ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಅ-ಸಾಮಾನ್ಯರು: ಅಕ್ಷರ ಸಂತ ಹರೇಕಳ ಹಾಜಬ್ಬ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಜೀವನದಲ್ಲಿ ಎದುರಿಸುವ ಸಂಕಷ್ಟಗಳು ಮನುಷ್ಯನನ್ನು ಬದಲಾಯಿಸುತ್ತವೆ. ಎದುರಿಸಿದ ಸಂಕಷ್ಟದ ಪರಿಸ್ಥಿತಿಗಳು ಬದುಕಿನ ಗತಿಯನ್ನು ನಿರ್ಧರಿಸುತ್ತವೆ. ಅನಕ್ಷರಸ್ಥ ವ್ಯಕ್ತಿಯೊಬ್ಬ ವಿದೇಶಿಗರ ಜೊತೆ ವ್ಯವಹರಿಸಿದಾಗ ಎದುರಿಸಿದ ಭಾಷೆಯ ಸಮಸ್ಯೆ ಶಾಲೆಯೊಂದರ ಉಗಮಕ್ಕೆ ಕಾರಣವಾದದ್ದು ಅಕ್ಷರ ಸಂತ ಹರೇಕಳ ಹಾಜಬ್ಬರ ಯಶೋಗಾಥೆ. ಬೀದಿಯಲ್ಲಿ ಕಿತ್ತಲೆ ಮಾರುತ್ತಿದ್ದ ವ್ಯಾಪಾರಿ ತನ್ನೂರಿನ ಮಕ್ಕಳು ತಾನು ಅನುಭವಿಸಿದ ಮುಜುಗರದ ಸನ್ನಿವೇಶ ಎದುರಿಸಬಾರದೆಂದು ಶಾಲೆ ಕಟ್ಟಲು ಹೊರಟು ಇಂದು ತನ್ನ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡ ಮಹಾನುಭಾವ.

ತುತ್ತು ಅನ್ನಕ್ಕಾಗಿ  ಮಂಗಳೂರಿನ ಬೀದಿಗಳಲ್ಲಿ ಬುಟ್ಟಿ ತುಂಬ ಕಿತ್ತಲೆ ತುಂಬಿಕೊಂಡು ಮಾರುತ್ತಿದ್ದ ಹಾಜಬ್ಬರ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಬಡತನ ಇವರನ್ನು ಶಾಲೆಯಿಂದ ದೂರವೇ ಇಟ್ಟಿತು. ಸಹವರ್ತಿಗಳು ಶಾಲೆಯ ಮೆಟ್ಟಿಲು ಹತ್ತಿದರೆ ಹಾಜಬ್ಬರಿಗೆ ತಾಯಿಯ ಜೊತೆ ಬೀಡಿ ಸುತ್ತುವುದು ಅನಿವಾರ್ಯವಾಯಿತು. ಸ್ವಲ್ಪ ಬಲಿತ ಬಾಲಕ ಮುಂದೆ ಬುಟ್ಟಿಯಲ್ಲಿ ಕಿತ್ತಲೆ ತುಂಬಿಕೊಂಡು ಮಂಗಳೂರು ಬಸ್ ಹತ್ತುತ್ತಾನೆ. ಜೀವನ ಪಾಠ ಕಲಿಸುತ್ತದೆ. ಮಂಗಳೂರಿನ ಬೀದಿಗಳಲ್ಲಿ ಬುಟ್ಟಿ ತುಂಬ ಕಿತ್ತಲೆ ತುಂಬಿಕೊಂಡು ಮಾರಲು ಹೊರಟ ಹಾಜಬ್ಬರ ದಿನದ ಸಂಪಾದನೆ 150 ರಿಂದ 200.

ಜೀವನ ಚಕ್ರ ತಿರುಗುತ್ತಿತ್ತು.ಕಿತ್ತಲೆ ಮಾರಿ ಬಂದ ಹಣ ದಿನ ದೂಡಲು ಸಾಕಾಗುತ್ತಿತ್ತು. ಒಮ್ಮೆ ಮಂಗಳೂರಿನ ಬೀದಿಯಲ್ಲಿ ಕಿತ್ತಲೆ  ಮಾರುತ್ತಿದ್ದಾಗ ವಿದೇಶಿ ವ್ಯಕ್ತಿಯೊಬ್ಬ ಇಂಗ್ಲೀಷ್ ನಲ್ಲಿ ಕಿತ್ತಲೆಯ ಬೆಲೆ ಕೇಳುತ್ತಾನೆ. ತೀವ್ರ ಮುಜುಗರಕ್ಕೊಳಗಾದ ಹಾಜಬ್ಬ ನಿರುತ್ತರರಾಗುತ್ತಾರೆ. ಇಂಗ್ಲಿಷ್ ಅರಿಯದ ಅವರಿಗೆ ಉತ್ತರಿಸಲಾಗುವುದಿಲ್ಲ. ಈ ಘಟನೆ ಹಾಜಬ್ಬ ಜೀವನದ ಗತಿ ಬದಲಾಯಿಸಿತು. ತನ್ನ ಅನಕ್ಷರತೆಯೇ ಇದಕ್ಕೆ ಕಾರಣವೆಂರಿತ ಅವರು ತನ್ನೂರಿನಲ್ಲಿ ಶಾಲೆಯೊಂದನ್ನು ಆರಂಭಿಸುವ ಕನಸು ಕಾಣುತ್ತಾರೆ. ತನ್ನಂತೆ ತನ್ನೂರಿನ ಮಕ್ಕಳು ವಿದ್ಯೆ ವಂಚಿತರಾಗಬಾರದು, ಬದಲು ಕಲಿತು ಬುದ್ಧಿವಂತರಾಗಬೇಕೆಂಬ ಪ್ರಾಮಾಣಿಕ ಬಯಕೆ ಅವರದಾಗಿತ್ತು. ದಿನಕ್ಕೆ 150 ರೂ ಸಂಪಾದನೆಯಿದ್ದ ಹಾಜಬ್ಬ ತನ್ನೂರು ಹರೇಕಳದಲ್ಲಿ ಶಾಲೆ ಆರಂಭಿಸ ಹೊರಡುತ್ತಾರೆ.

ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿ, ಶಿಕ್ಷಣಾಧಿಕಾರಿಗಳ ಕಚೇರಿಗೆ ದಿನನಿತ್ಯ ಅಲೆಯುವುದು ಅವರ ದಿನಚರಿಯಾಯಿತು ಈಗ. ಸ್ವಲ್ಪ ದಿನ ಕಿತ್ತಲೆ ವ್ಯಾಪಾರ ಬಿಡುತ್ತಾರೆ. ಹಾಜಬ್ಬ ಕಿರಿಕಿರಿ ಎಂದೆನಿಸಿ ಮೊದಲಿಗೆ ಕಚೇರಿಗಳಿಗೆ ಇವರನ್ನು ಬಿಡುತ್ತಲೇ ಇರಲಿಲ್ಲ. ಆದರೆ ಪ್ರಯತ್ನ ಬಿಡದ ಇವರು ತನ್ನ ಕೆಲಸವಾಗದೆ ಹೊರಡುತ್ತಲೇ ಇರಲಿಲ್ಲ. ಶಾಲೆ ಆರಂಭಿಸಲು ಜಾಗಕ್ಕಾಗಿ ಬೇಡಿಕೆ ಇಡುತ್ತಾರೆ. ಸರ್ಕಾರಿ ಜಾಗವನ್ನು ಅತಿಕ್ರಮಿಸಿದ ವ್ಯಕ್ತಿ ಕೈನಿಂದ ಜಾಗವನ್ನು ವಶಪಡಿಸಿ ಶಾಲೆ ಆರಂಭಿಸಲು ನೀಡುವಂತೆ ಒತ್ತಾಯಿಸುತ್ತಾರೆ. ಕಡೆಗೆ 55 ಸಾವಿರ ನೀಡಿ ಜಾಗವನ್ನು ಶಾಲೆಗೆ ಪಡೆಯುವ ಒಪ್ಪಂದವಾಗುತ್ತದೆ. ತನ್ನ ಉಳಿತಾಯದ 25 ಸಾವಿರ  ಮಾತ್ರ ಹೊಂದಿದ್ದ ಹಾಜಬ್ಬ ಉಳಿದ ಹಣ ಹೊಂದಿಸಲು ಪರದಾಡುತ್ತಾರೆ. ತಲೆ ಮರೆಸಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗುತ್ತದೆ. ಕಡೆಗೆ ಸೈದಾನಿ ಬೀಬಿ ದರ್ಗಾ, ಡಾ.ವೀರೇಂದ್ರ ಹೆಗ್ಗಡೆ, ಖಾಸಗಿ ಕಂಪನಿಗಳ ನೆರವಿನೊಂದಿಗೆ ಜಾಗವನ್ನು ಖರೀದಿಸುತ್ತಾರೆ ಹಾಜಬ್ಬ. ತನ್ನ ಕನಸು ನನಸಾಗುವ ಸಂಭ್ರಮ ಹಾಜಬ್ಬರಿಗೆ ಈಗ. ಇದೇ ಸಮಯ 1999-2000 ಸಾಲಿನಲ್ಲಿ ಪ್ರಾಥಮಿಕ ಶಾಲೆ ಆರಂಭಿಸಲು ಹಾಜಬ್ಬರಿಗೆ ಅನುಮತಿ ದೊರೆಯುತ್ತದೆ.

1999 ಜೂನ್ 6 ರಂದು  ನ್ಯೂ ಪಡ್ಪುವಿನ ಮದರಸಾದ ಸಣ್ಣ ಕೊಠಡಿಯಲ್ಲಿ 28 ಮಕ್ಕಳೊಂದಿಗೆ ಪ್ರಾಥಮಿಕ ಶಾಲೆ ಆರಂಭಗೊಳ್ಳುತ್ತದೆ. ಹಾಜಬ್ಬರ ಕನಸು ಈಡೇರುವ ಸಮಯ ಅದು. ಇಷ್ಟಕ್ಕೆ ಸುಮ್ಮನಾಗದ ಹಾಜಬ್ಬ ಶಾಲೆ ಆರಂಭಿಸಲು ದೊರಕಿದ ಜಾಗದಲ್ಲಿ ಕಟ್ಟಡ ಕಟ್ಟಲು ಹೊರಡುತ್ತಾರೆ. ಹಣ್ಣು ಮಾರಿ ಬಂದ ನಂತರ ಹಾರೆ -ಗುದ್ದಲಿ ಹಿಡಿದು ಜಾಗ ಸಮತಟ್ಟು ಮಾಡುತ್ತಾರೆ. ಕಿತ್ತಲೆ ಮಾರಿ ಉಳಿಸಿದ ಹಣ ಶಾಲೆಯ ಕೆಲಸಕ್ಕೆ ವಿನಿಯೋಗವಾಗುತ್ತದೆ. ಹಣ ಇದ್ದಷ್ಟು ಸಮಯ ಕೆಲಸದವರನ್ನು ಕರೆಯುವ ಹಾಜಬ್ಬ ಆಮೇಲೆ ತಾನೇ ಮೇಸ್ತ್ರಿಯಾಗುತ್ತಾರೆ.

ಇದೇ ವೇಳೆ 2004ರಲ್ಲಿ ಪತ್ರಿಕೆಯೊಂದರ ವರ್ಷದ ವ್ಯಕ್ತಿ ಪ್ರಶಸ್ತಿಗೆ ಹಾಜಬ್ಬ ಆಯ್ಕೆಯಾಗುತ್ತಾರೆ. ಈಗ ಹಾಜಬ್ಬ ಮಹತ್ಕಾರ್ಯ  ದೇಶಕ್ಕೇ ತಿಳಿಯುತ್ತದೆ. ದಾನಿಗಳು ಹಾಜಬ್ಬ ಜೊತೆಗೂಡುತ್ತಾರೆ. ಸುಸಜ್ಜಿತ ಪ್ರಾಥಮಿಕ ಶಾಲಾ ಕಟ್ಟಡ ಹರೇಕಳದಲ್ಲಿ ತಲೆಯೆತ್ತುತ್ತದೆ. ಪ್ರೌಢಶಾಲೆ ಆರಂಭಿಸಲು ಹೊರಡುತ್ತಾರೆ ಹಾಜಬ್ಬ. ಒಮ್ಮೆ ಕೆಲಸ ನಡೆಯುತ್ತಿದ್ದಾಗ ಸಿಮೆಂಟಿಗೆ ನೀರು ಹಾಕಲು ಹೋಗಿ ಆಯತಪ್ಪಿ ಬಿದ್ದ ಹಾಜಬ್ಬ ಆಸ್ಪತ್ರೆಗೆ ದಾಖಲಾಗುತ್ತಾರೆ. ಕೈನಲ್ಲಿದ್ದ ಹಣವೆಲ್ಲ ಶಾಲೆಗೆ ಹಾಕಿದ್ದ ಹಾಜಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲೆ ಚೇತರಿಸಿಕೊಂಡ ಹಾಜಬ್ಬ ಮರಳಿ ಶಾಲೆಯ ಕೆಲಸಕ್ಕೆ ಬರುತ್ತಾರೆ. ಕೆಲಸ ಪೂರ್ತಿಯಾಗುತ್ತದೆ. ಆಗ ಶಾಸಕರಾಗಿದ್ದ ಯು.ಟಿ.ಖಾದರ್ ಪ್ರೌಢಶಾಲೆಗೆ ಮಂಜೂರಾತಿ ದೊರಕಿಸಿ ಕೊಡುತ್ತಾರೆ.

ಕೋಟ್ಯಾಧಿಪತಿಗಳು ಶಿಕ್ಷಣ ಸಂಸ್ಥೆ ನಡೆಸಲು ಪರದಾಡುತ್ತಿರುವಾಗ ಅನಕ್ಷರಸ್ಥ  ಹಾಜಬ್ಬ 2 ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಆರಂಭಿಸುತ್ತಾರೆ. ತನ್ನ ಶಾಲೆಗೆ ಬೇಟಿ ನೀಡಿದ ಪ್ರತಿ ದಾನಿಯ ಹೆಸರು ನೆನಪಿಟ್ಟುಕೊಂಡಿರುವ ಹಾಜಬ್ಬ ಪ್ರತಿ ದಾನಿ ನೀಡಿದ ಕಿರುಕಾಣಿಕೆ ಶಾಲೆಯ ಇತಿಹಾಸ ದಲ್ಲಿ ಒಂದೊಂದು ಮೈಲುಗಲ್ಲು ಎಂದೇ ಭಾವಿಸುತ್ತಾರೆ. ಮಲಗಿದಲ್ಲೇ ಇರುವ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಪೈಂಟರ್ ಮಗನ ಕುಟುಂಬ ಹೊಂದಿರುವ ಹಾಜಬ್ಬ ತನಗೆ ಸಿಕ್ಕಿದ ಪ್ರಶಸ್ತಿ-ಪುರಸ್ಕಾರ-ಗೌರವಗಳ ನಗದನ್ನೆಲ್ಲ ಶಾಲೆಯ ಕಲ್ಲು-ಮರಳು-ಸಿಮೆಂಟಿಗೆ ಉಪಯೋಗಿಸಿದರು. ದಾನಿಗಳು ನೀಡಿದ ಹಣವನ್ನು ತನ್ನ ಸ್ವಂತಕ್ಕೆ ಹೇಗೆ ಉಪಯೋಗಿಸಲಿ ಎನ್ನುವ ಹಾಜಬ್ಬಗೆ ಮಂಗಳೂರಿನ ಕ್ರಿಶ್ಚಿಯನ್ ಸಂಸ್ಥೆಯೊಂದು ಮನೆ ನಿರ್ಮಿಸಿ ಕೊಡುತ್ತದೆ.

2020 ಜನವರಿ 20 ರಂದು ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದಾಗ ಕೇಂದ್ರ ಗೃಹ ಸಚಿವಾಲಯದಿಂದ ಕರೆ ಬಂದಾಗ ಮನೆ ಪಕ್ಕದ ರೇಷನ್ ಅಂಗಡಿಯಲ್ಲಿ ರೇಷನ್ ಗೆ ಕ್ಯೂ ನಿಂತಿದ್ದ ಮುಗ್ದ ಹಾಜಬ್ಬ "ಹಮಾರೆ ಹಿಂದಿ ನಹಿ" ಎಂದು ಹೇಳುತ್ತಾರೆ. ಕೊನೆಗೆ ಹಿಂದಿ ತಿಳಿದಿದ್ದ ಸ್ಥಳೀಯನೊಬ್ಬ ಕರೆ ಸ್ವೀಕರಿಸಿ ಪ್ರಶಸ್ತಿ ಬಂದ ವಿಷಯ ತಿಳಿಸುತ್ತಾನೆ. ಪ್ರಶಸ್ತಿ ಬಂದರೂ ಹಾಜಬ್ಬ ದಿನಚರಿಯೇನೂ ಬದಲಾಗುವುದಿಲ್ಲ. ಇಂದಿಗೂ ಶಾಲೆಯ ಕೊಠಡಿಗಳನ್ನು ಗುಡಿಸಿ, ನೆಲ ಒರೆಸಿಯೇ ಕಿತ್ತಲೆ ಮಾರಲು ತೆರಳುತ್ತಾರೆ ಹಾಜಬ್ಬ.

ಹಾಜಬ್ಬ ಏಕಾಂಗಿ ಸಾಹಸ ಗುರುತಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತದೆ. ಲೇಖಕ ಇಸ್ಮತ್ ಪಜೀರ್ ಬರೆದ ಹರೇಕಳ ಹಾಜಬ್ಬ ಜೀವನ ಚರಿತ್ರೆ ಬಿಡುಗಡೆಗೊಳ್ಳುತ್ತದೆ. BBC ಹಾಜಬ್ಬ ಸಾಧನೆ ಕುರಿತು ವಿಶೇಷ ಲೇಖನ ಪ್ರಕಟಿಸುತ್ತದೆ. CNN-IBN ಮತ್ತು ರಿಲಯನ್ಸ್ ಫೌಂಡೇಶನ್ ಹಾಜಬ್ಬರಿಗೆ "ರಿಯಲ್ ಹೀರೋ" ಎಂದು ಗೌರವಿಸುತ್ತದೆ. ಮಂಗಳೂರು ವಿಶ್ವ ವಿದ್ಯಾಲಯ, ಹಂಪಿ ವಿಶ್ವ ವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಮತ್ತು ಕೇರಳ ಸರ್ಕಾರಗಳು ಪಠ್ಯ ಪುಸ್ತಕಗಳಲ್ಲಿ ಹಾಜಬ್ಬ ಸಾಧನೆ ಬಿಂಬಿಸಿವೆ

"ಒಂದು ರೂಪಾಯಿ ಬೆಲೆ ಬಾಳದ ಮನುಷ್ಯನಿಗೆ ಪದ್ಮಶ್ರೀ, ಒಂದು ರೂಪಾಯಿ ಬೆಲೆ ಬಾಳದ ಮನುಷ್ಯನಿಗೆ ಜನ ಲಕ್ಷಾಂತರ ಹಣ ಕೊಟ್ಟರು. ಅವರಿಗೆ ನಾನು ಎಂದಿಗೂ ಚಿರಋಣಿ" ಎನ್ನುವ ಹರೇಕಳ ಹಾಜಬ್ಬ ಇಂದು ತನ್ನ ನಿಸ್ವಾರ್ಥ ಸಾಧನೆಯಿಂದಾಗಿ  ಎಲ್ಲರಿಗಿಂತ ಎತ್ತರದಲ್ಲಿದ್ದಾರೆ.

ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಪೋಷಕರನ್ನು, ವಿದ್ಯಾರ್ಥಿಗಳನ್ನು ಸುಲಿಯುವವರೆ ತುಂಬಿರುವ ಈಗಿನ ಪ್ರಪಂಚದಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಶಿಕ್ಷಣ ಸೇವೆಗೆಯ್ಯುತ್ತಿರುವವರು "ಅಕ್ಷರ ಸಂತ"ನೆಂದೇ ಕರೆಸಿಕೊಳ್ಳುವ ಹಾಜಬ್ಬ. ಪ್ರಾಮಾಣಿಕ ಪ್ರಯತ್ನದ ಮೂಲಕ ನಮ್ಮ ಕನಸನ್ನು ಈಡೇರಿಸಬಹುದೆಂಬುದಕ್ಕೆ ಇವರ ಜೀವನವೇ ಮಾದರಿ.

-ತೇಜಸ್ವಿ. ಕೆ, ಪೈಲಾರು

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು