ಆಲಿಸಿ: ಮುಕ್ತಕಗಳು- ನಡವಳಿಕೆ
ರಚನೆ: ವಿ.ಬಿ.ಕುಳಮರ್ವ ಕುಂಬ್ಳೆ
ರಾಗ- ಸಂಗೀತ- ಗಾಯನ: ಕಲಾಶ್ರೀ ವಿದ್ಯಾಶಂಕರ್, ಮಂಡ್ಯ.
ನಡವಳಿಕೆ
~~~~
ನಮ್ಮ ನಡವಳಿಕೆಗಳ ನಾವೆ ತಿದ್ದಲು ಬೇಕು
ಸುಮ್ಮನಿರದನುದಿನವು ದುಡಿಯುತಿರ ಬೇಕು |
ಹಮ್ಮುಬಿಮ್ಮನು ತೊರೆದ ಮಾನವತೆ ಇರಬೇಕು
ನೆಮ್ಮದಿಯ ಜೀವನಕೆ - ಪುಟ್ಟಕಂದ || ೧ ||
ಹದವರಿತ ದುಡಿಮೆಯೇ ಮನುಜಗುಣವಾಗಿರಲು
ಸದನದಲಿ ಬಲುಸುಖವು ನಿತ್ಯಜೀವನದಿ |
ಮುದದಿಂದ ಮನೆಯೊಳಗೆ ಬಂದಿರುವ ಜನರನ್ನು
ಸದರದಲಿ ಸತ್ಕರಿಸು - ಪುಟ್ಟಕಂದ || ೨ ||
ಮನುಜರಿಗೆ ಸಹಜಗುಣ ಉಪಕಾರವೆಸಗುವುದು
ದನುಜರೆಲ್ಲರ ಗುಣವು ಹಾನಿಯೆಸಗುವುದು |
ಹಣೆಬರಹ ಬರೆಯುತಿಹ ಪರಬೊಮ್ಮ ಪರಮಾತ್ಮ--
ಗೆಣೆಯಿಲ್ಲ ಲೋಕದಲಿ - ಪುಟ್ಟಕಂದ || ೩ ||
ಮಾಡಿ ಮುಗಿಸುವುದೊಳಿತು ಕರ್ತವ್ಯಗಳನೆಲ್ಲ
ಬೇಡುವುದು ತರವಲ್ಲ ನೆರೆಕರೆಯ ಜನರ |
ಕಾಡುವುದು ಅಪರಾಧ ಬಂಧುಗಳ ಸಜ್ಜನರ
ನೀಡುವುದು ಗುಣಧರ್ಮ - ಪುಟ್ಟಕಂದ || ೪ ||
(ಛಂದೋಬದ್ಧ ಆಶು ಮುಕ್ತಕಗಳು)
ವಿ.ಬಿ.ಕುಳಮರ್ವ, ಕುಂಬ್ಳೆ ✍️
ಕಾಮೆಂಟ್ ಪೋಸ್ಟ್ ಮಾಡಿ