ಸಣ್ಣ ಸಂಕೋಚದಿಂದಲೇ ಶುರು ಮಾಡ್ತಿದ್ದೇನೆ. 'ಕೃಷ್ಣ'ನೆಂದರೆ ನನಗದೇನೋ ಖುಶಿ, ಪ್ರೀತಿ, ನೆಮ್ಮದಿ. ನನ್ನೆದೆಯ ಹಳವಂಡಗಳನ್ನು ಸುಮ್ಮನೆ ಕೇಳಿಸಿಕೊಂಡು ಕೊನೆಗೊಮ್ಮೆ ತನ್ನ ನಗೆಯ ಮುಗುಳಲ್ಲೇ ಸಕಲ ನೋವ ಮರೆಸುವ ಮಾಂತ್ರಿಕ ಅಂವ ನನ್ನ ಪಾಲಿಗೆ. ಮೊದಲಿನಿಂದಲೂ ಕೃಷ್ಣ, ನವಿಲುಗರಿ, ಪಾರಿಜಾತದ ಸುತ್ತಲೇ ಮೃಧುಲ ಕನಸು ಹೆಣೆಯುತ್ತ ಬೆಳೆದ ಭಾವುಕ ಹುಡುಗಿ. ನನಗೆ ಬಹುದಿನಗಳಿಂದ ಗೋಕುಲದ ದಿನಗಳನ್ನು, ರಾಧೆಯ ವಿವಿಧ ಭಾವವನ್ನು, ರಾಧೆ-ಕೃಷ್ಣರ ಮಧುರ ಪ್ರೇಮದ ಅನುಭೂತಿಯನ್ನು ಮರುಸೃಷ್ಟಿಸುವ ಒಂದು ಕನಸಿತ್ತು. ಅದಕ್ಕೆ ಬೆನ್ನುಲುಬಾಗಿ ನಿಂತವನು ನನ್ನ ತಮ್ಮ ಶ್ರೀನಿಧಿ ಭಟ್ ಶೃಂಗೇರಿ.
ನಾವಿಬ್ಬರೂ ಅಕ್ಕ ತಮ್ಮ ಸೇರಿ ತಂಡ ಕಟ್ಟಿಕೊಂಡು ಒಂದು ಯೂಟ್ಯೂಬ್ ಚಾನೆಲ್ "Tales Of Parijatha" ಆರಂಭಿಸಿದ್ದೇವೆ. ನಮ್ಮ ವಿಡಿಯೋ ಸಿನೆಮಾದ ಲೆವೆಲ್ ಗೆ ಇದೆ ಎಂದು ಕೆಲವರು ಹೇಳ್ತಾರೆ. ಅದಕ್ಕೆ ನನ್ನ ತಮ್ಮನ ಕ್ಯಾಮೆರಾ ಕೈಚಳಕ, ಎಡಿಟಿಂಗ್ ಕಾರಣ. ಇದರಿಂದ ದುಡ್ಡು ಮಾಡುವುದು ನಮ್ಮ ಉದ್ದೇಶವಲ್ಲ, ಆದರೆ ಇದನ್ನು ಒಂದೊಳ್ಳೆ ಉದ್ದೇಶಕ್ಕೆಂದು ಉಪಯೋಗಿಸುವ ಎಂದು ನಿರ್ಧರಿಸಿದ್ದೇವೆ.
ಸಮಯ ಸಿಕ್ಕಾಗ ದಯವಿಟ್ಟು ನೋಡಿ, ಇಷ್ಟವಾದರೆ Like, Share & Subscribe ಮಾಡಿ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಅಕ್ಕರೆಯಿರಲಿ
*******
ಜಗತ್ತಿಗೆ ಅಂವ ಬೆಣ್ಣೆಕೃಷ್ಣನಾದರೂ ಅವನುಸಿರು ಸೋಕಿದರೂ ಬೆಣ್ಣೆಯಂತೆ ಕರಗುತ್ತಿದ್ದುದು ಮಾತ್ರ ಅವನರಸಿ ರಾಧೆ. ಕೃಷ್ಣನೆಂದರೆ ರಾಧೆಗೆ ನಿತ್ಯನೂತನ ಪ್ರೇಮ, ಬೆಚ್ಚನೆಯ ಆಪ್ತಭಾವ. ರಾಧೆಶ್ಯಾಮರ ಪ್ರೀತಿಯ ಮೋಹಕ ರಾಗಕ್ಕೆ ಮನಸೋಲದವರಾರು? ಇಂತಿರುವ ರಾಧೆಯ ಜೀವಸಖನ ಜನುಮದಿನವಂತೆ ಇಂದು. ಗೋಕುಲದ ತುಂಬೆಲ್ಲಾ ಅವನಿಷ್ಟದ ಬೆಣ್ಣೆ ಗಡಿಗೆ ತಯಾರಿಟ್ಟುಕೊಂಡು ರಾಧೆ ಕಾಯುತ್ತಲಿರಬಹುದು. ಕೃಷ್ಣ ಮತ್ತೆ ಬರುವನೆಂಬ ನಂಬಿಕೆಯಿಂದಲೇ ಬದುಕುತ್ತಿರುವ ಅನೇಕ ರಾಧೆಯಂತವರಿಗಾಗಿ, ಅವರನ್ನಷ್ಟು ಗಾಢವಾಗಿ ಪ್ರೀತಿಸಿದ ಅಸಂಖ್ಯಾತ ಕೃಷ್ಣನಂತವರಿಗಾಗಿ ಈ ಪಾರಿಜಾತ ಪ್ರಸ್ತುತಿಯ ಅರ್ಪಣೆ.
ಎಂದಿನಂತೆ ನೋಡಿ, ಹರಸಿ, ಹಾರೈಸಿ. ನಿಮ್ಮ ಚಪ್ಪಾಳೆ, ಬೆನ್ತಟ್ಟುವಿಕೆಯೇ ನಮಗೆ ಸ್ಪೂರ್ತಿ.
ಪಾರಿಜಾತ ಪ್ರಸ್ತುತಿ: ಶುಭಶ್ರೀ ಭಟ್ಟ
ವಿಡಿಯೋಗ್ರಾಫಿ: ಗೋಪಿ ಜಾಲಿ,ಕುಮಟಾ
ಎಡಿಟಿಂಗ್: ಶ್ರೀನಿಧಿ ಭಟ್ ಫಿಲ್ಮಂ'ಸ್
ಸಾಹಿತ್ಯ: ಶುಭಶ್ರೀ ಭಟ್ಟ
ಸಂಗೀತ ಸಂಯೋಜನೆ & ಗಾಯನ: ಶ್ರೀಲತಾ ಗುರುರಾಜ್
ತಬಲಾ: ಗುರುರಾಜ್ ಆಡುಕಳ
ಕಾಮೆಂಟ್ ಪೋಸ್ಟ್ ಮಾಡಿ