ಆಲಿಸಿ: ಲಾಲಿ ಹಾಡು- ತೊಟ್ಟಿಲಲಿ ಮಲಗಿರುವ ಕಂದಮ್ಮ ಕೇಳು
ಸಾಹಿತ್ಯ: ಧಾತ್ರೀ ಶ್ರೀಕಾಂತ್
ರಾಗ ಸಂಯೋಜನೆ: ವಿದ್ಯಾ ಗಣೇಶ್ ದೇವರಡ್ಕ
ಗಾಯನ, ದೃಶ್ಯ ಸಂಕಲನ: ಶಿಲ್ಪಾ ಸುನಿಲ್
ಹಾಡಿನ ಪೂರ್ಣ ಸಾಹಿತ್ಯ ಇಲ್ಲಿದೆ:
ಬಿದಿರು
ತೊಟ್ಟಿಲ ಒಳಗಿನ ನಗೆಯನ್ನು ಬೀರುತ್ತಾ
ಹಾಯಾಗಿ ಮಲಗಿರುವ ಕಂದಮ್ಮ ಕೇಳು!
ಗುಟ್ಟೊಂದು ಹೇಳಲೇ ನಾನೀಗ ನಿನಗಮ್ಮ
ಚೆಂದಾದ ತೊಟ್ಟಿಲು ಹುಟ್ಟಿದ್ದು ಕೇಳು ||
ಬಿದಿರೆಂಬ ಹುಲ್ಲುಂಟು ನಡುನಡುವೆ ಮುಳ್ಳುಂಟು
ಭೂತಾಯಿ ಮಡಿಲಲ್ಲೆ ಬೆಳೆಯುವಾ ನಂಟು!
ಚೆಂದಾವೆ ಇಲ್ಲೆಂದು ಹೀಗಳೆಯ ಬೇಡವೋ
ಬಿದಿರೀನ ಗುಣವೆಲ್ಲ ಬೇರೆಲ್ಲಿ ಉಂಟು?|
ಹಟ್ಟಿಯ ಕಟ್ಟಾಲು ನೆಟ್ಟಿಯ ಮಾಡಲು
ಅಕ್ಕಿಯ ಕೇರುವಾ ಮೊರದಲ್ಲಿ ಕಾಣು |
ರೋಗಕ್ಕೆ ಮದ್ದಾಗಿ ಭೋಗಕ್ಕೆ ಬೇಕಾಗಿ
ನಾದಕ್ಕೆ ಶರಣಾಗಿ ಸಿದ್ಧವೀ ವೇಣು॥
ಸರಸತಿಯ ಹಾಳೇಗೆ ನಾವಿಕನ ದೋಣಿಗೆ
ಕಳಲೇಯ ಪಲ್ಯಾವು ಹೊಟ್ಟೆಯ ಒಳಗೆ
ಮಂದೀಯ ಸಲಹುತ್ತ ಬಾಳಿಗೆ ಬೆಳಕಾಗಿ
ಹಸನಾಗಿ ನಿಂತಿಹುದು ಕರೆಯುತ್ತ ಮಳೆಗೆ
ಹುಟ್ಟಾಗ ತೊಟ್ಟಿಲು ಸತ್ತಾಗ ಚಟ್ಟಾವು
ಬೇಕಿಹುದು ನಮಗೆಲ್ಲ ನೀತಿಳಿಯೊ ಸತ್ಯ!
ಬಿದಿರಂತೆ ಬಾಳನ್ನು ಬೆಳಗಿಸೋ ಕಂದಮ್ಮ
ದೇಶಕ್ಕೆ ಉಸಿರಾಗಿ ಹೆಸರಾಗು ನಿತ್ಯ ||
- ಧಾತ್ರೀ ಶ್ರೀಕಾಂತ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق