******
ರವಿಗೆ ಸುತ್ತಿ ಬರುತಲಿಹೆವು
ಭುವಿಯ ಹತ್ತಿ ಕುಳಿತುಕೊಂಡು
ಯಾವ ಗುರಿಯ ಸೇರುವಂಥ ಭಾವವಿಲ್ಲದೆ.
ನೋವು ನಲಿವು ಇಟ್ಟುಕೊಂಡು
ಸಾವು ಹುಟ್ಟು ತಾಳಿಕೊಂಡು
ಅವನಿಯೊಡನೆ ನಮ್ಮ ಪಯಣ ನಿತ್ಯ ಸಾಗಿದೆ.
ಬರಲಾರೆವು ಎನಲು ಉಂಟೆ
ತೊರೆದು ಅನ್ಯ ಹೋಗಲುಂಟೆ
ಹರಿಯೆ ನಿನ್ನ ಚಿತ್ತದಂತೆ ನಡೆವುದೆಲ್ಲವು.
ಭರದಿ ಇಳೆಯ ಸೆಳೆಯುತಿಹೆಯೊ
ಗುರಿಯನೆತ್ತ ತೋರುತಿಹೆಯೊ
ಕುರಿಯ ಮಂದೆಯಂತೆ ನಮ್ಮ ಪಾಡು ಆಗಿದೆ.
ಗಾಲಿಯಂತೆ ಓಡುತಿಹುದು
ಗೋಲದಂಥ ಬ್ರಹ್ಮಾಂಡವು
ಕಾಲವನ್ನು ಎನಿತು ಹರಣ ಮಾಡದಂತೆಯೇ.
ಹಲವು ಮಿಲಿಯ ಆಕಾಶದ
ಗೋಲಗಳಲಿ ಭುವಿಯು ಒಂದು
ಸಲಹಿ ಜೀವ ರಾಶಿಗಳನು ಸಾಕಿ ಬೆಳೆಸಿದೆ.
ತನ್ನ ಅಕ್ಷದೊಳಗೆ ಸುತ್ತಿ
ತನ್ನತನವ ಎಂದು ಬಿಡದೆ
ತನ್ನ ಮಕ್ಕಳಾದ ನಮ್ಮ ತಪ್ಪು ಸಹಿಸುತ.
ಅನ್ನ ನೀರು ಕೊಟ್ಟ ಮಾತೆ
ಚೆನ್ನಾಗಿಯೆ ಇರುವಂತೆಯೆ
ಇನ್ನಾದರು ಮನುಜರೆಲ್ಲ ನೋಡಬೇಕಿದೆ.
ಇರುವ ಒಂದು ಭುವಿಯ ನಾವು
ಅರಿತು ಉಳಿಸಿಕೊಳ್ಳಬೇಕು.
ಮರೆತರೆಮಗೆ ಧರಣಿ ಎಂದು ಕ್ಷಮಿಸಲಾರಳು.
ನರನ ಆಸೆ ಧರೆಗೆ ಗೊತ್ತು
ದುರಾಸೆಯನು ಸಹಿಸಲವಳು
ಅರಿತುಕೊಂಡು ಪಯಣ ಸುಖವ ಸವಿಯಬೇಕಿದೆ.
***********
ರಚನೆ, ಸಂಗೀತ: ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
ಹಾಡಿದವರು: ನವಮಿ ಗೋಗಟೆ ಮತ್ತು ಶಾರ್ವರಿ ಸಹಸ್ರಬುಧ್ಯೆ
***********
إرسال تعليق