(ಮಕ್ಕಳ ಕವನ)
ಚೌತಿಯ ಹಬ್ಬವು ಬಂದಿದೆ ನೋಡಿರಿ
ಚಂದದ ಗಣಪತಿ ದೇವರನು |
ಇಲಿಯನ್ನೇರುತ ಬಂದಿಹ ಕರಿಮುಖ
ಬೇಡಿದ ವರಗಳ ನೀಡುವನು ||
|| ೧ ||
ಗೌರಿಯ ಹಬ್ಬದ ಜತೆಯಲಿ ಬರುವುದು
ತನಯನ ಚೌತಿಯ ಶುಭಶಕುನ|
ತಾಯಿಯ ಕರಗಳ ಹಿಡಿಯುತ ಬರುವನು
ಚೆಲುವಿನ ಕಂದನು ಗಜವದನ ||
|| ೨ ||
ಮೊದಲಿನ ಪೂಜೆಯು ಗಿರಿಜೆಯ ಸುತನಿಗೆ
ಸಲುವುದು ಜಗದಲಿ ಎಲ್ಲೆಡೆಯು|
ಸುಜನರ ಸಲಹಲು ಬರುತಿಹ ಬೆನಕಗೆ
ಮಮತೆಯು ತುಂಬಿದ ಮೆಲ್ಲೆದೆಯು ||
|| ೩ ||
ಹೋಮದ ಜತೆಯಲಿ ಪೂಜೆಯ ಮಾಡಿರಿ
ಸಿದ್ಧಿಯ ಬುದ್ಧಿಯ ಪಡೆಯಲಿಕೆ|
ಲಡ್ಡನು ಮಾಡುತ ಮೋದಕದೊಂದಿಗೆ
ನೀಡಿರಿ ಗಣಪಗೆ ಸವಿಯಲಿಕೆ ||
|| ೪ ||
ಹಿರಿಯರು ಕಿರಿಯರು ಎಲ್ಲರು ನಮಿಸಲು
ನಗುತಲಿ ಗಣಪನು ಹರಸುವನು|
ನಂಬಿದ ಜನರಿಗೆ ಇಂಬನು ಕರುಣಿಸಿ
ವರಗಳ ಮಳೆಯನು ಸುರಿಸುವನು || ೫ ||
ಆಶುಕವನ, ರಚನೆ:- ವಿ.ಬಿ.ಕುಳಮರ್ವ, ಕುಂಬ್ಳೆ
ಗಾಯನ: ಕುಮಾರಿ ಅವನಿಶ್ರೀ ಕುಳಮರ್ವ
ಕಾಮೆಂಟ್ ಪೋಸ್ಟ್ ಮಾಡಿ