ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕೃಷಿಯಲ್ಲೇ ಕೈಲಾಸ ಕಾಣುತ್ತಿರುವ ಕಾಯಕ ಜೀವಿ ಬಸಪ್ಪ ವಂಕಲಕುಂಟಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಭೂತಳದಲ್ಲಿ ಹುಡುಕಾಡಿದರೂ ಬೊಗಸೆಯಷ್ಟು ನೀರು ಸಿಗುವುದು ದುರ್ಲಭ ಎನ್ನುವಷ್ಟು ಮಟ್ಟಿಗೆ ಅಂತರ್ಜಲ ಕುಸಿದು ಹೋಗಿರುವ ಗ್ರಾಮ ಕಾಮನೂರು. ಗ್ರಾಮದ ಪಕ್ಕದಲ್ಲೇ ವಿಶಾಲ ಕೆರೆ ಇದ್ದರೂ ನೀರಿಗೆ ಬರ. ಇಂತಲ್ಲಿ ಎರಡು ಎಕರೆ ಖುಷ್ಕಿ ಭೂಮಿ ಹೊಂದಿ ಆಗಾಗ ಬತ್ತಿ ಹೋಗುವ ಪಂಪ್ ಸೆಟ್ ನಂಬಿ ಕೃಷಿಗೆ ಇಳಿದವರು 58ರ ಹರೆಯದ ಬಸಪ್ಪ ವಂಕಲಕುಂಟಿ.

ಹುಟ್ಟಿದಾಗಿನಿಂದ ಕೃಷಿ ಕಾಯಕ ನೋಡುತ್ತಾ ಬೆಳೆದ ಇವರು ಹತ್ತಾರು ವರ್ಷಗಳ ಕಾಲ ಆಕಳು ಮೇಯಿಸುತ್ತಾ ಬೆಳೆದವರು. ತಮ್ಮ 18ನೇ ವಯಸ್ಸಿಗೆ ಕೃಷಿ ಆರಂಭಿಸಿ ಕೃಷಿಯ ಅನೇಕ ಮಜಲುಗಳನ್ನು ಏಳುಬೀಳುಗಳನ್ನು ಅನುಭವಿಸಿದವರು. ಹೊರಹೊಲದ ಬೇಸಾಯ ಮಾಡುತ್ತಾ ಮುಂಗಾರು ಮಳೆಯೊಡನೆ ಸೆಣೆಸಿ ಸಾಕಾಗಿ ಬಸವಳಿದು ಕುಳಿತಾಗ ಅವರ ಕೈ ಹಿಡಿದದ್ದು ಪುಷ್ಪ ಕೃಷಿ. ಹೂವು ಬೆಳೆದು ದಲ್ಲಾಳಿಗಳಿಗೆ ಮಾರಾಟ ಮಾಡುತ್ತಾ ಆ ವ್ಯಾಪಾರದ ಒಳಮರ್ಮ ಅರಿತು ಕ್ರಮೇಣ ತಾವೇ ಹೂವು ಕಟ್ಟಿ ಮಾರಾಟ ಮಾಡಲು ನಿಂತರು.

ಗಿಣಿಗೆರಾ ಸಂತೆ, ಹುಲಿಗೆಮ್ಮನ ದೇವಸ್ಥಾನ ಹೀಗೆ ಎಲ್ಲಿ ಜನ ಸೇರಿದರೆ ಅಲ್ಲಿ ಇವರ ವ್ಯಾಪಾರ. ನಂತರ ಹೂವಿನ ಸಸಿಗಳಿಗೆ ಬೇಡಿಕೆ ಅರಿತು ಇದ್ದ ಹೊಲದಲ್ಲಿ ಅಲ್ಪ ನೀರಿನಲ್ಲಿ ಗಲಾಟೆ, ಚಂಡು, ಕನಕಾಂಬರ ಇತ್ಯಾದಿ ಹೂವಿನ ಸಸಿ ಬೆಳೆಸಿ ಮಾರಲು ಪ್ರಾರಂಭಿಸಿದರು. ವ್ಯವಹಾರ ಕೈಹಿಡಿಯಿತು. ಅದನ್ನೇ ನಿಷ್ಠೆಯಿಂದ ಮಾಡುತ್ತಾ ಕ್ರಮೇಣ ಉಳಿದ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲು ಪ್ರಾರಂಭಿಸಿದರು. ಮೌಲ್ಯವರ್ಧಿತ ಸಿರಿಧಾನ್ಯಕ್ಕೆ ಬೇಡಿಕೆ ಇರುವುದನ್ನು ಅರಿತು ಕ್ರಮೇಣ ಬೇಡಿಕೆಯಂತೆ ಪ್ಯಾಕಿಂಗ್ ಮಾಡಿ ಮನೆ ಮನೆ ತಿರುಗಿ ಮಾರಾಟ ಮಾಡಲು ತೊಡಗಿದವರು ಇಂದು ತಮ್ಮದೇ ಆದ ಗ್ರಾಹಕ ಬಳಗವನ್ನು ಹೊಂದಿದ್ದಾರೆ. ಸಿರಿಧಾನ್ಯಕ್ಕೆ ಬೇಡಿಕೆ ಹೆಚ್ಚಿದಂತೆ ಇತರ ರೈತರನ್ನು ಸಂಘಟಿಸಿ ಅವರಿಗೆ ಬೀಜ ನೀಡಿ ಅವರಿಂದ ಬೆಳೆಸಿ ಅದನ್ನು ಖರೀದಿಸಿ ಮಾರಾಟ ಮಾಡಿ ಲಾಭಾಂಶ ಹಂಚಿಕೊಳ್ಳುವುದು ಅವರಿಗೆ ಕರಗತವಾಗಿದೆ.

ವರ್ಷವಿಡೀ ಒಂದಲ್ಲಾ ಒಂದು ಬೆಳೆಯನ್ನು ಬೆಳೆಯುವುದು, ಬೆಳೆದ ಎಲ್ಲಾ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದು ಹಾಗೂ ತಿಳಿದ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಇತ್ತೀಚೆಗೆ ಕೃಷಿಗೆ ಬರುತ್ತಿರುವ ರೈತರಿಗೆ ಮಾದರಿಯಾಗಿದೆ. ಹಲವು ಯುವ ರೈತರು ಇವರನ್ನು ಕೃಷಿ ಗುರು ಎಂದೇ ಸಂಬೋಧಿಸುತ್ತಾರೆ. ಮನೆಯಿಂದ ಹೆಜ್ಜೆ ಹೊರಗಿಟ್ಟರೆ ಏನಾದರೊಂದು ಆದಾಯ ಗಳಿಸದೇ ಹಿಂದಿರುಗುವುದಿಲ್ಲವೆಂದು ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ. ಕೃಷಿಯಲ್ಲಷ್ಟೇ ಲ್ಲದೇ ನಳಪಾಕದಲ್ಲೂ ಇವರದು ಎತ್ತಿದ ಕೈ. ತಿಂಗಳಿಗೊಮ್ಮೆ ನಡೆಯುವ “ಮಣ್ಣಿನೊಂದಿಗೆ ಮಾತುಕಥೆ” ಕಾರ್ಯಕ್ರಮಕ್ಕೆ ಇವರೇ ಖಾಯಂ ಬಾಣಸಿಗರು.

ತಮ್ಮ ಹೊಲದಲ್ಲಿ ಬೆಳೆದ ಅಥವ ಇತರ ರೈತರಿಂದ ಖರೀದಿಸಿ ತಂದ ಸಿರಿಧಾನ್ಯಗಳನ್ನು ಬಳಸಿ ಇವರು ತಯಾರಿಸುವ ಅನೇಕ ಖಾದ್ಯಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನೂರಾರು ರೈತರ ಜಠರಾಗ್ನಿ ತಣಿಸಿ ಮುಖದಲ್ಲಿ ತೃಪ್ತಿ ತರುತ್ತದೆ. ಪ್ರತಿ ಗುರುವಾರ ನಡೆಯುವ ಕೊಪ್ಪಳ ರೈತ ಮಾರುಕಟ್ಟೆಯಲ್ಲಿ ಬಗೆಬಗೆಯ ಮೌಲ್ಯವರ್ದಿತ ಉತ್ಪನ್ನಗಳಿಂದ ಅಧಿಕ ವಹಿವಾಟು ನಡೆಸುವ ಧೀಮಂತ ರೈತೋದ್ಯಮಿಯು ಇವರೇ.

ಜೇನು ಕೃಷಿಯಲ್ಲಿಯೂ ಪಳಗಿರುವ ಇವರು ಉತ್ತಮ ವಾಗ್ಮಿ. ಹಲವಾರು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕೃಷಿ ಜ್ಞಾನವನ್ನು ಹಂಚಿಕೊಂಡು ಸದಾ ಹಸನ್ಮುಖಿಯಾಗಿರುವ ಇವರನ್ನು ಹಲವಾರು ಪ್ರಶಸ್ಥಿ ಸನ್ಮಾನಗಳು ಅರಸಿಕೊಂಡು ಬಂದಿವೆ. ಇತ್ತೀಚೆಗೆ ಪತ್ರಿಕೆಯೊಂದರ “ಸೂಪರ್ ಸ್ಟಾರ್ ರೈತ” ಪ್ರಶಸ್ಥಿಗೂ ಭಾಜನರಾಗಿದ್ದಾರೆ. ಸದಾ ಲವಲವಿಕೆಯಿಂದ ಮಾತನಾಡುತ್ತಾ ಎಲ್ಲರಲ್ಲೂ ಕೃಷಿಯ ಬಗ್ಗೆ ಒಲವು ಮೂಡಿಸುತ್ತಾ ಇರುವ ಇವರನ್ನು ಮಾತನಾಡಿಸಲು 9481859321 ಸಂಖ್ಯೆಗೆ ಕರೆಮಾಡಿ.

-ಡಾ. ಪಿ. ಆರ್ ಬದರಿಪ್ರಸಾದ್

ಸಹಾಯಕ ಪ್ರಾದ್ಯಾಪಕರು (ಕೀಟಶಾಸ್ತ್ರ)

ಕೃಷಿ ಮಹಾವಿದ್ಯಾಲಯ, ಗಂಗಾವತಿ


Tags: Farmers profile, Progressive farmer, ಕೃಷಿಕನ ಕಥೆ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

أحدث أقدم