ತಿತ ನರ್ತನ: ಖಗೋಳದಲ್ಲಿ ಸೌರ ಮಾರುತಗಳ ವೈಭವ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ನಮ್ಮ ಸೂರ್ಯನೇ ಹೀಗೆ. ಹನ್ನೊಂದು ವರ್ಷಗಳಿಗೊಮ್ಮೆ ಡಂಗುರ ಸಾರಿ ನರ್ತನ. ದಶದಿಶೆಗೆ ಉಕ್ಕಿ ಉಕ್ಕಿ ಚಿಮ್ಮುವ ಶಕ್ತಿ ಪ್ರವಾಹಗಳು. ಇವೇ ಸೂರ್ಯನ ಮಾರುತಗಳು. ಶತ, ಸಹಸ್ರಮಾನಗಳಿಂದಲೂ ಈ ಪ್ರಕ್ರಿಯೆ ನಡೆಯುತ್ತಿದೆಯಾದರೂ ನಮಗೆ ಇತ್ತೀಚೆಗಷ್ಟೇ ಸ್ವಲ್ಪ ಸ್ವಲ್ಪ ತಿಳಿಯುತ್ತಿದೆ.


2020 ರಿಂದ ಪ್ರಾರಂಭವಾಗಿರುವ ಹನ್ನೊಂದು ವರ್ಷಗಳ ಈ ಹೊಸ ಆವರ್ತನೆಯಲ್ಲಿ, ಇದೀಗ ಇಂದು ವಿಜೃಂಭಣೆ. ಇವತ್ತಿನ ಈ ಸೌರಮಾರುತಗಳನ್ನು ಅತೀ ಹೆಚ್ಚಿನ ಶಕ್ತಿಯ ಎಕ್ಸ್ 1 ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಸೌರ ಮಾರುತಗಳ ಶಕ್ತಿಯನ್ನು ಎ, ಬಿ, ಸಿ, ಎಂ ಹಾಗೂ ಎಕ್ಸ್ ಎಂದು ವಿಂಗಡಿಸುತ್ತಾರೆ. ಎ, ಕಡಿಮೆ ಶಕ್ತಿಯವುಗಳಾದರೆ, ಎಕ್ಸ್ ಮಾರುತಗಳು ಅತೀ ಹೆಚ್ಚಿನ ಶಕ್ತಿಯ ಮಾರುತಗಳು. 2011 ರಲ್ಲೂ ಈಗಿನಂತೆ ಶಕ್ತಿಯುತ ಮಾರುತ ಅಪ್ಪಳಿಸಿತ್ತು.


ಒಂದು ಹನ್ನೊಂದು ವರ್ಷ ಗಳ ಆವರ್ತನೆಯಲ್ಲಿ ಕೆಲವು ದಿನಗಳಲ್ಲಿ ಈಗಿನ ಮಟ್ಟದ ಅತೀ ಹೆಚ್ಚಿನ ಶಕ್ತಿ ಉತ್ಸರ್ಜನೆ ಕಾಣುತ್ತೇವೆ. ಇದೇನೂ ಹೊಸತಲ್ಲ. ಸೂರ್ಯನ ಆವರ್ತನೆಗಳಲ್ಲಿ ಮಾಮೂಲಿ. ಪ್ರತೀ ದಿನವೂ ಈ ರೀತಿಯ ಪ್ರಕ್ರಿಯೆ ಸೂರ್ಯನಲ್ಲಿ ಶತ, ಸಹಸ್ರಮಾನಗಳಿಂದಲೇ ಅಂಕೆ ಇಲ್ಲದೇ ನಡೆಯುತ್ತಲೇ ಇದೆ.

 

ಇದು ಸೂರ್ಯನ ಮೇಲೆ ಕಾಣುವ ಕಲೆಗಳಿಂದ ನಮಗೆ ತಿಳಿಯುತ್ತಿದೆ. ಕೆಲ ವರ್ಷಗಳಲ್ಲಿ ಕಲೆಗಳೇ ಇರುವುದಿಲ್ಲ. ಶಾಂತ ಸೂರ್ಯ. ಆದರೆ ಅತೀ ಕಡಿಮೆ ಆದ ಕೆಲವೇ ಸಮಯದಲ್ಲಿ ಅತೀ ಹೆಚ್ಚು ಕಲೆಗಳಿಂದ ವಿಜ್ರಂಭಿಸುವುದು ಸೂರ್ಯನ ನರ್ತನದ ಕ್ರಮ. 2019 ರಲ್ಲಿ ಅತೀ ಕಡಿಮೆ ಸೂರ್ಯನ ಕಲೆಗಳು.


ಈ ಕಲೆಗಳು ದೊಡ್ಡದಾಗಿ ಕಂಡಾಗ, ಅಲ್ಲಿಂದ ವಿಶೇಷ ಶಕ್ತಿ ಮಾರುತಗಳು ಭೂಮಿಗೂ ಅಪ್ಪಳಿ‌ಸುವದುಂಟು. ಈಗ ನಡೆಯುತ್ತಿರುವುದೂ ಅದೇ. ಮೊನ್ನೆ ಜುಲೈ 3 ರಂದು ಈ ರೀತಿಯ ಪ್ರಕೃಯೆ ವಿಜ್ಞಾನಿಗಳ ಗಮನಕ್ಕೆ ಬಂತು. ಇದೊಂದು ಪ್ರಬಲ ಸೌರ ಮಾರುತವಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದರು.


ನಮ್ಮ ಭೂಮಿ ಈ ರೀತಿಯ ಹೊಡೆತಗಳನ್ನು ಪ್ರಾರಂಭದಿಂದಲೂ ಸಹಿಸಿಕೊಂಡು ಬಂದಿದೆ. ಈ ನಮ್ಮ ಭೂಮಿಯ ಸುತ್ತ ಇರುವ ಭೂ ಅಯಾನುಗಳ ಕವಚಗಳು (ವಾನ್ ಅಲೆನ್ ಬೆಲ್ಟ್) ಸೂರ್ಯ ಮಾರುತಗಳಿಗೆ ನೇರ ನುಗ್ಗಲು ಅವಕಾಶ ಕೊಡುವುದಿಲ್ಲ. ಭೂಮಿಯ ಸುತ್ತ ಸುಮಾರು 5 ಸಾವಿರ ಹಾಗೂ 15 ಸಾವಿರ ಕಿಮೀ ದೂರದಲ್ಲಿ ಕಾಂತ ಕ್ಷೇತ್ರದಂತೆ ಸುತ್ತಿಕೊಂಡುವೆ ಈ ಕವಚಗಳು. ಅವು ಸಮಭಾಜಕ ವೃತ್ತದ ಸುತ್ತ ಉಬ್ಬಿ, ಧ್ರುವ ಪ್ರದೇಶಗಳಲ್ಲಿ ಕಂತಿವೆ. ಹಾಗಾಗಿ ಈ ಸೌರ ಮಾರುತಗಳು ಭೂಮಿಯ ಧ್ರುವ ಪ್ರದೇಶದಲ್ಲಿ ಹೆಚ್ಚು ಅಪ್ಪಳಿಸುತ್ತವೆ.




ತೊಂದರೆ ಯಾರಿಗೆ?

ಆಕಾಶದಲ್ಲಿರುವ ಗಗನ ಯಾತ್ರಿ ಗಳಿಗೆ, ಹಾಗೆ ನಮ್ಮ ಎಲ್ಲ ಕೃತಕ ಉಪಗ್ರಹಗಳಿಗೆ ಈ ಶಕ್ತಿ ಯುತ ಮಾರುತಗಳು ತೊಂದರೆ ಕೊಡುತ್ತವೆ. ಈ ಸೌರ ಮಾರುತಗಳ ವಿದ್ಯುತ್ ಕಾಂತೀಯ ಶಕ್ತಿ ಯುತ ಕಣಗಳು, ಕೃತಕ ಉಪಗ್ರಹಗಳ ಇಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಪ್ರಭಾವ ಬೀರಬಹುದು. ಭೂಮಿ ತನ್ನ ಸುತ್ತಲಿನ ಎಲ್ಲ ಜೀವಿಗಳನ್ನು ಈ ಮಾರುತಗಳಿಂದ ರಕ್ಷಸಿದರೂ, ಮನುಷ್ಯ ಮಾಡಿಕೊಂಡಿರುವ ಆಕಾಶದಲ್ಲಿರುವ ಆಧುನಿಕ ತಂತ್ರಜ್ಞಾನಗಳು ಕೆಲ ಕ್ಷಣಗಳ ತೊಂದರೆ ಗೀಡಾಗಬಹುದು.


ಈ ಕಷ್ಟ ಕಾಲದಲ್ಲೂ ಸಂಭ್ರಮವೊಂದಿದೆ, ಅದೇ ಧ್ರುವ ಪ್ರಭೆ. ಈ ಮಾರುತಗಳ ಅಬ್ಬರದ ಕಾಲದಲ್ಲಿ ಉತ್ತರ ಹಾಗೂ ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಅತೀ ಸುಂದರ ಪ್ರಭೆ ಕಾಣಲಿದೆ. ಈ ಪ್ರದೇಶಗಳಲ್ಲಿ ಭೂಮಿಯ ವಾತಾವರಣದ ಒಳ ನುಸುಳಿದ ಮಾರುತ ಕಣಗಳು ವಾತಾವರಣದ ಕಣಗಳೊಂದಿಗೆ ಘರ್ಷಿಸಿ ಕಣ್ಣಿಗೆ ಕಾಣುವ ಬಣ್ಣ ಬಣ್ಣದ ಬೆಳಕನ್ನು ಬಿಡುಗಡೆ ಮಾಡುತ್ತವೆ. ಇದು ಇಡೀ ಉತ್ತರ ಆಕಾಶದಲ್ಲಿ ಕೆಲ ನಿಮಿಷಗಳ ಅತೀ ಸುಂದರ ಕುಣಿತ.




ಬಹಳ ಮನೋಹರವಾಗಿರುತ್ತವೆ ಈ ಧ್ರುವ ಪ್ರಭೆಗಳು. ಈಗ ಈ ಕೆಲ ತಿಂಗಳುಗಳಲ್ಲಿ ಧ್ರುವ ಪ್ರಭೆ ಅತೀ ಹೆಚ್ಚಿರುತ್ತದೆ.


ಇಷ್ಟೆಲ್ಲಾ ತಿಳಿದಿರುವ ನಮಗೆ ಸೂರ್ಯ ಇನ್ನೂ ಅರ್ಥ ಆಗಿಲ್ಲ. ಈ ಸೌರ ಕಲೆಗಳು, ಹನ್ನೊಂದು ವರ್ಷಗಳ ಆವರ್ತನ, ಚಿಮ್ಮಿ ಚಿಮ್ಮುವ ಶಕ್ತಿ ಯುಕ್ತಿ ಪ್ರವಾಹಗಳು,  ವಿಜ್ಞಾನಿಗಳಿಗೂ ಸರಿಯಾಗಿ ತಿಳಿದಿಲ್ಲ. ಸೂರ್ಯನೇ  ಅರ್ಥವಾಗಿಲ್ಲ ಇನ್ನೂ. ಅಧ್ಯಯನ ನಡೆಯತ್ತಲೇ ಇದೆ.


-ಡಾ. ಎ.ಪಿ ಭಟ್, ಉಡುಪಿ

(ಲೇಖಕರು: ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಸ್ಥಾಪಕರು)

Key Words: Solar Storm, Solar wind, Solar flare, Dancing Sun, Astronomy, ಸೌರ ಮಾರುತ, ಸೌರ ಕಲೆಗಳು, ಖಗೋಳ ವಿಜ್ಞಾನ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

أحدث أقدم