ಬೀಳದಿರು ಬೀಳದಿರು ಬೀಳದಿರು ಮಿಹಿರಾ ಬಿದ್ದರೂ ನಾನಿರುವೆ ಎನುವೆ ಬೊಗಸೆ ನಸುಕು
ಕನಸಿನಲ್ಲಿ ಹೊರಳಿ ಹೊರಳಿ ಆಚೆಬದಿಗೆ ಬಿದ್ದ ಅವನ
ಎಳೆದು ತರಲು ಬಳ್ಳಿಯೆಳೆಯ ಇಳಿಸಿ ಕರೆವ ತಾಳ್ಮೆನಸುಕು
ಜಗದಗಲ ಅಲೆದಲೆದು ಸುತ್ತಾಡಿ ಸಾಕಾಗಿ
ಮರಳಿ ಮನೆಯಂಗಳಕೆ ಬಂದಿಳಿದ ಕೆನ್ನಸುಕು
ಅರಳು ಹೂವಿನ ನಡುವೆ ಮಗ್ಗುಲೇಳುವ ನಸುಕು
ಎಲ್ಲಿಂದಲೋ ಹೊರಟವನು
ಇಲ್ಲಿಳಿದು ಬಂದಾಗ
ಚಾಮರ ಸ್ವಾಗತದ
ಹಸಿಗಾಯಿ ನಸುಕು
ಇಂಗು ತೆಂಗಿನ ಜೊತೆಗೆ
ಅಡುಗೆಮನೆಯಾಳುತ್ತ
ಖಾದ್ಯದೌನ್ನತ್ಯವನು
ಹೆಚ್ಚಿಸುವ ಘಮನಸುಕು
ನೂರಂತೆ ಐದಂತೆ ಮತ್ತೊಂದು ಮೇಲ್ಮೂರು
'ಜಯ'ದ ಕಥೆಯಿದು ಎಂದು ಭ್ರಮಿಸುವ ಹೂನಸುಕು
ಆಗಸಕೆ ಸಾಲುಗಂಬ
ಏರಿಸಿಟ್ಟ ಮುಗುಳ್ನಸುಕು
ಮಾಗಿ ಬಾಗುವ ತನಕ
ತೂಗಿ ಬೆಳೆಯುವ ನಸುಕು
ಕರೆದೊಡನೆ ಬಾರದೆಯೆ
ವೈಯ್ಯಾರ ತೋರುವ
ನಖ್ರಾನಸುಕು
ಅತ್ತಿಕಾಯಿಯ ಹಿಂದೆ
ಅಡಗಿ ನಿಲುವವನನ್ನು
ಸುತ್ತುವರೆದು ಮುತ್ತನೆರೆದು
ಮುದ್ದುಗರೆದು ನಲಿವ ಬೆಳಗು
ಬಾನಮ್ಮನ ಮೂಡೊಲೆಯಲ್ಲಿ
ಬಿಸಿನೀರಾಗುವ ಹೊಗೆನಸುಕು
ಮಮತೆಯಿಂದ ಮುಖ ತೋರಿದವಗೆ
ಮತ್ತೆ ಮುತ್ತಿನಾರತಿಯ ಬೆಳಗು
ಇರುಳು ಸುರಿದ
ಹನಿಯ ಜೊತೆಗೆ
ಹರಿದು ಬಂದ
ಚುಕ್ಕಿ ಬೆಳಗು
ಹಸಿರು ಸೇತುವೆ ಮೇಲೆ
ಮುತ್ತುಮಣಿ ಸಾಲ್ಬೆಳಗು
ಪಂಚ
ದೀಪಾರತಿಯ
ಪಚ್ಚೆಬೆಳಗು
*ಸುಪ್ತದೀಪ್ತಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق