ಸಾಧನಕೇರಿಯ ಸಾಧಕರು
ಬೋಧನೆ ಗೈದರು ಭಾವಗಳ |
ಮಾಧುರ್ಯ ಕಂಠದಿ ಹಾಡಿದರು
ಕ್ರೋಧವ ಗೆಲಿದಿಹ ತವಸಿಗಳು ||
|| ೧ ||
ಬರೆದರು ಬಗೆಮಿಗೆ ಗೀತೆಗಳ
ಒರೆಯುತ ಮಮತೆಯ ಮಾತುಗಳ|
ಕರೆದರು ಗಂಗೆಯನಾಗಸದಿ
ಹರಿದರು ಮೌಢ್ಯದ ತತ್ತ್ವಗಳ ||
|| ೨ ||
ಅಂಬಿಕೆ ತನಯರು ಕನ್ನಡದತ್ತ
ನಂಬಿಕೆ ಹೆಜ್ಜೆಯ ಹಾಕಿದರು |
ಅಂಬಿಗರವರು ಗೀತೆಯ ನಾವೆಗೆ
ತುಂಬಿದ ಕೊಡದೊಲು ಪಂಡಿತರು ||
|| ೩ ||
ಏರುತ ಮೇಲಕೆ ಏಣಿಯನು
ಬರೆಯುತಲಿತ್ತರು ಕಾವ್ಯವನು |
ಸುರನರಲೋಕದಿ ಕೀರ್ತಿಯನು
ವರಕವಿ ಗೆಲಿದರು ಹೃದಯವನು ||
|| ೪ ||
ಕಾವ್ಯದ ಸುಮಲತೆ ಪರಿಮಳವು
ಸೇವ್ಯಕೆ ಯೋಗ್ಯದ ಬರಹಗಳು|
ಭವ್ಯದ ಬದುಕಿಗೆ ಶ್ರೀಕಾರ
ನವ್ಯದ ಕಾಲಕು ಸಿರಿಹರಳು ||
|| ೫ ||
ಮಾನವ ಧರ್ಮವ ಸಾರಿದರು
ದಾನವ ವೈರಿಯ ನುತಿಸಿದರು |
ಜ್ಞಾನದ ಪೀಠವನೇರಿದರು
ಮೇನೆಯ ಮನ್ನಣೆ ಗಳಿಸಿದರು ||
|| ೬ ||
[ಆದಿಪ್ರಾಸ ಮತ್ತು ಅಂತ್ಯಪ್ರಾಸವುಳ್ಳ ಕಿರಿಯರ ಕವನ]
ರಚನೆ
ವಿ.ಬಿ.ಕುಳಮರ್ವ,ಕುಂಬ್ಳೆ
(ಈ ಆಶುಕವನ ವರಕವಿ ಅಂಬಿಕಾತನಯದತ್ತರ ಜನ್ಮದಿನದ ಸವಿನೆನಪಿಗಾಗಿ)
ಹಾಡಿದವರು:-ಶ್ರೀಮತಿ ಮಾಲತಿ ಕಾಕುಂಜೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق